




ಹಠ, ಛಲದ ಬದುಕು ನಮ್ಮದಾದ್ದಲ್ಲಿ ಸಾಧನೆ ಸಾಧ್ಯ: ಅಶೋಕ್ ಕುಮಾರ್ ರೈ



ಉಪ್ಪಿನಂಗಡಿ: ವಿದ್ಯಾರ್ಥಿಗಳು ಹಿಂಜರಿಕೆ, ನಾಚಿಕೆಯನ್ನು ಬಿಟ್ಟು ಛಲ, ಹಠ ಹಿಡಿದು ಸಾಧನೆ ಬಗ್ಗೆ ಕನಸು ಕಾಣಬೇಕು. ಹಾಗಾದಾಗ ಮಾತ್ರ ಏನನ್ನೂ ಸಾಧಿಸಲು ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.






ವಿವೇಕ ಯೋಜನೆಯಡಿ 78 ಲಕ್ಷ ರೂ. ವೆಚ್ಚದಲ್ಲಿ ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಿರ್ಮಾಣವಾದ 6 ನೂತನ ಕೊಠಡಿಗಳನ್ನು ಹಾಗೂ ಕಾಲೇಜಿನ ಪ್ರತಿಭಾ ಪುರಸ್ಕಾರ ಸಂಭ್ರಮ-2025ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಪದವಿ ಪೂರ್ವ ಕಾಲೇಜುಗಳ ಪೈಕಿ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಮತ್ತು ಅತೀ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆ ಹೊಂದುವ ವಿದ್ಯಾರ್ಥಿಗಳು ಇರೋದು ಈ ಕಾಲೇಜಿನಲ್ಲಿ. ಇದು ನನಗೆ ಹೆಮ್ಮೆ ತರುವ ವಿಚಾರವಾಗಿದೆ. ಹೀಗಾಗಿ ಈ ಕಾಲೇಜಿಗೆ ಕಳೆದ ಸಾಲಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಇದೀಗ ಮತ್ತೆ ಆರು ಕೊಠಡಿಗಳ ನಿರ್ಮಾಣವಾಗಿದೆ. ಇಲ್ಲಿಯ ಕೊಠಡಿ ಸಮಸ್ಯೆ ಪರಿಹಾರವಾಗಿದೆ. ವಿದ್ಯಾರ್ಥಿಗಳು ಸಾಧನೆ ತೋರುವ ಮೂಲಕ ಇದರ ಉಪಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಕಲಿಕೆಯ ಮೂಲಕ ತಮ್ಮ ಮುಂದಿನ ಭವಿಷ್ಯ ರೂಪಿಸಬೇಕಾಗಿದ್ದು, ನನ್ನಿಂದ ಯಾವುದೂ ಆಗುವುದಿಲ್ಲ ಎಂದು ಭಾವಿಸಬಾರದು. ಸಾಧನೆಗಾಗಿ ಮುಂದೆ ಬರಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ದಿನನಿತ್ಯ 1 ಇಂಗ್ಲಿಷ್ ಪತ್ರಿಕೆಯೊಂದಿಗೆ ಕನ್ನಡ ಪತ್ರಿಕೆಗಳನ್ನು ಓದಬೇಕು, ಆಗ ಜ್ಞಾನ ಶಕ್ತಿ ವೃದ್ಧಿಯಾಗುತ್ತದೆ ಎಂದರು.
ಶೀಟು ಅಳವಡಿಸಲು 5 ಲಕ್ಷ ರೂಪಾಯಿ:
ಕಾಲೇಜಿನ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕ್ಕಾರ್ ಮಾತನಾಡಿ, ಶಾಸಕರ ಮೂಲಕ ಇಲ್ಲಿನ ಬಹಳಷ್ಟು ಸಮಸ್ಯೆಗಳು ದೂರವಾಗಿದೆ. ಕಾಲೇಜಿಗೆ ಅಗತ್ಯ ಕೊಠಡಿ ನಿರ್ಮಾಣವಾಗಿದ್ದು, ಮುಂದಿನ ಹಂತದಲ್ಲಿ ಕಾರ್ಯಕ್ರಮ ಮಾಡುವಾಗ ಅನುಕೂಲವಾಗುವ ನಿಟ್ಟಿನಲ್ಲಿ ಖಾಯಂ ಆಗಿ ಶೀಟ್ ಅಳವಡಿಸಲು ಅನುದಾನ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು 5 ಲಕ್ಷ ರೂಪಾಯಿ ಅನುದಾನ ನೀಡುವ ಬಗ್ಗೆ ಭರವಸೆ ನೀಡಿದರು.
