






ಕಡಬದಿಂದ ಕೇಪು ತನಕ ಅದ್ದೂರಿ ಮೆರವಣಿಗೆ | ವಾಹನ ಜಾಥ


ಕಡಬ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನೇತ್ರಾವತಿ ತುಳು ಕೂಟ ರಾಮಕುಂಜ ಹಾಗೂ ತೆಗ್‌ರ್ ತುಳು ಕೂಟ ನೂಜಿಬಾಳ್ತಿಲ ಇವರ ಆಶ್ರಯದಲ್ಲಿ ಡಿ.21ರಂದು ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀಜನಾರ್ದನ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳಕ್ಕೆ ಡಿ.20ರಂದು ಸಂಜೆ ಅದ್ದೂರಿ ಮೆರವಣಿಗೆ ಮೂಲಕ ಕಡಬದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.




ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಕೇಪು ಶಿವರಾಮ ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕರ್ಕೇರ ಅವರು ತುಳು ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ತುಳು ಧ್ವಜ ಬೀಸುವ ಮೂಲಕ ಮೆರವಣಿಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ತಮನ್ನಾ ಜಬೀನ್ ಅವರು, ತುಳು ಭಾಷೆ ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ, ಅದು ತುಳುನಾಡಿನ ಮಣ್ಣಿನ ಭಾಷೆಯಾಗಿದ್ದು ಈ ಮಣ್ಣಿನ ಸಂಸ್ಕೃತಿಯ ಪ್ರತೀಕವಾಗಿದೆ, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲಾ ಶ್ರಮಿಸಬೇಕು ಎಂದರು.

ಸಮ್ಮೇಳನಾಧ್ಯಕ್ಷ ಕೆ.ಸೇಸಪ್ಪ ರೈ ರಾಮಕುಂಜ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ, ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ಆಂಜನೇಯ ದೇವಸ್ಥಾನದ ಆಡಳಿತ ಮೊಕ್ತೇಸರರೂ ಆದ ಶಿವರಾಮ ಶೆಟ್ಟಿಯವರಿಗೆ ಪೇಟ, ಹಾರಾರ್ಪಣೆ ಮಾಡಿ ಗೌರವಿಸಿ ತುಳುಮಾತೆಯ ಭಾವಚಿತ್ರದೊಂದಿಗೆ ಶೃಂಗರಿಸಲಾದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅವರನ್ನು ಸಮ್ಮೇಳನ ನಡೆಯುವ ಕೇಪು ದೇವಸ್ಥಾನದ ಸಭಾಂಗಣಕ್ಕೆ ಕರೆ ತರಲಾಯಿತು. ಇದರ ಜೊತೆಗೆ ಹಸಿರು ಹೊರೆಕಾಣಿಕೆಯೂ ಸಮರ್ಪಣೆಯಾಯಿತು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳ ಸ್ಕೌಟ್ಸ್ ಮತ್ತು ಗೈಡ್ಸ್ ತಂಡ, ಚಾರ್ವಾಕ ಸಿಂಗಾರಿ ಮೇಳದ ಕೊಲ ಘಟಕದ ಯುವಕರ ಚೆಂಡೆ ವಾದನ ಮೆರವಣಿಗೆಗೆ ಮೆರಗು ನೀಡಿತು. ದ್ವಿಚಕ್ರ, ರಿಕ್ಷಾ, ಕಾರು ಹಾಗೂ ಇತರೇ ವಾಹನಗಳು ಮೆರವಣಿಗೆಯಲ್ಲಿ ಕೇಪು ದೇವಸ್ಥಾನ ತನಕ ಸಾಗಿಬಂತು.

ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ರೆಂಜಿಲಾಡಿಬೀಡು, ಕಡಬ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಉದ್ಯಮಿ ಕೇಶವ ಅಮೈ, ಕಾಂಗ್ರೆಸ್ ಮುಖಂಡ ಸತೀಶ್ ನಾಕ್ ಮೇಲಿನಮನೆ, ತುಳು ಸಮ್ಮೇಳನ ಸ್ವಾಗತ ಸಮಿತಿ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಮ್, ಉಪಾಧ್ಯಕ್ಷರಾದ ಜನಾರ್ದನ ಗೌಡ ಪಣೆಮಜಲು, ಪ್ರಧಾನ ಕಾರ್ಯದರ್ಶಿ ಗಿರಿಶಂಕರ ಸುಲಾಯ, ಕಾರ್ಯದರ್ಶಿಗಳಾದ ಸರಿತಾ ಜನಾರ್ದನ, ಕಿಶೋರ್ ಕುಮಾರ್ ಬಿ., ಜೊತೆ ಕಾರ್ಯದರ್ಶಿಗಳಾದ ದಯಾನಂದ ಪುರಿಯ, ಪ್ರೇಮ ರಾಮಕುಂಜ, ಸುರೇಶ್ ದೇಂತಾರು, ಕೋಶಾಧಿಕಾರಿಗಳಾದ ರಮ್ಯ ರಾಮಕುಂಜ, ವಾಸುದೇವ ಗೌಡ ಕೇಪುಂಜ, ವಿವಿಧ ಸಮಿತಿ ಪದಾಧಿಕಾರಿಗಳಾದ ಶಿವರಾಮ ಏನೆಕಲ್ಲು, ಚೇತನ್ ಆನೆಗುಂಡಿ, ಸತೀಶ್ ಭಟ್ ಬಿಳಿನೆಲೆ, ಬಾಲಚಂದ್ರ ಮುಚ್ಚಿಂತಾಯ, ಪದ್ಮಪ್ಪ ಗೌಡ ರಾಮಕುಂಜ, ವಿಠಲ ರೈ ಕೊಣಾಲುಗುತ್ತು ಆಲಂಕಾರು, ಪೀರ್‌ಮೊಹಮ್ಮದ್ ಸಾಹೇಬ್ ಆಲಂಕಾರು, ಬಿ.ಎಲ್.ಜನಾರ್ದನ ಆಲಂಕಾರು, ರಾಧಾಕೃಷ್ಣ ಕೋಲ್ಪೆ, ಗುರುರಾಜ್ ರೈ ಕೇವಳ, ರಮೇಶ್ ರೈ ರಾಮಮಜಲು, ಸತೀಶ್ ರೈ ಕರ್ಮೇಣ, ಹರೀಶ್ ರೈ ಹಳ್ಳಿ ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚೆನ್ನಕೇಶವ ರೈ ಗುತ್ತುಪಾಲು ಸ್ವಾಗತಿಸಿದರು. ಶಿವಪ್ರಸಾದ್ ರೈ ಮೈಲೇರಿ ನಿರೂಪಿಸಿದರು.

ಇಂದು ಉದ್ಘಾಟನೆ/ವಿವಿಧ ಗೋಷ್ಠಿ;
ಡಿ.21ರಂದು ಕೇಪು ದೇವಸ್ಥಾನದ ಸಭಾಂಗಣದಲ್ಲಿ ಸಮ್ಮೇಳನಾಧ್ಯಕ್ಷ ಕೆ.ಸೇಸ್ಪಪ ರೈ ರಾಮಕುಂಜ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಸಮ್ಮೇಳನ ನಡೆಯಲಿದೆ. ಸಂಜೆ ತನಕ ನಡೆಯುವ ಸಮ್ಮೇಳನದಲ್ಲಿ ವಿವಿಧ ವಿಚಾರಗೋಷ್ಠಿ, ಕಥಾಗೋಷ್ಠಿ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ತುಳುನಾಡಿನ ಸಂಸ್ಕೃತಿ ಬಿಂಬಿಸುವ ವಿವಿಧ ಕುಲಕಸುಬುಗಳ ಪ್ರದರ್ಶನ, ಮಾರಾಟ ನಡೆಯಲಿದೆ.










