ಕುಂಬ್ರ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ

0

ಧರ್ಮಕ್ಷೇತ್ರಗಳ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ: ನಳಿನ್ ಕುಮಾರ್ ಕಟೀಲ್

ಪುತ್ತೂರು: ನಮಗೆ ಸಂಕಷ್ಟ ಬಂದಾಗ ನಾವು ದೇವರ ಗರ್ಭಗುಡಿಯ ಎದುರು ಹೋಗಿ ನಮ್ಮ ಕಷ್ಟವನ್ನು ದೂರಮಾಡು ದೇವರೇ ಎಂದು ಕಣ್ಣೀರು ಹಾಕಿ ಪ್ರಾರ್ಥನೆ ಮಾಡುತ್ತೇವೆ ಅದೇ ರೀತಿಯಲ್ಲಿ ನಮ್ಮ ಧರ್ಮ ಕ್ಷೇತ್ರಗಳಿಗೆ, ದೇವರುಗಳಿಗೆ ತೊಂದರೆ ಬಂದಾಗ ನಾವ್ಯಾಕೆ ಮೌನವಾಗುತ್ತೇವೆ. ತಾಯಿಯನ್ನು ನಂಬುವಂತೆ ನಾವು ದೇವರನ್ನು ಕೂಡ ನಂಬಬೇಕು ಆಗ ಮಾತ್ರ ನಮ್ಮಲ್ಲಿ ಧರ್ಮ ರಕ್ಷಣೆಯ ಭಾವನೆ ಮೂಡಲು ಸಾಧ್ಯವಿದೆ. ನಮ್ಮಲ್ಲಿ ಧರ್ಮ ಜಾಗೃತಿಯಾಗಬೇಕಾದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅತೀ ಅಗತ್ಯ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಶ್ರೀ ಶನೈಶ್ಚರ ಪೂಜಾ ಸಮಿತಿ ಕುಂಬ್ರ, ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕುಂಬ್ರ, ಶೇಖಮಲೆ, ಒಳಮೊಗ್ರು, ತ್ಯಾಗರಾಜ, ಕೆದಂಬಾಡಿ, ಕುರಿಯ, ಆರ್ಯಾಪು, ಸಂಟ್ಯಾರ್, ಕುಂಬ್ರ ವಲಯ, ಶ್ರೀ ರಾಮ ಭಜನಾ ಮಂದಿರ ಕುಂಬ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಂಬ್ರ, ಶ್ರೀರಾಮ ಮಂದಿರ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ, ಸ್ಪಂದನಾ ಸೇವಾ ಬಳಗ ಕುಂಬ್ರ, ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಪರ್ಪುಂಜ, ವೆಂಕಟರಮಣ ಭಜನಾ ಮಂಡಳಿ ಮಡ್ಯಂಗಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಜ.09 ರಂದು ಕುಂಬ್ರ ಶ್ರೀರಾಮ ಭಜನಾ ಮಂದಿರದ ಸಭಾಂಗಣದಲ್ಲಿ ನಡೆದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅದೆಷ್ಟೋ ಬಡವರ ಬದುಕಲ್ಲಿ ಹೊಸ ಬೆಳಕನ್ನು ಮೂಡಿಸಿದೆ ಎಂದ ನಳಿನ್ ಕುಮಾರ್‌ರವರು ಯಾವುದೇ ಧರ್ಮ ಕ್ಷೇತ್ರಗಳ ವಿರುದ್ಧ ಷಡ್ಯಂತ್ರಗಳು ನಡೆದಾಗ ಅದನ್ನು ಪ್ರತಿಭಟಿಸುವ ಗುಣ ನಮ್ಮ ಬರಬೇಕು, ನಾವು ಧರ್ಮವನ್ನು ರಕ್ಷಣೆ ಮಾಡಿದರೆ ಮಾತ್ರ ಧರ್ಮ ನಮ್ಮನ್ನು ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು.


