ಪುಣಚ: ಶ್ರೀ ಮಹಿಷಮರ್ದಿನಿ ದೇವಸ್ಥಾನ ಪುಣಚ ಹಾಗೂ ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳ ಪುಣಚ ಇವರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಸಂಭ್ರಮಾಚರಣೆ, ದೀಪೋತ್ಸವ ಹಾಗೂ ದೇವಸ್ಥಾನದ ವಾರ್ಷಿಕ ಬಲೀಂದ್ರ ಪೂಜೆ ಅ.20ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಉಪಸ್ಥಿತಿಯಲ್ಲಿ ಪವಿತ್ರಪಾಣಿ ಜಯರಾಮ ಶಿವತ್ತಾಯರು ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಭವ್ಯ ಮೆರವಣಿಗೆ
ಸಾಯಂಕಾಲ ಪುಣಚ ಪರಿಯಾಲ್ತಡ್ಕ ಪೇಟೆಯಿಂದ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಆಕರ್ಷಕ ವಯೋಲಿನ್, ಚೆಂಡೆ ವಾದನದ ಭವ್ಯ ಮೆರವಣಿಗೆ ದೇವಸ್ಥಾನಕ್ಕೆ ಸಾಗಿ ಬಂದು ದೇವಸ್ಥಾನದ ವಠಾರದಲ್ಲಿ ಕುಣಿತ ಭಜನೆ, ಪಿಲಿ ಕುಣಿತ, ವಯೋಲಿನ್ ಚೆಂಡೆವಾದನ ಸಂಭ್ರಮದಿಂದ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮ
ಬಳಿಕ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ವಿವೇಕಾನಂದ ಮಹಾವಿದ್ಯಾಲಯದ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥೆ ವಿಜಯ ಸರಸ್ವತಿ ಮಾತನಾಡಿ, ನಾವು ಆಚರಿಸುವ ಹಬ್ಬಗಳಿಗೆ ಅದರದ್ದೇ ಆದ ಮಹತ್ವವಿದೆ. ಧ್ಯಾನ ಹಾಗೂ ಯಜ್ಞದ ಮೂಲಕ ದೇವರನ್ನು ಅರ್ಚಿಸಿದರೆ ನಮ್ಮ ಜೀವನದಲ್ಲಿ ಬೆಳಕಿನ ದರ್ಶನವಾಗುತ್ತದೆ. ಮಾನವೀಯ ಚಿಂತನೆಗಳನ್ನು ರೂಢಿಸಿಕೊಂಡರೆ ಜೀವನದಲ್ಲಿ ಸಾರ್ಥಕ ಬೆಳಕು ಪ್ರಜ್ವಲನೆಗೊಳ್ಳುತ್ತದೆ. ಜ್ಞಾನದ ಬೆಳಕನ್ನು ಸಂಸ್ಕೃತಿಯಿಂದ ಉರಿಸುವ ಕೆಲಸ ಆಗಬೇಕು. ಜ್ಞಾನದ, ಧರ್ಮದ, ಸಂಸ್ಕೃತಿಯ, ಶಕ್ತಿಯ ಬೆಳಕು ನಮ್ಮನ್ನು ಜಾಗೃತರನ್ನಾಗಿ ಮಾಡಿ ಸಾರ್ಥಕ ಬದುಕು ಜೀವನದಲ್ಲಿ ಬೆಳಗುವಂತಾಗಲಿ. ದೀಪಾವಳಿಯ ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಮೂಲಕ ನಮ್ಮ ಧರ್ಮ, ಸಂಸ್ಕೃತಿ, ಶಿಷ್ಟಾಚಾರ, ಅಧ್ಯಾತ್ಮದ ಪರಂಪರೆಯ ದರ್ಶನವಾಗಬೇಕು. ಪಾರಂಪರಿಕ ಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆ, ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಮಾಡುವ ಮೂಲಕ ನಾವೆಲ್ಲರೂ ಹಬ್ಬವನ್ನು ಸಂಭ್ರಮಿಸುವ ಎಂದು ಹೇಳಿ ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಎಸ್.ಆರ್. ರಂಗಮೂರ್ತಿ ಮಾತನಾಡಿ ಯುವಕರ ತಂಡ ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಉತ್ತಮ ಸೇವೆಯನ್ನು ನೀಡಿ ಹೆಸರನ್ನು ಗಳಿಸಿದೆ. ಯುವಕರ ಶ್ರಮ ಹಾಗೂ ಸೇವೆ ಅಭೂತಪೂರ್ವಾಗಿ ನಡೆಯುತ್ತಿದ್ದು ದೇವಿಯ ಅನುಗ್ರಹದಿಂದ ಇನ್ನೂ ಉತ್ತಮ ಸೇವೆ ನೀಡಿ ಹೆಸರು ಗಳಿಸುವಂತಾಗಲಿ ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಅಗ್ರಾಳ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪಿ.ಯು. ಕಾಲೇಜು ಉಪನ್ಯಾಸಕಿ ವಿದುಷಿ ಕಾವ್ಯ ಭಟ್ ಪೆರ್ಲ ಮಾತನಾಡಿ ಶುಭ ಹಾರೈಸಿದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಸಿಂಗಾರಿ ಮೇಳದ ಸಮಿತಿ ಅಧ್ಯಕ್ಷ ವಂಶಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳನ್ನು ಸಿಂಗಾರಿ ಮೇಳದ ಸದಸ್ಯರು ಹೂ ನೀಡಿ ಸ್ವಾಗತಿಸಿದರು. ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ತಂಡದ ಸದಸ್ಯರು ಪ್ರಾರ್ಥಿಸಿದರು. ತಂಡದ ಸದಸ್ಯರಾದ ಸೃಜೇಶ್ ಸ್ವಾಗತಿಸಿ, ಕೃತಿಕ್ ವಂದಿಸಿದರು. ಅಜೇಯ್ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಗೂ ಹಲವಾರು ಭಕ್ತಾದಿಗಳು ಪಾಲ್ಗೊಂಡರು. ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳದ ಪದಾಧಿಕಾರಿಗಳು ಹಾಗೂ ಸದಸ್ಯರು ಭಕ್ತಾದಿಗಳನ್ನು ಸ್ವಾಗತಿಸಿ, ಸಹಕರಿಸಿದರು.
ದೀಪೋತ್ಸವ- ಬಲೀಂದ್ರ ಪೂಜೆ
ದೇವಸ್ಥಾನದ ಒಳಾಂಗಣ, ಹೊರಾಂಗಣದಲ್ಲಿ ಏಕಕಾಲದಲ್ಲಿ ಹಣತೆ ದೀಪದ ಪ್ರಜ್ವಲನೆಯ ಮುಖಾಂತರ ಬಲೀಂದ್ರ ಪೂಜೆ, ಚೆಂಡೆಪೂಜೆ ನಡೆದು ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ನಡೆಯಿತು. ಬಳಿಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಯಿತು.