ಹೊಸ ವರುಷ ಭಾವಿಸಿಕೊಂಡಷ್ಟು ಬದಲಾವಣೆ ತರಲಾಗದಿದ್ದರೂ ಗೋಡೆಯಲ್ಲಿ ನೇತು ಬಿದ್ದಿರುವ ಕ್ಯಾಲೆಂಡರ್ ಬದಲಾಗುವುದಂತೂ ಗ್ಯಾರೆಂಟಿ

0

@ಕಾಕೂ

ನಮ್ಮ ಬದುಕಿನಲ್ಲಿ ಅಥವಾ ಸುತ್ತ ಮುತ್ತ ನಡೆಯುತ್ತಿರುವ, ಜನನ, ಮರಣ, ವಿವಾಹ, ಕೆಲಸ, ಶಾಲೆ ಏನೇ ಆಗಲಿ ಕ್ಯಾಲೆಂಡರ್ ಕಡೆಗೊಮ್ಮೆ ನೋಡುವುದು ಅಭ್ಯಾಸ. ಅದು ಈಗಾಗಲೇ ಗತಿಸಿ ಹೋದ ವಿಷಯವಾಗಿದ್ದರೆ ಬರೆದಿಡಲು, ಮುಂದೆ ನಡೆಯುವಂಥದ್ದಾಗಿದ್ದರೆ ಪ್ಲ್ಯಾನ್ ಮಾಡಲು ನಮಗೊಂದು ಕ್ಯಾಲೆಂಡರ್ ಬೇಕು.
ಯೇಸು ಕ್ರಿಸ್ತನ ಜನನದಿಂದ ಇದು ಆರಂಬಿಸಿದೆಂದು ಕೆಲವರು ಭಾವಿಸಿದ್ದಾರೆ. ಆದರೆ ಅದು ಹಾಗಲ್ಲ. ಕ್ರಿಶ್ಚಿಯನ್ ಸಂತರಾಗಿದ್ದ ದಯೋನಿಸಸ್ ಎಕ್ಸಿಗೊಸ್ (Dionysius Exigus) ಎಂಬವರು, ರೋಮನ್ ಕ್ಯಾಲೆಂಡರಿನ 753ನೇ ವರ್ಷದಲ್ಲಾಗಿತ್ತು ಜೀಸಸ್ ಕ್ರಿಸ್ಟ್ ಜನನ ಎಂದರು. ಆ ಕಾರಣಕ್ಕೆ ಅದೇ ವರ್ಷವನ್ನು ಗ್ರಿಗೋರಿಯನ್ ಕ್ಯಾಲೆಂಡರ್‌ನ ಒಂದನೇ ವರ್ಷವಾಗಿ ಲೆಕ್ಕ ಹಾಕಲಾಯಿತು.

ಕ್ಯಾಲೆಂಡರ್‌ಗಳಿಗೆ ಸಹಸ್ರಮಾನಗಳಷ್ಟು ಸುದೀರ್ಘವಾದ ಶ್ರಮ, ನಾಟಕೀಯತೆ ಹಾಗೂ ಅಧ್ಯಯನಾತ್ಮಕ ಚರಿತ್ರೆಯಿದೆ.
ನಮ್ಮ ನಿತ್ಯ ಬದುಕಿನ ಆಗುಹೋಗುಗಳಲ್ಲಿ ತಳುಕು ಹಾಕಿಕೊಂಡು, ನೇತು ಬಿದ್ದಿರುವ ಈ ಕ್ಯಾಲೆಂಡರ್‌ಗಳ ಸುತ್ತ ಸಣ್ಣದೊಂದು ಸುತ್ತು ಹೊಡೆದು ಬರೋಣ.
ನಮಗೆಲ್ಲ ಹೆಚ್ಚಿನ ಮಟ್ಟಿಗೆ ಪರಿಚಯವಿರುವುದು ಪ್ರಮುಖವಾಗಿ ಜ್ಯೂಲಿಯನ್ ಮತ್ತು ಈಗ ಪರಿಷ್ಕೃತ ರೂಪದಲ್ಲಿ ಬಳಕೆಯಲ್ಲಿರುವ ಗ್ರಿಗೋರಿಯನ್ ಕ್ಯಾಲೆಂಡರ್. ಆದರೆ ಇನ್ನೂ ಅನೇಕ ಪ್ರಯತ್ನಗಳು ಈ ಹಾದಿಯಲ್ಲಿ ನಡೆದಿವೆ. ಈಜಿಪ್ಶಿಯನ್ ಕ್ಯಾಲೆಂಡರ್, ಚೀನಾ ಕ್ಯಾಲೆಂಡರ್, ಮಯಾ ಕ್ಯಾಲೆಂಡರ್, ಬ್ಯಾಬಿಲೋನಿಯನ್, ಹೀಬ್ರೂ, ಪ್ರೆಂಚ್, ಹಿಜರಿ ಕ್ಯಾಲೆಂಡರ್, ಸೌದಿ, ಪರ್ಷಿಯ, ಕುವೈಟ್ ಕ್ಯಾಲೆಂಡರ್‌ಗಳೊಂದಿಗೆ ನಮ್ಮ ಶೃಂಗೇರಿಯೂ ಕ್ಯಾಲೆಂಡರ್ ಸಿದ್ದಪಡಿಸುತ್ತಿತ್ತು.