ದೇವರ ಕ್ಯಾಮರಾದಲ್ಲಿ ಎಲ್ಲವೂ ರೆಕಾರ್ಡ್ ಆಗುತ್ತಿರುತ್ತದೆ: ಕುಂಬ್ರ ದುರ್ಗಾಪ್ರಸಾದ್ ರೈ
ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡುತ್ತಾ, ಎಲ್ಲರ ಬದುಕಲ್ಲಿಯೂ ಏಳೂವರೆ ಶನಿ ಇದ್ದೇ ಇರುತ್ತಾನೆ ನಾವೆಲ್ಲರೂ ಆ ಶನಿಯನ್ನು ದಾಟಿ ಬರಲೇಬೇಕಾಗಿದೆ.ಇದಕ್ಕಾಗಿ ಭಗವಂತ ಸೇವೆ ಅಗತ್ಯ, ದೇವರ ಪೂಜೆ ಮಾಡಿದಾಗ ಮನಸ್ಸು ಗಟ್ಟಿಗೊಳ್ಳುತ್ತದೆ ಎಂದ ನಾವು ದೇವರಿಗೆ ಕಾಣದಂತೆ ಈ ಲೋಕದಲ್ಲಿ ಏನನ್ನು ಕೂಡ ಮಾಡಲು ಸಾಧ್ಯವಿಲ್ಲ ನಾವು ಮಾಡಲು ಒಳ್ಳೆಯ ಕೆಟ್ಟ ಎಲ್ಲಾ ಕೆಲಸಗಳು ಕೂಡ ದೇವರ ಕ್ಯಾಮರಾದಲ್ಲಿ ರೇಕಾರ್ಡ್ ಆಗುತ್ತಲೆ ಇರುತ್ತದೆ. ಅದಕ್ಕೆ ತಕ್ಕಂತೆ ದೇವರು ನಮಗೆ ಒಳ್ಳೆಯದನ್ನು ಕರುಣಿಸುತ್ತಾ ಹೋಗುತ್ತಾನೆ ಆದ್ದರಿಂದ ನಾವು ಈ ಸಮಾಜಕ್ಕೆ ಮಾಡಿದ ಒಳ್ಳೆಯ ಕೆಲಸವನ್ನು ನಾನೇ ಹೇಳುತ್ತಾ ಹೋಗದೆ ಒನ್ನೊಬ್ಬರು ಅದನ್ನು ಹೇಳುವಂತಾಗಬೇಕು, ಇಂತಹ ಒಳ್ಳೆಯ ಕೆಲಸಗಳನ್ನು ಮಾಡೋಣ ಎಂದು ಹೇಳಿ ಶುಭ ಹಾರೈಸಿದರು.


ಯೋಜನೆಯು ಬಡವರಲ್ಲಿ ಆರ್ಥಿಕ ಬಲ ತುಂಬಿಸಿದೆ: ಶಶಿಕುಮಾರ್ ರೈ ಬಾಲ್ಯೊಟ್ಟು
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಅದೆಷ್ಟೋ ಬಡವರಲ್ಲಿ ಅಶಕ್ತರಲ್ಲಿ ಆರ್ಥಿಕ ಬಲ ತುಂಬಿಸುವ ಕೆಲಸವನ್ನು ಮಾಡಿದೆ. ಜನರ ಜೀವನ ಮೌಲ್ಯಗಳನ್ನು ಬದಲಾಯಿಸಿದೆ. ಜನರಲ್ಲಿ ಧಾರ್ಮಿಕ, ಸಾಮಾಜಿಕ ಪ್ರಜ್ಞೆ ಮೂಡಿಸಿದೆ ಎಂದು ಹೇಳಿ ಶುಭ ಹಾರೈಸಿದರು.


ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಯೋಜನೆಯ ಪಾತ್ರ ಹಿರಿದು: ಪ್ರಕಾಶ್ಚಂದ್ರ ರೈ ಕೈಕಾರ
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕುಂಬ್ರ ವಲಯದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಸಹಸ್ರಾರು ಜನರ ಬದುಕಿಗೆ ಗ್ರಾಮಾಭಿವೃದ್ಧಿ ಯೋಜನೆ ಬೆಳಕಾಗುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಯೋಜನೆಯ ಪಾತ್ರ ಹಿರಿದು, ಯೋಜನೆಯ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ಅದೆಷ್ಟೋ ಜನರ ಬದುಕನ್ನೇ ಬದಲಾಯಿಸುವ ಕೆಲಸ ಮಾಡಿದೆ, ನೊಂದವರ, ಆಶಕ್ತರ ಬಾಳಿನಲ್ಲಿ ನಗುವನ್ನು ತರಿಸುವ ಕೆಲಸ ಮಾಡಿದೆ ಎಂದು ಹೇಳಿ ಶುಭ ಹಾರೈಸಿದರು.