ಆಸರೆ ಯೋಜನೆಯಲ್ಲಿ ಉಚಿತ ಶಿಕ್ಷಣ:
ಕಾಲೇಜಿನ ಪ್ರಾಚಾರ್ಯ ಇಬ್ರಾಹಿಂ ಮಾತನಾಡಿ, ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಿದ್ದು, 322 ಗಂಡು ಮಕ್ಕಳು ಹಾಗೂ 449 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 771 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 2024-25ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 87%, ವಾಣಿಜ್ಯ ವಿಭಾಗದಲ್ಲಿ 98%, ವಿಜ್ಞಾನ ವಿಭಾಗದಲ್ಲಿ 99% ಫಲಿತಾಂಶ ದಾಖಲಾಗಿದೆ. ಹಲವಾರು ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕಾಲೇಜಿಗೆ ಹೆಸರು ತಂದು ಕೊಟ್ಟಿರುತ್ತಾರೆ. ಕಾಲೇಜಿಗೆ ಗ್ರಾಮೀಣ ಪ್ರದೇಶದ ಬಡವರ, ಕೂಲಿ ಕಾರ್ಮಿಕರ ಮಕ್ಕಳು ಬರುವವರಾಗಿದ್ದು, ಖಾಸಗಿ ಕಾಲೇಜಿಗೆ ಸವಾಲು ಒಡ್ಡುವ ರೀತಿಯಲ್ಲಿ ಕಾಲೇಜು ಅಭಿವೃದ್ಧಿ ಹೊಂದುತ್ತಿದೆ. ಈ ಎಲ್ಲಾ ದೃಷ್ಟಿಯಿಂದ ತಂದೆ, ತಾಯಿ ಇಲ್ಲದೆ ಅನಾಥವಾಗಿರುವ ಮಕ್ಕಳಿಗೆ ಕಾಲೇಜಿನ ಶುಲ್ಕ, ಸಮವಸ್ತ್ರ, ಉಚಿತ ಬಸ್‌ಪಾಸ್ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಉಚಿತ ಶಿಕ್ಷಣ ನೀಡುವ ಸಲುವಾಗಿ “ಆಸರೆ ಯೋಜನೆ”ಯೊಂದನ್ನು ರೂಪಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ಚಂದ್ರಹಾಸ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಯು.ಟಿ. ತೌಸೀಫ್, ಕೆ. ಅಬ್ದುಲ್ ರಹಿಮಾನ್, ಅಬ್ದುಲ್ ರಶೀದ್ ಮಠ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ವಿಕ್ರಂ ಶೆಟ್ಟಿ ಅಂತರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವೆಂಕಪ್ಪ ಪೂಜಾರಿ, ಅನಿ ಮಿನೇಜಸ್, ಆದಂ ಕೊಪ್ಪಳ, ನಝೀರ್ ಮಠ, ಜಯಕುಮಾರ ಪೂಜಾರಿ, ಗುಣವತಿ ಉಪಸ್ಥಿತರಿದ್ದರು.
ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ದೇವಕಿ ವಂದಿಸಿದರು. ಶಿಕ್ಷಕಿ ನವ್ಯಶ್ರೀ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು.