ನಾವೀಗ ವ್ಯಾಪಕವಾಗಿ ಬಳಸುತ್ತಿರುವ ಕ್ಯಾಲೆಂಡರ್ ನ ಮೂಲರೂಪ ದೊರಕಿದ್ದು ರೋಮ್ನಲ್ಲಿ. ಲ್ಯಾಟಿನ್ ಭಾಷೆಯಲ್ಲಿ ಕ್ಯಾಲರ್ ಅಂದರೆ ಕೂಗಿ ಹೇಳುವುದು ಎಂದರ್ಥ. ಸಾಲ ಕೊಡುವ ಮತ್ತು ತೆಗೆದುಕೊಳ್ಳುವ ವಿವರ ಬರೆಯುವ ಪುಸ್ತಕವನ್ನು ಅಲ್ಲಿ ಕ್ಯಾಲೆಂಡರ್ ಎಂದು ಕರೆಯುತ್ತಿದ್ದರು. ಇದು ದಿನಗಳನ್ನು ಜೋಡಿಸುವ ಪಟ್ಟಿಯಾಗಿ ಕ್ರಮೇಣ ಸಾರ್ವತ್ರಿಕವಾಗಿ ಬಳಕೆಗೆ ಬಂತು. ರೋಮನ್ ಸಾಮ್ರಾಟ ರೋಮ್ಯುಲಸ್ ಆರಂಭಿಸಿದ ಈ ಕ್ಯಾಲೆಂಡರ್ ನಲ್ಲಿ ಆಗ ಹತ್ತು ತಿಂಗಳಷ್ಟೇ ಇದ್ದರೂ, ಕ್ರಿ. ಪೂ. 715ರಿಂದ 673 ರ ಮಧ್ಯ ರೋಮನ್ ಸಾಮ್ರಾಜ್ಯ ಆಳಿದ ನ್ಯೂಮಾ ಪಾಂಪಿಲಿಯಸ್ ಎರಡು ತಿಂಗಳು ಸೇರಿಸಿ ಹನ್ನೆರಡು ತಿಂಗಳು ಮಾಡಿದ. ಅದರಲ್ಲಿದ್ದ ಒಂದು ಅಧಿಕಮಾಸವನ್ನು ಸೇರಿಸುವ ಅಽಕಾರ ಸಂತರುಗಳಿಗಷ್ಟೇ ಇದ್ದುದರಿಂದ , ಅವರು ತಮಗೆ ತೋಚಿದ ಹಾಗೆ ಬಿಡುತ್ತಲೂ, ಸೇರಿಸುತ್ತಲೂ ಇದ್ದರು. ಕ್ಯಾಲೆಂಡರ್ ಗೊಂದಲದ ಗೂಡಾಯಿತು.