ಯೋಜನೆಯ ಕಾರ್ಯಕ್ರಮಗಳು ಸಮಾಜದಲ್ಲಿ ಬದಲಾವಣೆ ತಂದಿದೆ: ಸಾಜ ರಾಧಾಕೃಷ್ಣ ಆಳ್ವ
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ತಾಲೂಕಿನ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಜನಪರ ಕಾರ್ಯಕ್ರಮಗಳು ಸಮಾಜದಲ್ಲಿ ಬದಲಾವಣೆಯನ್ನು ತರುವ ಕೆಲಸವನ್ನು ಮಾಡಿದೆ. ದುಶ್ಚಟಗಳನ್ನು ದೂರ ಮಾಡುವ ಮೂಲಕ ಅದೆಷ್ಟೋ ಮನೆಗಳಲ್ಲಿ ನೆಮ್ಮದಿಯನ್ನು ತಂದಿದೆ. ಹೆಗ್ಗಡೆಯವರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಹೇಳಿ ಶುಭ ಹಾರೈಸಿದರು.


ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾಡ ಕಾರ್ಯಗಳಿಲ್ಲ: ಶಶಿಧರ ಎಂ.
ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ ಎಂ.ರವರು ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಮಾಜ ಅಭಿವೃದ್ಧಿಗಾಗಿ ಮಾಡದ ಕಾರ್ಯಗಳಿಲ್ಲ.ಬಡವರ ಪರ ನಿಂತು ಬಡವರ ಬದುಕಲ್ಲೂ ಹೊಸ ಚೈತನ್ಯ ಮೂಡಬೇಕು ಎಂಬ ನಿಟ್ಟಿನಲ್ಲಿ ಬ್ಯಾಂಕ್‌ನೊಂದಿಗೆ ಇಪ್ಪಂದ ಮಾಡಿಕೊಂಡು ಇಂದು ಸ್ವಸಹಾಯ ಸಂಘಗಳಿಗೆ ಸಾಲ ಕೊಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಅಶಕ್ತರಿಗೆ ಮಾಶಾಸನ ಕೊಡುವ ವ್ಯವಸ್ಥೆ ಇದ್ದು ತಾಲೂಕಿನಲ್ಲಿ 220 ಮಂದಿ ಸೇರಿದಂತೆ ಸುಮಾರು 20 ಸಾವಿರ ಮಂದಿಗೆ ಮಾಶಾಸನ ಕೊಡುವ ಕೆಲಸ ಆಗುತ್ತಿದೆ. ಇಷ್ಟೆಲ್ಲಾ ಇದ್ದರೂ ಕ್ಷೇತ್ರದ ಮೇಲೆ ಅಪಪ್ರಚಾರ ಮಾಡುವ ಕೆಲಸ ಆಗಿದೆ. ಇದು ಸರಿಯಲ್ಲ ಕ್ಷೇತ್ರದಿಂದ ಸಮಾಜದ ಅಭಿವೃದ್ಧಿಗೆ, ಬಡವರ ಉದ್ದಾರಕ್ಕಾಗಿ ಮಾಡುತ್ತಿರುವ ಯೋಜನೆಗಳನ್ನು ಸರಿಯಾಗಿ ತಿಳಿದುಕೊಂಡರೆ ನಮಗೆ ಎಲ್ಲವೂ ಅರ್ಥ ಆಗುತ್ತದೆ. ಈ ಕೆಲಸವನ್ನು ಪ್ರತಿಯೊಬ್ಬರ ಮಾಡಬೇಕು ಎಂದು ಹೇಳಿದರು.


