






ಪುತ್ತೂರು: ಮೇಯಲು ಬಿಟ್ಟಿದ್ದ ದನ ಕಳವುಗೊಂಡಿರುವ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಬೋರುಗುಡ್ಡೆ ಎಂಬಲ್ಲಿ ನಡೆದಿದೆ.


ಬೋರುಗಡ್ಡೆ ನಿವಾಸಿ ಈಶ್ವರ ನಾಯ್ಕ್ ಅವರು ಕಳೆದ 10 ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿದ್ದು, 10 ವರ್ಷದ ಒಂದು ಜರ್ಸಿ ದನ ಮತ್ತು ಅದರ ಕರುವನ್ನು ಸಾಕುತ್ತಿದ್ದಾರೆ. ಸದ್ರಿ ದನ ಮತ್ತು ಕರುವನ್ನು ಮೇಯಲು ಅವರ ಮನೆಯ ಬಳಿ ಇರವ ಅಕೇಶಿಯ ಕಾಡಿಗೆ ಬಿಡುತ್ತಿದ್ದರು. ಅದರಂತೆ ಅ.19ರಂದು ಬೆಳಿಗ್ಗೆ 9 ಗಂಟೆಗೆ ಹಟ್ಟಿಯಲ್ಲಿದ್ದ ದನ ಮತ್ತು ಕರುವನ್ನು ಈಶ್ವರ ನಾಯ್ಕ್ ಹಾಗೂ ಅವರ ಪತ್ನಿ ಸೇರಿ ಮನೆಯ ಬಳಿ ಇರುವ ಕಾಡಿಗೆ ಮೇಯಲು ಬಿಟ್ಟಿದ್ದಾರೆ. ದನ ಮತ್ತು ಕರು ಯಾವಾಗಲು ಸಂಜೆ 6 ಗಂಟೆಯ ಸಮಯಕ್ಕೆ ಹಟ್ಟಿಗೆ ಬರುತ್ತಿದ್ದು ಅಂದು ಸಂಜೆ ಕರು ಮಾತ್ರ ಹಟ್ಟಿಗೆ ಬಂದಿದ್ದು ಕರುವಿನ ಕುತ್ತಿಗೆಯಲ್ಲಿ ನೈಲಾನ್ ಹಗ್ಗವೊಂದು ಕಟ್ಟಿಕೊಂಡಿತ್ತು. ಇದರಿಂದ ಈಶ್ವರ ನಾಯ್ಕ್‌ರವರು ಸಂಶಯ ಬಂದು ಕಾಡಿಗೆ ಹೋಗಿ ಎಲ್ಲಾ ಕಡೆ ಹುಡುಕಾಡಿದ್ದರೂ ದನ ಪತ್ತೆಯಾಗಿರುವುದಿಲ್ಲ.ಈ ದನದ ಮೌಲ್ಯ ರೂ.25 ಸಾವಿರ ಆಗಬಹುದು ಎಂದು ಅಂದಾಜಿಸಿದ್ದಾರೆ. ದನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಈಶ್ವರ ನಾಯ್ಕ್‌ರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.