ಕ್ರಿ. ಪೂ.44ರಲ್ಲಿ ರೋಮ್‌ನ ಚಕ್ರವರ್ತಿಯಾಗಿದ್ದ ಜೂಲಿಯಸ್ ಸೀಸರ್ ಗೌರವಾರ್ಥವಾಗಿ ಜೂಲಿಯನ್ ಎಂಬ ಹೆಸರಿನೊಂದಿಗೆ ಹೊಸ ಕ್ಯಾಲೆಂಡರ್ ಬಂತು. ಹದಿನೈದು ತಿಂಗಳ ಬಳಿಕ ಅವನ ಹತ್ಯೆಯಾಗಿ ಅವನ ಅಣ್ಣನ ಮಗ ಆಗಸ್ಟಸ್ ಸೀಸರ್ ಚಕ್ರವರ್ತಿಯಾದ. ಅವನಿಗೆ ತನ್ನದು ಕೂಡಾ ಹೆಸರಿರುವ ತಿಂಗಳಿರಬೇಕೆನ್ನುವ ಅಭಿಲಾಷೆಯಿತ್ತು. ತಿಂಗಳೊಂದರ ಹೆಸರನ್ನು ಆಗಸ್ಟ್ ಎಂದು ಬದಲಿಸಿದ. ಅಷ್ಟಕ್ಕೇ ತೃಪ್ತಿಯಾಗದೆ ತನ್ನ ತಿಂಗಳಲ್ಲಿರುವ 30 ದಿನಗಳಿಗೆ ಬದಲಾಗಿ 31 ದಿನಗಳನ್ನು ಮಾಡಿದ. ಈ ಕಾರಣಕ್ಕೆ ಫೆಬ್ರವರಿಯಲ್ಲಿ ಮತ್ತೂ ಒಂದು ದಿನ ಕಡಿಮೆಯಾಗಿ 28ಕ್ಕೆ ಕುಸಿಯಿತು.


ಫೆಬ್ರವರಿ ಹೇಗೂ ಪ್ರೇತಾತ್ಮಗಳ ತಿಂಗಳು ಎಂಬ ನಂಬಿಕೆ ಇದ್ದ ರೋಮನ್ನರಿಗಿದು ಸಂತೋಷವೂ ಆಯಿತು.
ಶೇಕ್ಸ್ ಫಿಯರ್ ನ ಜೂಲಿಯಟ್ – ಸೀಸರ್ ವಾಚಿಸಿದರೆ ಅದರಲ್ಲಿ ಸೀಸರ್ ನ ಹತ್ಯೆ ಮಾರ್ಚ್ ತಿಂಗಳಿನ ಐಡೆಸ್ (Lbco) ನಲ್ಲಿ ಎಂದಿದೆ. ಏನಿದು ಐಡೆಸ್? ಅವರು ಕೆಲೆಂಡೆ , ನೊನೆಸ್ ಮತ್ತು ಐಡೆಸ್ ಎಂಬ ಆಧಾರದಲ್ಲಿ ಮೂರು ಭಾಗಗಳನ್ನು ಮಾಡಿ ದಿವಸಗಳನ್ನು ಗುರುತಿಸುವುದಾಗಿತ್ತು ಪದ್ಧತಿ.


ಹಗಲು – ರಾತ್ರಿ ಒಂದರ ನಂತರ ಒಂದು ಬರುವುದಾಗಿದೆ ಎಂದು ಮನುಷ್ಯ ಮೊದಲು ಗಮನಿಸಿದ್ದು. ವಿವಿಧ ದಿಕ್ಕು, ಗಾತ್ರಗಳಲ್ಲಿ ಗೋಚರಿಸುವ ಸೂರ್ಯ ಚಂದ್ರನನ್ನೂ ಗಮನಿಸಿದ. ಕಾಲಾನುಕಾಲಕ್ಕೆ ಬದಲಾಗುತ್ತಿರುವ ಬಿಸಿಲು, ಮಳೆ, ಚಳಿ ಎಲ್ಲವನ್ನೂ ಅರ್ಥ ಮಾಡಿಕೊಂಡು ಇದನ್ನೆಲ್ಲಾ ಹೇಗೆ ಕೃಷಿ ಕಾರ್ಯಗಳಿಗೆ, ಹಬ್ಬ ಹರಿದಿನಗಳೊಂದಿಗೆ ವ್ಯವಸ್ಥಿತವಾಗಿ ಹೊಂದಿಸಿಕೊಳ್ಳಬಹುದೆಂದು ಚಿಂತಿಸತೊಡಗಿದ.


