







@ ಡಾ. ಗ್ರೀಷ್ಮಾ ಗೌಡ


ಚಳಿಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು, ಕಾಲು ಒಡೆಯುವುದು ಸರ್ವೇ ಸಾಮಾನ್ಯ. ಅದರಲ್ಲೂ ಒಣ ಚರ್ಮದ ಸಮಸ್ಯೆಯನ್ನು ಜೀವಮಾನದಲ್ಲಿ ಒಮ್ಮೆಯಾದರೂ ಅನುಭವಿಸಿರುತ್ತಾರೆ. ನಮ್ಮ ದೇಹದ ಅತ್ಯಂತ ದೊಡ್ಡ ಅಂಗವೇ ಚರ್ಮ. ಇದು ನಮಗೆ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ತೇವಾಂಶವನ್ನು ಹೊರಹೋಗದಂತೆ ಉಳಿಸಿಕೊಳ್ಳುತ್ತದೆ. ಹಲವು ಕಾರಣಗಳಿಂದ ಚರ್ಮ ತೇವಾಂಶ ಕಳೆದುಕೊಂಡು ಒಣಗಿದಂತಾಗುತ್ತದೆ. ಇದನ್ನು ಜಿರೋಸಿಸ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ, ಇದು ಎಲ್ಲ ವಯಸ್ಸಿನವರು ಕಾಣಬಹುದು.




