







ವಿಟ್ಲ: ಇತಿಹಾಸ ಪ್ರಸಿದ್ಧ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಉತ್ಸವದ ಅಂಗವಾಗಿ ಜ. 21 ರಂದು ರಾತ್ರಿ ಶ್ರೀ ದೇವರ ಮಹಾರಥೋತ್ಸವ ಮತ್ತು ಐತಿಹಾಸಿಕ ವಿಟ್ಲ ಬೆಡಿ ನಡೆಯಿತು. ಈ ಸಂಭ್ರಮಕ್ಕೆ ಸಹಸ್ರಾರು ಸಂಖ್ಯೆಯ ಭಕ್ತ ಸಮೂಹ ಸಾಕ್ಷಿಯಾಯಿತು.


ಸಂಜೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮಿಸಿದ ಬಳಿಕ ದೇವಾಲಯದ ಒಳಾಂಗಣದಲ್ಲಿ ಬಲಿ ಉತ್ಸವ ನಡೆದು, ಹೊರಾಂಗಣದಲ್ಲಿ ಒಂದು ಸುತ್ತು ಬಲಿ ನಡೆದು, ದೇವರು ರಥಗದ್ದೆಗೆ ತೆರಳಿದರು. ರಥಗದ್ದೆಯಲ್ಲಿ ಕೊಡಮಣಿತ್ತಾಯ ದೈವದ ಭೇಟಿಯಾಗಿ ಬಳಿಕ ರಥಾರೂಢರಾದರು. ರಥದಲ್ಲಿ ದೇವರಿಗೆ ಪೂಜೆ ನೆರವೇರಿದ ಬಳಿಕ ಚಿತ್ತಾಕರ್ಷಕ ವರ್ಣಮಯ ’ವಿಟ್ಲ ಬೆಡಿ’ ಪ್ರದರ್ಶನ ಗೊಂಡಿತು. ನಂತರ ಸಹಸ್ರಾರು ಭಕ್ತಾದಿಗಳ ಜಯಘೋಷದೊಂದಿಗೆ ದೇವರ ಮಹಾ ರಥೋತ್ಸವ ನಡೆಯಿತು. ಊರ ಪರವೂರ ಸಾವಿರಾರು ಭಕ್ತಾದಿಗಳು ಮಹಾರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು. ರಥೋತ್ಸವದ ಬಳಿಕ ದೇವರ ಬೀದಿ ಮೆರವಣಿಗೆ, ಶಯನೋತ್ಸವ ನಡೆಯಿತು.



ಬೆಳಿಗ್ಗೆ ಕ್ಷೇತ್ರದಲ್ಲಿ ದರ್ಶನ ಬಲಿ, ರಾಜಾಂಗಣದ ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಹರಿದುಬಂದ ಭಕ್ತಸಮೂಹ:
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಊರ-ಪರವೂರಿನ ಸಾವಿರಾರು ಭಕ್ತಾದಿಗಳು ಬೆಳಗ್ಗಿನಿಂದಲೇ ದೇವಾಲಯಕ್ಕೆ ಆಗಮಿಸಲಾರಂಭಿಸಿದರು. ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ತೆರಳುವ ಎಲ್ಲಾ ಒಳರಸ್ತೆಯಲ್ಲಿ ಬೆಳಗ್ಗಿನಿಂದಲೇ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.
ಎಲ್ಲೆಡೆ ಪೊಲೀಸ್ ಸರ್ಪಗಾವಲು:
ವಿಟ್ಲ ರಥೋತ್ಸವದ ಪ್ರಯುಕ್ತ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ರವರ ನೇತೃತ್ವದಲ್ಲಿ ಬಂದೋಬಸ್ತ್ ನಡೆಸಲಾಗಿತ್ತು. ವಿವಿಧ ಕಡೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿತ್ತು. ದೇವಾಲಯದ ಜಾತ್ರಾ ಗದ್ದೆ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಶೇಷ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಹಿತಕರ ಘಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಕಳ್ಳರ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸರು ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ದೇವಸ್ಥಾನದ ಸಮೀಪ ಸಾರ್ವಜನಿಕರಿಗೆ ಸಹಾಯವಾಗಲೆಂದು ಪೊಲೀಸ್ ಔಟ್ ಪೋಸ್ಟ್ ತೆರೆಯಲಾಗಿತ್ತು.