ಕ್ರಿ.ಪೂ.2000ದಲ್ಲೇ ಆಯ್ದ ಬಂಡೆಕಲ್ಲುಗಳನ್ನು ವಿಶಿಷ್ಟವಾಗಿ ಜೋಡಿಸಿಟ್ಟು ಅದರೆಡೆಯಿಂದ ಸೂರ್ಯರಶ್ಮಿ ಬರುವುದನ್ನು ನೋಡಿ ಸೀಸನ್‌ಗಳನ್ನೂ ಮುಂಚಿತವಾಗೇ ಅಂದಾಜಿಸುತ್ತಿದ್ದ ಒಂದು ಕ್ರಮವನ್ನು ಸ್ಟೋನ್ ಹೇಂಗ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಒಂದರ್ಥದಲ್ಲಿ ಇದೊಂದು ಸೋಲಾರ್ ಕ್ಯಾಲೆಂಡರ್ ಆಗಿತ್ತು.


ಸೊಮೆರಿಯಾ- ಬ್ಯಾಬಿಲೋನಿ ಯಾಗಳ ಕಡೆಯಲ್ಲಿ ಅಲ್ಲಿನ ಜ್ಯೋತಿಶಾಸ ಪಂಡಿತರು ಆಕಾಶವನ್ನು ಹನ್ನೆರಡು ಭಾಗಗಳಾಗಿ ವಿಂಗಡಿಸಿ ಸೂರ್ಯ, ಚಂದ್ರ, ನಕ್ಷತ್ರ ಗಳ ಚಲನವಲನಗಳನ್ನೆಲ್ಲ ಅವರದೇ ಆದ ರೀತಿಯಲ್ಲಿ ಲೆಕ್ಕಾಚಾರ ಮಾಡಿ 25 ದಿವಸದ ಒಂದು ಕ್ಯಾಲೆಂಡರನ್ನೂ ರಚಿಸಿದ್ದರು ಮತ್ತು ಅದನ್ನು ಲಭ್ಯವಿದ್ದ ಮಣ್ಣು ಮತ್ತಿತರ ಫಲಕಗಳಲ್ಲಿ ದಾಖಲಿಸಿದ್ದರು.


ಮೆಕ್ಸಿಕೋ – ಗ್ವಾಟೆಮಾಲಾ ಗಳಲ್ಲಿದ್ದ ಮಾಯಾ ವರ್ಗದ ಬುಡಕಟ್ಟಿನವರ ಕ್ಯಾಲೆಂಡರ್ ಇನ್ನೂ ಸ್ಪಷ್ಟವಾಗಿತ್ತು. ವರ್ಷಕ್ಕೆ 36524 ದಿನಗಳಿರುವ, 18 ತಿಂಗಳುಗಳಲ್ಲಿ ತಲಾ 20 ದಿವಸಗಳದ್ದಾಗಿತ್ತು ಅದು. ಸ್ಟೇಲೆ ಎನ್ನುವ ಶಿಲೆಗಳಲ್ಲಿ ಅವುಗಳನ್ನು ದಾಖಲಿಸಿಟ್ಟಿದ್ದು ಸಂಶೋಧಕರ ಮಟ್ಟಿಗೆ ಇಂದಿಗೂ ಕುತೂಹಲದ ವಿಷಯವೇ ಸರಿ. ಹೀಗೆ ಆದಿ ಮನುಷ್ಯರ ಕಾಲದಿಂದಲೂ ಪ್ರಯತ್ನಗಳೆಲ್ಲಾ ನಿರಂತರವಾಗಿದ್ದರೂ, ಅಧ್ಯಯನ ಮನೋಭಾವ ಮುಂದುವರಿದಂತೆ ಕಾಲ ಎಲ್ಲವನ್ನೂ ಬದಿಗೆ ಸರಿಸುತ್ತಲೇ ಹೋದದ್ದು ಕೂಡಾ ಅಷ್ಟೇ ಸತ್ಯ.


