ಕಾವು ಸರಕಾರಿ ಉನ್ನತ ಹಿ.ಪ್ರಾ ಶಾಲಾ ವಾರ್ಷಿಕೋತ್ಸವ, ವಿವಿಧ ಕಾಮಗಾರಿಗಳ ಉದ್ಘಾಟನೆ

0

ಕಾವು ಸರಕಾರಿ ಶಾಲೆ ಖಾಸಗಿ ಶಾಲೆಯನ್ನೂ ಮೀರಿಸುವಂತಿದೆ: ಶಾಸಕ ಅಶೋಕ್ ರೈ


ಪುತ್ತೂರು: ದಾನಿಗಳು, ಊರಿನವರು ಒಂದಾಗಿ ಕೆಲಸ ಮಾಡಿದರೆ ಸರಕಾರಿ ಶಾಲೆಯನ್ನು ಯಾವ ರೀತಿ ಅಭಿವೃದ್ದಿ ಮಾಡಬಹುದು ಎಂಬುದಕ್ಕೆ ಕಾವು ಸರಕಾರಿ ಶಾಲೆಯೇ ಉದಾಹರಣೆಯಾಗಿದೆ, ಇಲ್ಲಿನ ವ್ಯವಸ್ಥೆಗಳು ಖಾಸಗಿ ಶಾಲೆಯನ್ನೂ ಮೀರಿಸುವಂತಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.


ಅವರು ಕಾವು ಸರಕಾರಿ ಉನ್ನತ ಹಿ ಪ್ರಾ ಶಾಲೆಯ ವಾರ್ಷಿಕೋತ್ಸವ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.


ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ, ತರಬೇತಿ ಪಡೆದ ಶಿಕ್ಷಕರನ್ನು ಮಾತ್ರ ಸರಕಾರಿ ಶಾಲೆಗೆ ಶಿಕ್ಷಕರನ್ನಾಗಿ ಸರಕಾರ ನೇಮಕ ಮಾಡುತ್ತಿದೆ. ಕಾವು ಶಾಲೆಯಲ್ಲಿ ಈ ಬಾರಿ ಪ್ರೌಢ ಶಾಲೆಗೆ ಅವಕಾಶ ಕಲ್ಪಿಸಲಾಗಿದೆ. ಕೆಪಿಎಸ್ ಸ್ಕೂಲ್ ಆಗಿ ಮೇಲ್ದರ್ಜೆಗೇರಿಸಬೇಕು ಎಂಬ ಉದ್ದೇಶವೂ ಇದ್ದು ಮುಂದೆ ಅದು ಕೂಡಾ ಚಾಲ್ತಿಗೆ ಬರಲಿದೆ ಎಂದು ಹೇಳಿದರು.

ಸರಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಯುಕೆಜಿ ಆಂಗ್ಲ ಮಾಧ್ಯಮ ತರಗತಿ ಪ್ರಥಮ ಬಾರಿಗೆ ಪ್ರಾರಂಭ ಮಾಡಿದ ಖ್ಯಾತಿ ಕಾವು ಸರಕಾರಿ ಶಾಲೆಗಿದೆ. ಕಾವು ಹೇಮನಾಥ ಶೆಟ್ಟಿ ಮತ್ತು ಅವರ ತಂಡ ಈ ಶಾಲೆಯನ್ನು ದತ್ತು ಪಡೆದ ಬಳಿಕ ಮಕ್ಕಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಮಕ್ಕಳ ವಿದ್ಯಾಬ್ಯಾಸಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳೂ ಇಲ್ಲಿ ವ್ಯವಸ್ಥಿತವಾಗಿ ಮಾಡಲಾಗಿದೆ ಎಂದು ಹೇಳಿದರು. ಎಂಆರ್‌ಪಿಎಲ್ ಸಿಎಸ್‌ಆರ್ ಫಂಡನ್ನು ಸದ್ಬಳಕೆ ಮಾಡುವಲ್ಲಿ ಈ ಶಾಲೆ ಯಶಸ್ವಿಯಾಗಿದ್ದು ಶಾಲಾ ಕೊಠಡಿ, ಅಕ್ಷರದಾಸೋಹ ಕಟ್ಟಡವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ ಶಾಸಕರು ಊರವರು, ದಾನಿಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ಕಾವು ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಗಳಾಗಿದ್ದಾರೆ ಎಂದು ಹೇಳಿದರು.