ಜಿರೋಡರ್ಮ ಅಥವಾ ಒಣಚರ್ಮ: ಚರ್ಮವು ತನ್ನ ತೇವಾಂಶ ಹಾಗೂ ನೈಸರ್ಗಿಕ ಕೊಬ್ಬಿನಂಶವನ್ನ ಕಳೆದುಕೊಂಡು ಒರಟಾಗುವುದನ್ನು ಜಿರೋಡರ್ಮ ಎಂದು ಕರೆಯುತ್ತಾರೆ. ಚರ್ಮದ ಮೇಲಿನ ಪದರ ತೇವಾಂಶ ಕಳೆದುಕೊಂಡು ಸಿಪ್ಪೆ ಎದ್ದು ಒರಟಾಗುತ್ತದೆ. ಪದೇ ಪದೇ ಸೋಪಿನಿಂದ ದೇಹವನ್ನು ತೊಳೆದಾಗ ಚರ್ಮ ಒಣಗಿ ಸಿಪ್ಪೆ ಏಳುತ್ತದೆ. ತುರಿಕೆ, ಬಿರುಸಾಗುವಿಕೆ, ಕೆಂಪಗಾಗುವುದು, ಚರ್ಮ ಒಡೆಯುವುದು ಇದರ ಮುಖ್ಯ ಲಕ್ಷಣ. ಇದನ್ನು ನಿಯಂತ್ರಿಸದಿದ್ದರೆ ಚರ್ಮ ಒಡೆದ ಭಾಗದಲ್ಲಿ ಬ್ಯಾಕ್ಟೀರಿಯಾಗಳ ಸೋಂಕಾಗುತ್ತದೆ.
ಕಾರಣಗಳು: ಒಣಚರ್ಮಕ್ಕೆ ಸಾಕಷ್ಟು ಆಂತರಿಕ ಹಾಗೂ ಬಾಹ್ಯ ಕಾರಣಗಳಿವೆ. ಆದರೆ ಇಲ್ಲಿ ನಾನು ತಿಳಿಸಲು ಹೊರಟಿರುವುದು ಚಳಿಗಾಲಕ್ಕೆ ಸಂಬಂಧಿಸಿದ ಒಣಚರ್ಮದ ಕುರಿತು. ಚಳಿಗೆ ಬಿಸಿ ನೀರು ಸ್ನಾನ ಖುಷಿಕೊಡುತ್ತದೆ ಎಂದು ದೀರ್ಘ ಸಮಯದವರೆಗೆ ಬಿಸಿ ನೀರು ಸ್ನಾನ ಮಾಡುವುದು ಒಳ್ಳೆಯದಲ್ಲ. ಒಣ ಹವೆಗೆ ಚರ್ಮ ಒಣಗಲು ಪ್ರಾರಂಭಿಸುತ್ತದೆ. ಹೊರಗೆ ಸುಡು ಬಿಸಿಲಿಗೆ ಚರ್ಮದ ತೇವಾಂಶ ಕಳೆದುಕೊಂಡು ಒಣ ಚರ್ಮ ಹೆಚ್ಚಾಗುತ್ತದೆ. ಕೈ ಕಾಲುಗಳನ್ನು ಗಾಡ ಸೋಪು, ಸೋಪು ಸಲ್ಯೂಷನ್ಗಳನ್ನು ಉಪಯೋಗಿಸಿ ಆಗಾಗ ತೊಳೆಯುವುದು ಕೂಡ ಇದಕ್ಕೆ ಕಾರಣ.
ಚಳಿಗಾಲದಲ್ಲಿ ಒಣ ಚರ್ಮದಿಂದ ಹೇಗೆ ಸುರಕ್ಷಿತವಾಗಿರುವುದು: ಒಡೆದ ಚರ್ಮ ಒಂದು ಸಣ್ಣ ಸಮಸ್ಯೆ ಎಂದು ಕಾಣಬಹುದು. ಆದರೆ ಅದು ಆಟೋಪಿಕ್ ಡರ್ಮಟೈಟಿಸ್ ನಂತ ಗಂಭೀರ ಸಮಸ್ಯೆಗೆ ಕೂಡ ಕಾರಣವಾಗಬಹುದು. ಹಾಗಾಗಿ ಪ್ರಾರಂಭದಲ್ಲೇ ಇದನ್ನು ಗುಣಪಡಿಸಿಕೊಳ್ಳುವುದು ಉತ್ತಮ. ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಬಳಕೆ, ಸೆರಮೈಡ್, ಗ್ಲಿಸರಿನ್, ಹೈಲರೋನಿಕ್ ಆಸಿಡ್ ಚರ್ಮದ ತಡೆಗೋಡೆಯನ್ನು ಸರಿ ಮಾಡಿ ಚರ್ಮವನ್ನು ಮೃದುಗೊಳಿಸುತ್ತದೆ. ಹಾಗಾಗಿ ಚರ್ಮ ವೈದ್ಯರ ಸಲಹೆ ಪಡೆದು ನಿಮಗೆ ಸೂಕ್ತವಾದ ಕ್ರೀಮ್ ಅನ್ನು ತೆಗೆದುಕೊಳ್ಳಬೇಕು.
ಬಿಸಿ ನೀರು ಸ್ನಾನವನ್ನು ನಿಯಂತ್ರಿಸಿ: ತುಂಬಾ ಸಮಯದವರೆಗೆ ಬಿಸಿ ನೀರು ಸ್ನಾನ ಮಾಡಿದರೆ ಚರ್ಮದ ಎಣ್ಣೆಯ ಪದರ ಹೋಗಿ ಚರ್ಮ ಒರಟಾಗುತ್ತದೆ. ಹಾಗಾಗಿ, ಉಗುರು ಬಿಸಿನೀರಲ್ಲಿ ಐದರಿಂದ ಹತ್ತು ನಿಮಿಷದ ಒಳಗೆ ಸ್ನಾನವನ್ನು ಮುಗಿಸಿ. ಸ್ನಾನ ಮಾಡುವಾಗ ಚರ್ಮವನ್ನು ಅತಿಯಾಗಿ ಉಜ್ಜೋದನ್ನು ಕಡಿಮೆ ಮಾಡಿ. ಚರ್ಮವನ್ನು ಮತ್ತಷ್ಟು ಒರಟು ಮಾಡುವ ಯಾವುದೇ ಕಠಿಣ ರಾಸಾಯನಿಕಗಳಿರುವ ಸೋಪ್ ಅಥವಾ ಕಡ್ಲೆಹಿಟ್ಟು ಇತ್ಯಾದಿಗಳನ್ನು ಬಳಸದಿರಿ. ಚರ್ಮವನ್ನು ಸೂರ್ಯನ ಬಿಸಿಲಿನಿಂದ ಕಾಪಾಡಲು ಸನ್ ಸ್ಕ್ರೀನನ್ನು ಬಳಸಿ. ಕೈ ಕಾಲಿನ ಚರ್ಮವನ್ನು ರಕ್ಷಿಸಲು ಹತ್ತಿಯ ಗ್ಲೌಸನ್ನು ಉಪಯೋಗಿಸಿ. ಸ್ನಾನಕ್ಕಿಂತ ಮೊದಲು ತೆಂಗಿನಕಾಯಿ ಎಣ್ಣೆಯನ್ನು ಮೈಗೆ ಪೂರ್ತಿ ಹಚ್ಚಿ ಮತ್ತೆ, ಸೀಗೆಕಾಯಿ ಅಥವಾ ನೊರೆಕಾಯಿ ಉಪಯೋಗಿಸಿ ಸ್ನಾನ ಮಾಡಿ. ಅಥವಾ ಉತ್ತಮ ಗುಣಮಟ್ಟದ ಸೋಪು ಕೂಡ ಒಳ್ಳೆಯದು. ಬರಿ ಹೊರಗಿನ ಭಾಗಕ್ಕೆ ಆರೈಕೆ ಮಾಡಿದರೆ ಸಾಕಾಗುವುದಿಲ್ಲ. ಆಂತರಿಕ ಆರ್ದ್ರತೆಯನ್ನು ಕೂಡ ನೋಡಿಕೊಳ್ಳಬೇಕು. ದಿನಕ್ಕೆ 2-3 ಲೀ.ನಷ್ಟು ನೀರು ಕುಡಿಯಬೇಕು. ಕೆಲವು ಸಂಶೋಧನೆಗಳ ಪ್ರಕಾರ ಒಮೆಗಾ-3 ಕೊಬ್ಬಿನಾಂಶದ ಆಹಾರ ನಮ್ಮ ಚರ್ಮದ ಶುಷ್ಕತೆಯನ್ನು ಕಾಪಾಡುತ್ತದೆ ಎಂದು ತಿಳಿದು ಬಂದಿದೆ. ಹಾಗಾಗಿ, ಮೀನು, ಒಣ ಬೀಜಗಳು ಯಾವುದೇ ಹಣ್ಣು ಹಂಪಲು ತಿನ್ನುವುದು ಉತ್ತಮ. ಚಳಿಯ ಸಮಯದಲ್ಲಿ ನಿಮ್ಮ ಚರ್ಮದ ಕಡೆಗೆ ಕೂಡ ಗಮನ ಇರಲಿ. ಒಂದು ವೇಳೆ ಇಷ್ಟು ಮಾಡಿದರು ಸಮಸ್ಯೆ ಸರಿ ಹೋಗದಿದ್ದರೆ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ ಸೂಕ್ತ ಸಲಹೆ ಪಡೆದುಕೊಳ್ಳಿ.
-ಡಾ. ಗ್ರೀಷ್ಮಾ ಗೌಡ ಆರ್ನೋಜಿ
BNYS,Msc(CND) FAM(Aesthetic Medicine)