ಗ್ರಾಮದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ನನಗೆ ಯೋಜನೆ ಸಹಕಾರಿಯಾಗಿದೆ: ತ್ರಿವೇಣಿ ಪಲ್ಲತ್ತಾರು
ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ನಾನೊಬ್ಬಳು ಯೋಜನೆಯ ಸೇವಾ ಪ್ರತಿನಿಧಿಯಾಗಿರುವುದರಿಂದ ಗ್ರಾಮದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಾಧ್ಯವಾಗಿದೆ. ಸಾಮಾಜಿಕವಾಗಿ, ರಾಜಕೀಯವಾಗಿ ನನಗೆ ಮುಂದುವರಿಯಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಕಾರಿಯಾಗಿದೆ ಎಂದ ಅವರು, ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಮಾತಿನಂತೆ ನಮ್ಮ ಮಕ್ಕಳಿಗೆ ಧರ್ಮ ಶಿಕ್ಷಣದ ಅರಿವನ್ನು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ಯೋಜನೆಯಿಂದ ಗ್ರಾಮೀಣ ಜನರ ಬದುಕಲ್ಲಿ ಹೊಸ ಬೆಳಕು ಮೂಡಿದೆ: ರಾಜೇಶ್ ರೈ ಪರ್ಪುಂಜ
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ಶನೈಶ್ಚರ ಪೂಜಾ ಸಮಿತಿಯ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜರವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಜನರ ಬದುಕಲ್ಲಿ ಹೊಸ ಬೆಳಕು ಮೂಡಿಸುವ ಕೆಲಸವನ್ನು ಮಾಡಿದೆ. ಅದೆಷ್ಟೋ ಬಡ ಜನರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿದೆ.ಶನಿ ದೇವರ ಶಿಸ್ತು, ನ್ಯಾಯ, ಸತ್ಯದ ಪ್ರತೀಕವಾಗಿ ಕಾಣುತ್ತಾರೋ ಅದೇ ರೀತಿ ಯೋಜನೆಯು ನಮ್ಮ ಜೀವನದಲ್ಲಿ ಸತ್ಯ, ನ್ಯಾಯ ಮತ್ತು ಶಿಸ್ತನ್ನು ಮೂಡಿಸುವ ಕೆಲಸ ಮಾಡಿದೆ. ಶ್ರೀ ಶನೈಶ್ಚರ ದೇವರು ಸರ್ವರಿಗೂ ಸನ್ಮಂಗಳವನ್ನು ಉಂಟು ಮಾಡಲಿ ಎಂದು ಹೇಳಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಕುಂಬ್ರ ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ ಉಪಸ್ಥಿತರಿದ್ದರು. ಉಷಾ ನಾರಾಯಣ್ ಪ್ರಾರ್ಥಿಸಿದರು. ಶ್ರೀ ಶನೈಶ್ಚರ ಪೂಜಾ ಸಮಿತಿಯ ಜತೆ ಕಾರ್ಯದರ್ಶಿ ಚಂದ್ರ ಇದ್ಪಾಡಿ ಸ್ವಾಗತಿಸಿದರು.ಗೋವಿಂದ ಮಣಿಯಾಣಿ, ಅರುಣ್ ರೈ ಬಿಜಳ, ಸಂದೀಪ್, ಸೀತಾರಾಮ ಗೌಡ, ರಾಮಕೃಷ್ಣ ಮುಡಾಲ,ಅಮಿತಾ ರಮೇಶ್, ಶಾಲಿನಿ ರೈ ತೆಗ್ಗು, ಸುನಂದ ಬಲ್ಲಾಳ್ ಅತಿಥಿಗಳಿಗೆ ಶಾಲು, ಹೂಗುಚ್ಚ ನೀಡಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶಶಿಕಲಾ ರೈ ವಂದಿಸಿದರು. ಮೇಲ್ವಿಚಾರಕರಾದ ಸುನೀತಾ ಮತ್ತು ಶುಭಲತಾ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದ್ದರು.



ಸಂಘದ ಹಿರಿಯ ಸದಸ್ಯರಿಗೆ ಗೌರವಾರ್ಪಣೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನಲ್ಲಿ ೨೦೦೨ ರಲ್ಲಿ ಆರಂಭಗೊಂಡಿದ್ದು ಅಲ್ಲಿಂದ ಸತತ ೨೩ ವರ್ಷಗಳ ಕಾಲ ಯೋಜನೆಯ ಸದಸ್ಯರಾಗಿರುವ ಹಿರಿಯ ಸದಸ್ಯರುಗಳಾದ ಸಂಟ್ಯಾರು ಒಕ್ಕೂಟದ ಲೀಲಾವತಿ ನೀರ್ಕಜೆ,ಕುಂಬ್ರ ಒಕ್ಕೂಟದ ಸೀತಮ್ಮ, ಕುರಿಯ ಒಕ್ಕೂಟದ ಲಕ್ಷ್ಮೀ ಸಂಪ್ಯದಮೂಲೆ, ಕೆದಂಬಾಡಿ ಒಕ್ಕೂಟದ ರಘುನಾಥ ರೈ ಮಠ, ಆರ್ಯಾಪು ಒಕ್ಕೂಟದ ಯಶೋಧಾ ಮಗಿರೆ, ತ್ಯಾಗರಾಜ ಒಕ್ಕೂಟದ ಸೀತಮ್ಮ ಬಲ್ಲಾಳ್, ಶೇಖಮಲೆ ಒಕ್ಕೂಟದ ಸರಸ್ವತಿ ಶೇಖಮಲೆರವರಿಗೆ ಶಾಲು, ಫಲಪುಷ್ಪ ನೀಡಿ ಗೌರವಿಸಲಾಯಿತು.


