






ಧರ್ಮಸ್ಥಳ ಬೀಡು ವಿದ್ಯುತ್ ಬಳಕೆದಾರರಿಂದ ಮನವಿ


ಉಪ್ಪಿನಂಗಡಿ: ಇಲ್ಲಿನ ಬೊಳ್ಳಾವು ಎಂಬಲ್ಲಿರುವ ಧರ್ಮಸ್ಥಳ ಬೀಡು ವಿದ್ಯುತ್ ಪರಿವರ್ತಕದ ವಿದ್ಯುತ್ ಬಳಕೆದಾರರು ಲೋ ವೋಲ್ಟೇಜ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಹಾಗೂ ಈ ವಿದ್ಯುತ್ ಪರಿವರ್ತಕದಿಂದ ಹೋಗಿರುವ ಸುಮಾರು 50 ವರ್ಷದಷ್ಟು ಹಳೆಯದಾದ ವಿದ್ಯುತ್ ತಂತಿಗಳನ್ನು ಬದಲಾಯಿಸಿ ನೂತನ ತಂತಿಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಮೆಸ್ಕಾಂ ಉಪ್ಪಿನಂಗಡಿ ಶಾಖೆಯ ಸಹಾಯಕ ಎಂಜಿನಿಯರ್ ನಿತಿನ್ ಕುಮಾರ್ ಅವರಿಗೆ ಇಲ್ಲಿನ ವಿದ್ಯುತ್ ಬಳಕೆದಾರರು ಮನವಿ ಸಲ್ಲಿಸಿದರು.



ಧರ್ಮಸ್ಥಳ ಬೀಡು ವಿದ್ಯುತ್ ಪರಿವರ್ತಕದಿಂದ ಲೋ ವೋಲ್ಟೇಜ್ನಲ್ಲಿ ವಿದ್ಯುತ್ ಬರುತ್ತಿದ್ದು, ಟಿ.ವಿ. ಸೇರಿದಂತೆ ಗೃಹೋಪಯೋಗಿ ಉಪಕರಣಗಳು ಕೂಡಾ ಚಾಲನೆಯಾಗುತ್ತಿಲ್ಲ. ನಾವೆಲ್ಲಾ ರೈತಾಪಿ ವರ್ಗದವರಾಗಿದ್ದು, ಲೋ ವೋಲ್ಟೇಜ್ನಿಂದಾಗಿ ಕೊಳವೆ ಬಾವಿಯಿಂದ ನೀರೆತ್ತಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ಕೃಷಿ ಒಣಗಿ ಹೋಗುವಂತಾಗಿದೆ. ಈ ವಿದ್ಯುತ್ ಪರಿವರ್ತಕದಿಂದ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ಅಳವಡಿಸಿ ಸುಮಾರು 50 ವರ್ಷವಾಗಿದೆ. ಈ ತಂತಿಗಳು ಇದೀಗ ಶಿಥಿಲಗೊಂಡಿದ್ದು, ಧಾರಣಾ ಸಾಮಥ್ಯ ಕಳೆದುಕೊಂಡಿವೆ. ಬೇಸಿಗೆಯ ಸಮಯದಲ್ಲಿ ಕೂಡಾ ಜೋರು ಗಾಳಿ ಬಂದಾಗ ತಂತಿಗಳು ತುಂಡಾಗಿ ಬೀಳುತ್ತಿವೆ. ಕಿ.ಮೀ.ವೊಂದಕ್ಕೆ ಈ ತಂತಿಯಲ್ಲಿ ಸುಮಾರು ೫೦ರಷ್ಟು ಜೋಡಣೆಗಳಿವೆ. ಲೋ ವೋಲ್ಟೇಜ್ ಸಮಸ್ಯೆಗೆ ಶಿಥಿಲಗೊಂಡಿರುವ ಈ ವಿದ್ಯುತ್ ತಂತಿಗಳು ಕೂಡಾ ಕಾರಣವಾಗಿವೆ. ಇದನ್ನು ಬದಲಾವಣೆ ಮಾಡಬೇಕೆಂದು ನಾವು ಎರಡು ವರ್ಷದ ಹಿಂದಿನಿಂದಲೇ ಮನವಿ ಕೊಡುತ್ತಾ ಬರುತ್ತಿದ್ದು, ಆದರೆ ಇಲಾಖೆಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈಗಿರುವ ಈಗ ಇಲ್ಲಿರುವ ವಿದ್ಯುತ್ ಪರಿವರ್ತಕ 63 ಕೆ.ವಿ.ಯದ್ದಾಗಿದ್ದು, ಇದನ್ನು ಮೇಲ್ದರ್ಜೆಗೇರಿಸಬೇಕು. ಆದ್ದರಿಂದ ನಮ್ಮ ಈ ಎಲ್ಲಾ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಿ ನಮ್ಮನ್ನು ಲೋ ವೋಲ್ಟೇಜ್ ವಿದ್ಯುತ್ ಸಮಸ್ಯೆಯಿಂದ ಮುಕ್ತಿಕೊಡಿಸಬೇಕು. ಇಲ್ಲದಿದ್ದಲ್ಲಿ ವಿವಿಧ ಸಂಘಟನೆಗಳನ್ನು ಜೋಡಿಸಿಕೊಂಡು ಹೋರಾಟ ನಡೆಸುವುದು ಅನಿವಾರ್ಯವೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)ದ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಅವರ ನೇತೃತ್ವದಲ್ಲಿ ಮನವಿ ನೀಡಿದ ನಿಯೋಗದಲ್ಲಿ ಧರ್ಮಸ್ಥಳ ಬೀಡು ವಿದ್ಯುತ್ ಪರಿವರ್ತಕದ ವಿದ್ಯುತ್ ಬಳಕೆದಾರರಾದ ರಾಮಣ್ಣ ಶೆಟ್ಟಿ ಬೊಳ್ಳಾವು, ಚಂದ್ರ ಗೌಡ ಬೊಳ್ಳಾವು, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಚಂದಪ್ಪ ಗೌಡ ಬೊಳ್ಳಾವು, ಆನಂದ ನೆಡ್ಚಿಲ್, ಪ್ರವೀಣ ನೆಡ್ಚಿಲ್, ಶಂಕರ ನೆಡ್ಚಿಲ್, ದೇವಕಿ ನೆಡ್ಚಿಲ್, ಯಶೋಧಾ ನೆಡ್ಚಿಲ್, ಸುಮಿತ್ರಾ ನೆಡ್ಚಿಲ್, ಪೂಜಾ ನೆಡ್ಚಿಲ್ ಉಪಸ್ಥಿತರಿದ್ದರು.