ಕೆಪಿಎಸ್ ಸ್ಕೂಲ್ ಮಾಡಬೇಕಿದೆ: ಕಾವು ಹೇಮನಾಥ ಶೆಟ್ಟಿ
ಪುತ್ತೂರಿನಲ್ಲಿ ಖಾಸಗಿ ಶಾಲೆಗಳ ಅಬ್ಬರದ ನಡುವೆ ಗ್ರಾಮೀಣ ಭಾಗದಲ್ಲಿರುವ ಈ ಸರಕಾರಿ ಶಾಲೆಗೆ ಗಣನೀಯ ಸಂಖ್ಯೆಯಲ್ಲಿ ಮಕ್ಕಳ ದಾಖಲತಿ ನಡೆದಿರುವುದು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಗ್ರಾಮಾಂತರ ಭಾಗದಲ್ಲಿ ಅತೀ ಹೆಚ್ಚು ಮಕ್ಕಳನ್ನು ಹೊಂದಿರುವ ಈ ಶಾಲೆಯಲ್ಲಿ ಪ್ರತೀ ವರ್ಷವೂ ಮಕ್ಕಳ ದಾಖಲಾತಿಯಲ್ಲಿ ಹೆಚ್ಚಳವಾಗುತ್ತಿದೆ. ಮಕ್ಕಳನ್ನು ಕರೆತರಲು ಬಸ್ಸಿನ ವ್ಯವಸ್ಥೆಯನ್ನೂ ಮಾಡಲಾಗಿದ್ದು ಇದು ತಾಲೂಕಿನಲ್ಲೇ ಪ್ರಥಮವಾಗಿದೆ ಎಂದು ಹೇಳಿದರು. ಕಾವು ಶಾಲೆಯನ್ನು ಕೆಪಿಎಸ್ ಆಗಿ ಮಾಡಬೇಕು ಎಂಬ ಬೇಡಿಕೆಯನ್ನು ಶಾಸಕರಿಗೆ ನೀಡಿದರು. ಗ್ರಾಮೀಣ ಭಾಗದ ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಏಕೈಕ ಉದ್ದೇಶದಿಂದ ಶಾಲೆಯಲ್ಲಿ ಸರಕಾರದ ಅನುಮತಿಗಾಗಿ ಕಾಯದೆ ತಾಲೂಕಿನಲ್ಲಿ ಪ್ರಥಮ ಎಂಬಂತೆ ಆಂಗ್ಲ ಮಾಧ್ಯಮ ತರಗತಿಯನ್ನು ಪ್ರಾರಂಭ ಮಾಡಿದ್ದೆವು. ಕನ್ನಡದ ಜೊತೆಗೆ ಆಂಗ್ಲ ಭಾಷೆಯ ಅಗತ್ಯತೆ ಇದೆ. ಶಾಸಕರು ಸಾಕಷ್ಟು ಅನುದಾನವನ್ನು ಈ ಶಾಲೆಗೆ ನೀಡುವ ಮೂಲಕ ನಮಗೆ ಬೆಂಬಲ ನೀಡುತ್ತಿದ್ದಾರೆ ಮುಂದೆ ಖಾಸಗಿ ಶಾಲೆಯನ್ನೂ ಮೀರಿ ನಮ್ಮ ಕಾವು ಶಾಲೆ ಪ್ರಗತಿ ಹೊಂದಲಿದೆ ಎಂದು ಎಂದು ಶಾಲೆಯ ದತ್ತು ಪಡೆದ ಕಾವು ಹೇಮನಾಥ ಶೆಟ್ಟಿ ಹೇಳಿದರು.


ಕಾವು ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ್ತಮೂಡೆತ್ತಾಯ ಮಾತನಾಡಿ, ಕಾವು ಸರಕಾರಿ ಶಾಲೆಗೆ ಪ್ರೌಢ ಶಾಲೆ ಮಂಜೂರುಗೊಂಡಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಹೇಳಿದರು. ಕೃಷಿಕ ದಂಬೆಕಾನ ಸದಾಶಿವ ರೈ, ಎಂಆರ್‌ಪಿಎಲ್ ನ ಪವರ್ ಪ್ಲಾಂಟ್ ಮೆನೆಜರ್ ಹರೀಶ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸನ್ಮಾನ
ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ರೈ, ದತ್ತು ಪಡೆದಿರುವ ಕಾವು ಹೇಮನಾಥ ಶೆಟ್ಟಿ, ಸಿವಿಲ್ ಕಾಂಟ್ರಾಕ್ಟರ್ ಗೌರವ್ ಶೆಟ್ಟಿ,ಲಿಯೋಕ್ಲಬ್ ಅಧ್ಯಕ್ಷೆ ರಂಜಿತಾ ಶೆಟ್ಟಿ,ಉಪನ್ಯಾಸಕಿ ಸುರೇಖಾ, ನಿವೃತ್ತ ಮುಖ್ಯ ಶಿಕ್ಷಕಿ ಪ್ರಮೀಳಾರವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ದ.ಕ ಹಾಲು ಸಹಕಾರಿ ಒಕ್ಕೂಟದ ನಿರ್ದೇಶಕ ಚಂದ್ರಶೇಖರ ರಾವ್, ನೆಟ್ಟಣಿಗೆ ಮುಡ್ನೂರು ಶಾಲೆಯ ಕಾರ್ಯಾಧ್ಯಕ್ಷ ಶ್ರೀರಾಂ ಪಕ್ಕಳ ಉಪಸ್ಥಿತರಿದ್ದರು. ಬೆಳಿಗ್ಗೆ ದ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷ ತಾರನಾಥ ಧ್ವಜಾರೋಹಣ ಮಾಡಿದರು. ಲಯನ್‌ಪಾವನ ರಾಮ ಕಾರ್ಯಕ್ರಮ ಉದ್ಘಾಟಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here