ರಾಮಕುಂಜ ಆ.ಮಾ.ಶಾಲೆಯಲ್ಲಿ ’ತುಡರ್ ಪರ್ಬ’ ಆಚರಣೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಮತ್ತು ನೇತ್ರಾವತಿ ತುಳುಕೂಟ ರಾಮಕುಂಜ ಇದರ ಆಶ್ರಯದಲ್ಲಿ ನ.5ರಂದು ತುಡರ್ ಪರ್ಬ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರುಗಿತು.


ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಗೋಪೂಜೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ತುಳುನಾಡಿನ ಹಬ್ಬಗಳ ಮಹತ್ವವನ್ನು ಅರಿತು ತಮ್ಮ ಮನೆಗಳಲ್ಲಿ ಆಚರಿಸಬೇಕು. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು ಎಂದರು. ಯುವಜನ ಒಕ್ಕೂಟ ಕಡಬ ಇದರ ಅಧ್ಯಕ್ಷರಾದ ಶಿವಪ್ರಸಾದ್ ರೈ ಮೈಲೇರಿ ಹತ್ಯಾರಿಗೆ ಪೂಜೆ ಸಲ್ಲಿಸಿ ಮಾತನಾಡಿ, ಭೂಮಿ ತಾಯಿಯ ಮಕ್ಕಳಾದ ನಾವು ತುಳುನಾಡಿನ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ. ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕು ನೀಡುವಂತಹ ಹಬ್ಬಗಳನ್ನು ಆಚರಣೆ ಮಾಡುವುದರ ಮೂಲಕ ವಿದ್ಯಾರ್ಥಿಗಳು ಸಂಸ್ಕಾರವಂತ ವ್ಯಕ್ತಿಗಳಾಗಿ ಮೂಡಿಬರಬೇಕೆಂದರು.


ಮುಖ್ಯ ಅತಿಥಿಯಾಗಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷರೂ, ವಕೀಲರೂ ಆದ ಮಹೇಶ್ ಕೆ. ಸವಣೂರು ಮಾತನಾಡಿ, ದೀಪಾವಳಿ ಹಬ್ಬದ ಆಚರಣೆಯ ಮಹತ್ವ ಮತ್ತು ವೈಶಿಷ್ಟವನ್ನು ಪುರಾಣ ಕಥೆಯ ಮೂಲಕ ತಿಳಿಸಿ, ದೀಪಾವಳಿ ಹಬ್ಬವು ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದೆ. ಈ ಹಬ್ಬವು ನಮ್ಮಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ ಸಂತೋಷದ ಜೀವನವನ್ನು ಅನುಭವಿಸುವಂತಾಗಲಿ, ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇಂತಹ ಆಚರಣೆಯ ಮಹತ್ವವನ್ನು ತಿಳಿಸುವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಇನ್ನೋರ್ವ ಅತಿಥಿ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಗಿರೀಶ್ ಎ.ಪಿ. ಮಾತನಾಡಿ, ತುಳುನಾಡಿನಲ್ಲಿ ಆಚರಿಸುವ ಹಬ್ಬಗಳ ವಿಶೇಷತೆಯನ್ನು ಅರಿತು ಜೀವನ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂದರು.


ಸಂಸ್ಥೆಯ ವ್ಯವಸ್ಥಾಪಕ ರಮೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾಭಾರತಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್.ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಲೋಹಿತಾ ಎ ವಂದಿಸಿದರು. ಶಿಕ್ಷಕಿ ಸರಿತಾ ಕಾರ್ಯಕ್ರಮ ಸಂಘಟಿಸಿದರು. ಶಿಕ್ಷಕರಾದ ಸಂಚಿತಾ, ವಸಂತ್, ಪವಿತ್ರ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ – ಶಿಕ್ಷಕೇತರ ವೃಂದದವರು ಸಹಕರಿಸಿದರು. ವಿಶೇಷ ಸುಡುಮದ್ದು ಪ್ರದರ್ಶನ ಕಂಡು ವಿದ್ಯಾರ್ಥಿಗಳು ಆನಂದಿಸಿದರು.

LEAVE A REPLY

Please enter your comment!
Please enter your name here