







ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆ ಪೂರಕ : ಮುರಳಿಧರ ಕೆ.


ಪುತ್ತೂರು:ಪುತ್ತೂರಿನ ವಿವೇಕಾನಂದ ಫಾರ್ಮಾಸ್ಯೂಟಿಕಲ್ ಸೈನ್ಸಸ್ ಸಂಸ್ಥೆಯಲ್ಲಿ 2025–26ನೇ ಸಾಲಿನ ವಾರ್ಷಿಕ ಕ್ರೀಡೋತ್ಸವವು ಜ.2ರಂದು ಕಾಲೇಜು ಮೈದಾನದಲ್ಲಿ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳಿಧರ ಕೆ. ಅವರು ಉದ್ಘಾಟಿಸಿ ಮಾತನಾಡಿದರು.



ವಿದ್ಯಾರ್ಥಿಗಳು ಅಕಾಡೆಮಿಕ್ ಸಾಧನೆಯ ಜೊತೆಗೆ ಕ್ರೀಡಾ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಕ್ರೀಡಾ ಶಿಸ್ತು, ತಂಡಭಾವನೆ, ಆತ್ಮವಿಶ್ವಾಸವನ್ನು ವೃದ್ಧಿಸಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಖಜಾಂಚಿ ಮೂಲಚಂದ್ರ ಕೆ. ಮಾತನಾಡಿ, ಭಾರತೀಯ ಸಂಪ್ರದಾಯಿಕ ಕ್ರೀಡೆಗಳ ಮಹತ್ವವನ್ನು ವಿವರಿಸಿ ಇಂದಿನ ಯುವ ಪೀಳಿಗೆ ನಮ್ಮ ದೇಶದ ಪಾರಂಪರಿಕ ಕ್ರೀಡೆಗಳತ್ತ ಗಮನಹರಿಸಬೇಕಾದ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮುರಳಿಧರ ಕೆ. ಅವರು ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಕಿರಣ್ ಎಸ್.ಎನ್. ಅವರಿಗೆ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕಾಲೇಜಿನ ಕ್ರೀಡಾಪಟು ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ವಿದ್ಯಾರ್ಥಿ ಸಂಘದ ನಾಯಕಿ ಗೌತಮಿ ಬಿ. ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದ ಅಂಗವಾಗಿ ಪಥ ಸಂಚಲನದಲ್ಲಿ ವಿಜೇತರಾದ ದ್ವಿತೀಯ ಬಿ.ಫಾರ್ಮ್ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ನಂತರ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ ಎಂ.ಪಿ. ಅವರು ಸ್ವಾಗತಿಸಿ, ಕಾಲೇಜಿನ ಉಪನ್ಯಾಸಕ ಹಾಗೂ ಕ್ರೀಡಾ ಸಂಯೋಜಕ ಶಾಂತನು ಕಾಮತ್ ವಂದಿಸಿದರು. ದ್ವಿತೀಯ ಬಿ.ಫಾರ್ಮ್ ವಿದ್ಯಾರ್ಥಿನಿ ರಕ್ಷಿತಾ ಬಿ. ಹಾಗೂ ವಿಭಾ ಎನ್.ಎನ್. ಕಾರ್ಯಕ್ರಮ ನಿರ್ವಹಿಸಿದರು.










