ಜೈಲಿನಲ್ಲಿ ಮೊಬೈಲ್ ಸಿಗ್ನಲ್ ಜಾಮರ್ ಅಳವಡಿಕೆ: ಮಂಗಳೂರಿನ ವಕೀಲರ ಸಂಘ ದಾವೆ

0

ಖ್ಯಾತ ವಕೀಲ ಪಿ.ಪಿ. ಹೆಗ್ಡೆ ವಾದ-ನೆಟ್‌ವರ್ಕ್ ಸಾಮರ್ಥ್ಯದ ವರದಿಗೆ ಹೈಕೋರ್ಟ್ ಸೂಚನೆ

ಪುತ್ತೂರು: ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಸಿಗ್ನಲ್ ಜಾಮರ್ ಅಳವಡಿಸಿರುವ ಹಿನ್ನೆಲೆಯಲ್ಲಿ ಸುತ್ತಲಿನ ಪ್ರದೇಶದಲ್ಲಿ ಇರುವ ಮೊಬೈಲ್ ನೆಟ್‌ವರ್ಕ್‌ನ ಸಾಮರ್ಥ್ಯವನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಜಾಮರ್ ಅಳವಡಿಸಿರುವುದರಿಂದ ಕಳೆದ ಮಾರ್ಚ್‌ನಿಂದ ಮಂಗಳೂರಿನ ನ್ಯಾಯಾಲಯಗಳ ಸಂಕೀರ್ಣ ಸಹಿತ ಸುತ್ತಲಿನ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಉಂಟಾಗಿರುವ ಬಗ್ಗೆ ಮಂಗಳೂರಿನ ವಕೀಲರ ಸಂಘ ಹೈಕೋರ್ಟಿನಲ್ಲಿ ದಾವೆ ಹೂಡಿತ್ತು. ಇದರ ವಿಚಾರಣೆ ಮಂಗಳವಾರ ಆರಂಭಗೊಂಡಿದೆ. ಸಂಘದ ಪರವಾಗಿ ಖ್ಯಾತ ನ್ಯಾಯವಾದಿ ಪಿ.ಪಿ. ಹೆಗ್ಡೆ ವಾದ ಮಂಡಿಸಿದರು.

ಕಾರಾಗೃಹದಲ್ಲಿರುವ ಕೈದಿಗಳು ಮೊಬೈಲ್ ಬಳಸಬಾರದೆಂಬ ಉದ್ದೇಶದಿಂದ ಜಾಮರ್ ಅಳವಡಿಸಲಾಗಿದೆ. ಆದರೆ ಕೈದಿಗಳಿಗೆ ಮೊಬೈಲ್ ನೆಟ್‌ವರ್ಕ್ ದೊರೆಯುತ್ತಿರುವ ಮಾಹಿತಿ ಇದೆ. ಕಾರಾಗೃಹದ ಹೊರ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಯಿಂದಾಗಿ ನ್ಯಾಯವಾದಿಗಳ ಸಹಿತ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನ್ಯಾಯಾಲಯದ ಕಲಾಪಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿಯೂ ನ್ಯಾಯವಾದಿಗಳಿಗೆ ಅಡ್ಡಿಯಾಗುತ್ತಿದೆ ಎಂದು ಪಿ.ಪಿ. ಹೆಗ್ಡೆ ವಾದಿಸಿದರು.

ವಾದ ಆಲಿಸಿದ ನ್ಯಾಯಮೂರ್ತಿಗಳು ಕಾರಾಗೃಹ, ನ್ಯಾಯಾಲಯ ಹಾಗೂ ಸುತ್ತಲಿನ ಪರಿಸರದಲ್ಲಿ ಇರುವ ಮೊಬೈಲ್ ನೆಟ್‌ವರ್ಕ್ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಿ ವಾರದೊಳಗೆ ತಾಂತ್ರಿಕ ವರದಿಯನ್ನು ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿದರು. ಮುಂದಿನ ವಿಚಾರಣೆಯನ್ನು ನ.18ಕ್ಕೆ ನಿಗದಿಗೊಳಿಸಲಾಗಿದೆ. ಕಾರಾಗೃಹದ ಸುತ್ತಲಿನ 1 ಕಿಲೋ ಮೀಟರ್‌ಗೂ ಹೆಚ್ಚು ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು, ನ್ಯಾಯಾಲಯ ಸಹಿತ ನಗರದ ಕೇಂದ್ರ ಭಾಗದಲ್ಲಿ ದಿನನಿತ್ಯದ ವ್ಯಾಪಾರ, ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ದಾವೆಯಲ್ಲಿ ವಕೀಲರ ಸಂಘ ತಿಳಿಸಿದೆ.

LEAVE A REPLY

Please enter your comment!
Please enter your name here