ಕ್ರಿ. ಪೂ.753 ರಲ್ಲಿ ರೋಮ್ ಚಕ್ರವರ್ತಿ ರೋಮುಲಸ್ ಮಾರ್ಚ್ ನ್ನು ಮೊದಲ ತಿಂಗಳಾಗಿ ಪರಿಗಣಿಸಿ ವರ್ಷಕ್ಕೆ ಹತ್ತು ತಿಂಗಳುಗಳ ಒಂದು ಕ್ಯಾಲೆಂಡರ್ ತಯಾರಿಸಿದ. ಲ್ಯಾಟಿನ್ ಭಾಷೆಯ ಹೆಸರಿನಲ್ಲಿ Martius, Aprils, Maius ಹೀಗೇ ತಿಂಗಳನ್ನು ಆರಂಬಿಸಿ ಸೆಪ್ಟೆಂಬರ್-ಡಿಸೆಂಬರ್ ಗೆ ಕೊನೆಯಾಗುತ್ತಿದ್ದ ಇದು ಕೂಡಾ ಮುಂದೆ ಇತಿಹಾಸದ ಬುಟ್ಟಿ ಸೇರಿತು.


ಕ್ರಿ. ಪೂ.713ರಲ್ಲಿ ಎರಡನೇ ರಾಜ ನ್ಯೂಮಾ ಪೊಂಪಿಲಸ್ 355 ದಿವಸಗಳೊಂದಿಗೆ ಎರಡು ತಿಂಗಳನ್ನು ಸೇರಿಸಿದರೂ ಸಮಸ್ಯೆ ಬಗೆಹರಿಯಲಿಲ್ಲ.
ಕ್ರಿ. ಶ. 1582ರಲ್ಲಿ ಮಾರ್ಚ್ 21ಕ್ಕೆ ಬರಬೇಕಾದ ಈಸ್ಟರ್, 11ಕ್ಕೇ ಬಂತು. ಹೀಗೇ ಹೋದರೆ ಅಸ್ತವ್ಯಸ್ತ ಆಗಿ ಬಿಡಬಹುದೆಂದು 13ನೇ ಪೋಪ್ ಗ್ರೆಗರಿ ಯವರಿಗೆ ತೋಚಿತು. ಪಂಡಿತರೊಂದಿಗೆ ಸೇರಿ ಇನ್ನಷ್ಟು ಮುಂದಾಲೋಚನೆಯೊಂದಿಗೆ ಕ್ಯಾಲೆಂಡರ್ ಪರಿಷ್ಕರಿಸುವ ಸಲುವಾಗಿ, ಆದರಿಂದ ಹತ್ತು ದಿವಸಗಳನ್ನೇ ತೆಗೆದು ಹಾಕಿ ಅಕ್ಟೋಬರ್ 4 ರ ನಂತರ ಅಕ್ಟೋಬರ್ 15 ಎಂದು ಮಾಡಿ ಬಿಟ್ಟರು. ಹೆಚ್ಚುವರಿ ಇರುವ ಕಾಲು ದಿವಸವನ್ನು ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿಗೆ ಸೇರಿಸಿ ಲೀಪ್ ಇಯರ್ ಎಂದೂ ಕರೆದರು. ಇದೇ ನಾವಿಂದು ಉಪಯೋಗಿಸುತ್ತಿರುವ ಗ್ರಿಗೋರಿಯನ್ ಕ್ಯಾಲೆಂಡರ್.


ಇದೂ ಕೂಡಾ ನೂರಕ್ಕೆ ನೂರರಷ್ಟು ಪಫೆಕ್ಟ್ ಅಲ್ಲ ಅನ್ನುತ್ತಾರೆ ತಜ್ಞರು. ಹೆಚ್ಚು ಕಡಿಮೆ ನಾಲ್ಕು ಸಾವಿರ ವರ್ಷಗಳಾಗುವಾಗ ಒಂದು ದಿವಸ ಹಾಗೂ 5 ಘಂಟೆಯ ವ್ಯತ್ಯಾಸ ಇಲ್ಲಿಯೂ ಕಂಡು ಬರಬಹುದಂತೆ. ಸದ್ಯಕ್ಕೇನೂ ಸಮಸ್ಯೆ ಇಲ್ಲ ಬಿಡಿ.

LEAVE A REPLY

Please enter your comment!
Please enter your name here