ಮಂಜೂರಾತಿ ಪತ್ರ ವಿತರಣೆ
ಕುಂಬ್ರ ಭುವನೇಶ್ವರಿ ಸಂಘದ ರೇವತಿಯವರ ಪತಿ ನಿಧನಹೊಂದಿದ್ದು ಅವರ 1 ಲಕ್ಷ ರೂ.ಸಾಲ ಮನ್ನಾಗೊಂಡಿದ್ದು ಇದರ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು. ಅದರಂತೆ ಕುಂಬ್ರ ಜ್ಯೋತಿ ಸಂಘದ ನಾಗಮ್ಮರವರ ಪುತ್ರ ನಿಧನಹೊಂದಿದ್ದು ಅವರ 1 ಲಕ್ಷ ರೂ.ಸಾಲ ಮನ್ನಾಗೊಂಡಿದ್ದು ಇದರ ಮಂಜೂರಾತಿ ಪತ್ರ ಹಾಗೇ ಕುರಿಯ ಚಂದ್ರಾವತಿಯವ ಪತಿಗೆ ಚಿಕಿತ್ಸೆಗೆ ಸಂಪೂರ್ಣ ಸುರಕ್ಷಾ ಬಿಡುಗಡೆಗೊಂಡಿದ್ದು ಇದರ ಮಂಜೂರಾತಿ ಪತ್ರವನ್ನು ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.



ಸಾಮೂಹಿಕ ಶ್ರೀ ಶನೈಶ್ಚರ ಪೂಜೆ
ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯ ಕೊಡ್ಲಾರು ನೇತೃತ್ವದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ನಡೆಯಿತು. ಬೆಳಿಗ್ಗೆ ಭಜನೆ ಬಳಿಕ ಶ್ರೀ ಶನೈಶ್ಚರ ಪೂಜೆ ಆರಂಭಗೊಂಡು ಮಧ್ಯಾಹ್ನ ಮಹಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಊರಪರವೂರ ಭಕ್ತಾಧಿಗಳು ಸೇರಿದಂತೆ ನೂರಾರು ಮಂದಿ ಆಗಮಿಸಿ ಪ್ರಸಾದ ಸ್ವೀಕರಿಸಿ, ಅನ್ನಪ್ರಸಾದ ಸ್ವೀಕರಿಸಿದರು. ಅಪರಾಹ್ನ ಸ್ವಸಹಾಯ ಸಂಘದ ಸದಸ್ಯರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.


‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಶ್ರೀ ಶನೈಶ್ಚರ ಪೂಜಾ ಸಮಿತಿ ಮತ್ತು ಒಂದಷ್ಟು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶನೈಶ್ಚರ ಪೂಜೆ ನಡೆದಿದ್ದು ಸಹಕರಿಸಿದ ಸರ್ವರಿಗೂ ಶ್ರೀ ಶನಿದೇವರು ಸನ್ಮಂಗಳವನ್ನು ಉಂಟು ಮಾಡಲಿ ಎನ್ನುವ ಹಾರೈಕೆಯೊಂದಿಗೆ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.’
ರಾಜೇಶ್ ರೈ ಪರ್ಪುಂಜ, ಅಧ್ಯಕ್ಷರು ಶ್ರೀ ಶನೈಶ್ಚರ ಪೂಜಾ ಸಮಿತಿ ಕುಂಬ್ರ

LEAVE A REPLY

Please enter your comment!
Please enter your name here