






ಪುತ್ತೂರು: ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಉಪ್ಪಿನಂಗಡಿ ಪಡ್ಡಾಯೂರು ಪಡ್ನೂರು ಇಲ್ಲಿ ಡಿ. 30 ರಂದು ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು .


ಸಮಾರಂಭದಲ್ಲಿ ಸರ್ವೆ ಭಕ್ತಕೋಡಿ ಎಸ್.ಜಿ.ಎಂ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರು ಶ್ರೀನಿವಾಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಉದ್ದೇಶಗಳನ್ನು ಇಟ್ಟುಕೊಂಡು ತಂದೆ, ತಾಯಿ, ಗುರುಗಳ ಕನಸುಗಳನ್ನು ಈಡೇರಿಸಬೇಕು. ಸಮಾಜ ತನಗೆ ಏನು ಕೊಟ್ಟಿದೆ ಎಂಬುದಕ್ಕಿಂತ ನಾನು ಸಮಾಜಕ್ಕೆ ಏನು ಒಳ್ಳೆಯ ಕೆಲಸ ಮಾಡಬಹುದು, ದೇಶಕ್ಕಾಗಿ ನನ್ನಿಂದ ಏನು ಮಾಡಲು ಸಾಧ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.



ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಜಯಂತಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮುರಳೀಧರ್, ಗುರುಪುರ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲೆ ಸುಮಂಗಲ, ಮೂಡಬಿದಿರೆ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸಂಗಬಸಯ್ಯ ಹಿರೇಮಠರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಸತೀಶ್ ತುಂಬ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ನಂತರ ವಿವಿಧ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಮೂಡಿಬಂತು. ಉಪ ಪ್ರಾಂಶುಪಾಲರಾದ ವಾಣಿ ವಾರ್ಷಿಕ ವರದಿ ವಾಚಿಸಿದರು. ವಿಜ್ಞಾನ ಶಿಕ್ಷಕಿ ವಿನುತ ಸ್ವಾಗತಿಸಿದರು, ಗಣಿತ ಶಿಕ್ಷಕಿ ಉಷಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಆಂಗ್ಲ ಭಾಷಾ ಶಿಕ್ಷಕರಾದ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ನಿಲಯ ಮೇಲ್ವಿಚಾರಕರಾದ ವಸಂತ, ಹಿಂದಿ ಭಾಷಾ ಶಿಕ್ಷಕರಾದ ಜಯಪ್ರಕಾಶ್, ಚಿತ್ರಕಲಾ ಶಿಕ್ಷಕರಾದ ಸಂಜಯ್ ಭಡಾಕಾರ್, ಶುಶ್ರೂಷಾಧಿಕಾರಿ ರೇಷ್ಮಾ , ಸೌಮ್ಯಲತ, ರಕ್ಷಿತ್ ಸಹಕರಿಸಿದರು.
ಯಕ್ಷಗಾನ ವಿದ್ಯಾರ್ಥಿಗಳ ರಂಗಪ್ರವೇಶ, ಪಾಂಡವಾಶ್ವಮೇಧ ಯಕ್ಷಗಾನ ಪ್ರಸಂಗ…
ಸಂಜೆ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ).ಮಂಗಳೂರು ಇವರ ಆಶ್ರಯದಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ಅಭಿಯಾನದಡಿಯಲ್ಲಿ ಯಕ್ಷ ಗುರುಗಳಾದ ಬಾಲಕೃಷ್ಣ ಏಲ್ಕಾನ ಪೆರ್ಲ ಇವರ ನಿರ್ದೇಶನದಲ್ಲಿ ಯಕ್ಷಗಾನ ವಿದ್ಯಾರ್ಥಿಗಳ ರಂಗಪ್ರವೇಶ ಹಾಗೂ ಪಾಂಡವಾಶ್ವಮೇಧ ಯಕ್ಷಗಾನ ಪ್ರಸಂಗ ಕಾರ್ಯಕ್ರಮವನ್ನು ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಅಧ್ಯಕ್ಷರಾದ ಉದ್ಯಮಿ ಕರುಣಾಕರ್ ರೈ ಪುತ್ತೂರು ಇವರು ಚೆಂಡೆ ಬಾರಿಸುವುದರ ಮೂಲಕ ಚಾಲನೆ ನೀಡಿದರು. ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಕಾರ್ಯದರ್ಶಿ ಚಂದ್ರಹಾಸ ರೈ , ನಿಕಟಪೂರ್ವ ಕೋಶಾಧಿಕಾರಿ ಜಗಜೀವನದಾಸ್ ರೈ , ಸಂಚಾಲಕ ಮುಂಡಾಲಗುತ್ತು ಪ್ರಶಾಂತ್ ರೈ ಯಕ್ಷಗಾನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಲ್ಲಾ ಅತಿಥಿಗಳನ್ನು ಹಾಗೂ ಯಕ್ಷ ಗುರುಗಳನ್ನು ಶಾಲಾ ಪ್ರಾಂಶುಪಾಲರಾದ ಸತೀಶ್ ತುಂಬ್ಯ ಶಾಲಾ ವತಿಯಿಂದ ಸನ್ಮಾನಿಸಿದರು. ನಂತರ ಯಕ್ಷ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಂದ ರಂಗ ಪ್ರವೇಶ ಹಾಗೂ ಪಾಂಡವಾಶ್ವಮೇಧ ಪ್ರಸಂಗ ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ಪೋಷಕ ಪ್ರತಿನಿಧಿಗಳು ಮತ್ತು ಶಾಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದು ಸಹಕಾರ ನೀಡಿದರು.










