




ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವದ ಸಭಾಂಗಣಕ್ಕೆ ಬರುವಾಗ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ಘಟನೆ ಡಿ.1ರಂದು ನಡೆದಿದೆ.



ಪ್ರಾರ್ಥನೆ ಸಂದರ್ಭ ಕಣ್ಣೀರಿಟ್ಟ ಪ್ರಸನ್ನ ಮಾರ್ತ
ಪ್ರಾರ್ಥನೆ ವೇಳೆ ಅವರು ಶ್ರೀ ದೇವರ ನಡೆಯಲ್ಲಿ ನಿನ್ನೆ ನಡೆದ ಘಟನೆ ಬಗ್ಗೆ ವಿವರಿಸಿ ‘ನಾನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷನಾಗಿದ್ದು, ಪುತ್ತಿಲ ಪರಿವಾರದಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಹಿಂದು ಸಮಾಜದ ಒಗ್ಗಟ್ಟಿಗಾಗಿ ಸಕ್ರೀಯವಾಗಿ ನಿಷ್ಠೆಯಲ್ಲಿ ಕೆಲಸ ಮಾಡಿದ್ದೇನೆ. ಶ್ರೀನಿವಾಸ ಕಲ್ಯಾಣೋತ್ಸವದ ಚಪ್ಪರಮುಹೂರ್ತ, ಆಮಂತ್ರಣ ಪತ್ರಿಕೆ ವಿತರಣೆ, ಗ್ರಾಮದಲ್ಲಿ ವಿತರಣೆಯಲ್ಲೂ ಭಾಗವಹಿಸಿದ್ದೇನೆ. ಆದರೂ ನಿನ್ನೆ ಕಲ್ಯಾಣೋತ್ಸವ ಸಭಾಂಗಣದಲ್ಲಿ ಕಾರ್ಯಕರ್ತರೋರ್ವರು ನನಗೆ ಮತ್ತು ಪತ್ನಿಗೆ ಒಳ ಹೋಗುವಲ್ಲಿ ತಡೆದು ಅವಮಾನಿಸಿದ್ದಾರೆ’ ಎಂದು ಕಣ್ಣೀರಿಟ್ಟು ಪ್ರಾರ್ಥನೆ ಮಾಡಿದರು.






ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರುವಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಘಟನೆ ವಿವರ
ಈ ಹಿಂದೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಪತ್ನಿ ಸಮೇತ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಸೇವಾಕರ್ತರಿಗೆ ಮೀಸಲಿರಿಸಲಾಗಿದ್ದ ಆಸನದೆಡೆಗೆ ಹೋಗುತ್ತಿದ್ದಂತೆ ಗೇಟ್‌ನಲ್ಲಿದ್ದ ಸ್ವಯಂ ಸೇವಕನೋರ್ವ ಅವರನ್ನು ಮುಂದೆ ಹೋಗದಂತೆ ತಡೆದಾಗ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪ್ರಮುಖರು ಆಗಮಿಸಿ ಪ್ರಸನ್ನ ಮಾರ್ತ ದಂಪತಿಯನ್ನು ಸ್ವಾಗತಿಸಿ, ವಿಶೇಷ ಅತಿಥಿಗಳ ಆಸನದಲ್ಲಿ ಆಸೀನರಾಗಲು ಅವಕಾಶ ಕಲ್ಪಿಸಿಕೊಟ್ಟರು.ಈ ಘಟನೆಗೆ ಸಂಬಂಧಿಸಿ ‘ಪ್ರಸನ್ನ ಮಾರ್ತ ಅವರನ್ನು ಹೊರ ದಬ್ಬಿದ ಪುತ್ತಿಲ ಪರಿವಾರ’ ಎಂದು ವೆಬ್‌ಸೈಟ್ ಒಂದರಲ್ಲಿ ವರದಿ ಪ್ರಸಾರವಾಗಿದೆ.ಈ ಕುರಿತು ಪ್ರಸನ್ನ ಮಾರ್ತ ಅವರನ್ನು ‘ಸುದ್ದಿ’ ಸಂಪರ್ಕಿಸಿದಾಗ, ‘ನಾನು ಪತ್ನಿ ಸಮೇತ ಸಭಾಂಗಣದ ಒಳಗೆ ಬಂದಾಗ ಗೇಟ್‌ನಲ್ಲಿದ್ದ ಚಂದ್ರಶೇಖರ್ ಜಿಡೆಕಲ್ಲು ಎಂಬವರು ನಮಗೆ ಒಳಗೆ ಹೋಗಲು ಅಡ್ಡಿಪಡಿಸಿದರು. ಸತ್ಯದ ಜಾಗದಲ್ಲಿ ಆ ರೀತಿಯ ವರ್ತನೆ ಸರಿಯಲ್ಲ ಈ ಸಂದರ್ಭ ಪರಿವಾರದ ರಾಜು ಶೆಟ್ಟಿ, ಸನ್ಮಿತ್, ಅಜಿತ್, ಮಹೇಂದ್ರ ವರ್ಮ ಅವರು ಬಂದು ನಮ್ಮನ್ನು ವೇದಿಕೆಯ ಮುಂದೆ ಕರೆದುಕೊಂಡು ಬಂದು ಕೂರಿಸಿದರು.ನನಗೆ ಅವಮಾನ ಆಗಿರುವ ಹಿನ್ನೆಲೆಯಲ್ಲಿ ಮನಸ್ಸಿಲ್ಲದೆ ವಾಪಸ್ ಹೋಗಲು ಹೊರಟೆನಾದರೂ ಶ್ರೀನಿವಾಸ ಕಲ್ಯಾಣ ಆಗಲಿ ಎಂದು ಕುಳಿತೆ.ಪ್ರವೀಣ್ ಶೆಟ್ಟಿ ತಿಂಗಳಾಡಿ, ನವೀನ್ ರೈ ಪಂಜಳ, ಹರೀಶ್ ಮರುವಾಳ ಅವರು ನಮ್ಮಲ್ಲಿಗೆ ಬಂದು ಸಮಾಧಾನಿಸಿದರು’ ಎಂದು ತಿಳಿಸಿದ್ದಾರೆ.










