




ದೇಹ ದಂಡಿಸಿ ಪುಣ್ಯ ಕ್ಷೇತ್ರ ಸಂದರ್ಶನ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿ-ದೇವಿಪ್ರಸಾದ್ ಶೆಟ್ಟಿ



ಕಡಬ: ವಿಶ್ವ ಹಿಂದೂ ಪರಿಷದ್ ಕಡಬ ಪ್ರಖಂಡ ವತಿಯಿಂದ ನಮ್ಮ ನಡೆ ಕುಕ್ಕೆ ಸುಬ್ರಹ್ಮಣ್ಯ ನೆಡೆಗೆ 8ನೇ ವರ್ಷದ ಪಾದಾಯಾತ್ರೆ ಹಾಗೂ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.






ಪೂರ್ವಾಹ್ನ ಕಡಬದಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಳ್ಳಲಾಯಿತು. ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಪಾದಯಾತ್ರೆಗೆ ಕೆ. ಪ್ರಸಾದ್ ಕೆದಿಲಾಯ ಅವರು ಚಾಲನೆ ನೀಡಿದರು. ಬಳಿಕ ಕಡಬ ಭಾಗದ ಭಕ್ತರು ಕುಕ್ಕೆಗೆ ಪಾದಯಾತ್ರೆ ಕೈಗೊಂಡರು. ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿಯವರು ಮಾತನಾಡಿ, ಪಾದಯಾತ್ರೆ ಮೂಲಕ ದೇಹವನ್ನು ದಂಡಿಸಿ ಪುಣ್ಯಕ್ಷೇತ್ರ ಸಂದರ್ಶನ ಮಾಡಿದಾಗ ಅದರಿಂದ ನಮಗೆ ದೇವರ ಅನುಗ್ರಹ ಖಂಡಿತಾ ಲಭಿಸುತ್ತದೆ. ದೇಹ ದಂಡನೆ ಮೂಲಕ ಮಾಡಿದ ಪ್ರಾರ್ಥನೆಯಿಂದ ಸಾರ್ಥಕತೆ ಅರಿವಾಗುತ್ತದೆ. ಈ ಮೂಲಕ ಕಡಬ ಪ್ರಖಂಡ ವಿ.ಹಿಂ.ಪ. ನಿಂದ ಉತ್ತಮ ಕಾರ್ಯ ಪ್ರತಿ ವರ್ಷ ನಡೆಯುತ್ತಿದೆ. ಇದರಿಂದ ಧರ್ಮ ಜಾಗೃತಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಕಾರ್ಯ ಶ್ಲಾಘನಿಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮಾತನಾಡಿ, ತಾವುಗಳು ಬೆಳೆದ ತರಕಾರಿ, ಬೆಳೆಗಳನ್ನು ಕುಕ್ಕೆಗೆ ಸಮರ್ಪಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತೀರಿ. ವರ್ಷದಿಂದ ವರ್ಷಕ್ಕೆ ಕ್ಷೇತ್ರಕ್ಕೆ ಹಸಿರು ಕಾಣಿಕೆ ಸಮರ್ಪಣೆ ಹೆಚ್ಚಳವಾಗುತ್ತಿದೆ. ಕ್ಷೇತ್ರದ ವತಿಯಿಂದಲೂ ಸ್ಥಳೀಯವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ವರ್ಷಪೂರ್ತಿ ಸಾಮಾಗ್ರಿಗಳನ್ನು ಒದಗಿಸಲಾಗುತ್ತದೆ. ಅದರ ನೆನಪಿಗಾಗಿ, ಕೃತಜ್ಞತಾ ಭಾವದಿಂದ ಭಕ್ತರು ಕ್ಷೇತ್ರಕ್ಕೆ ಹಸಿರು ಕಾಣಿಕೆ ಸಮರ್ಪಿಸುತ್ತಾರೆ ಎಂದು ಭಾವಿಸುತ್ತೇನೆ ಎಂದರು.
ಪ್ರಮುಖರಾದ ವಾಸುದೇವಾ ಭಟ್ ಕಡ್ಯ, ಅಶೋಕ್ ಮೂಲೆಮಜಲು, ಶಿವರಾಮ ಶೆಟ್ಟಿ ಕೇಪು, ರಾಜೇಶ್ ಎನ್.ಎಸ್. ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಮೀಳಾ ಲೋಕೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಶೆಟ್ಟಿ ಸಾಯಿರಾಮ್ ವಂದಿಸಿದರು. ಬಳಿಕ ಭಕ್ತರು ಕ್ಷೇತ್ರಕ್ಕೆ ಹೊರೆಕಾಣಿಕೆ ಸಮರ್ಪಿಸಿ, ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಪಾದಯಾತ್ರೆ ಸಾಗಿದ ಮರ್ದಾಳ, ಕಲ್ಲಾಜೆ, ಬಿಳಿನೆಲೆ, ನೆಟ್ಟಣ, ಕೈಕಂಬ, ಕುಮಾರಧಾರ ಭಾಗದಲ್ಲಿ ಪಾದಯಾತ್ರಿಗಳಿಗೆ ಉಪಹಾರ ಪಾನಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ ತಂಡದವರಿಂದ ಭಜನೆ ನಡೆಯಿತು.







