






ವಿಶೇಷ ವರದಿ; ಗಂಗಾಧರ ನಿಡ್ಪಳ್ಳಿ


ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಕೆರೆ ಇರ್ದೆ ಬೆಂದ್ರ್ ತೀರ್ಥ ಗುಂಡಿಯ ಅಡಿ ಭಾಗದ ಕಲ್ಲನ್ನು ಸುಮಾರು ಏಳು ಫೀಟ್‌ನಷ್ಟು ಒಡೆದು ತೆಗೆದು, ಸಮತಟ್ಟು ಮಾಡುವ ಕಾರ್ಯವನ್ನು ಶಿವಾಜಿ ಯುವ ಸೇನೆಯ ಉತ್ಸಾಹಿ ಯುವಕರ ತಂಡ ಮಾಡಿದೆ.



ಪ್ರತಿ ವರ್ಷ ಬೇಸಿಗೆಯಲ್ಲಿ ಪ್ರವಾಸಿಗರು ಮತ್ತು ಭಕ್ತರು ಬೆಂದ್ರ್ ತೀರ್ಥಕ್ಕೆ ಬರುವಾಗ ತೀರ್ಥ ಗುಂಡಿ ಬತ್ತಿ ಹೋಗಿರುವುದನ್ನು ನೋಡಿ ನಿರಾಸೆಯಿಂದ ಹಿಂತಿರುಗುತ್ತಿದ್ದರು.ಇದನ್ನು ಮನಗಂಡ ಇರ್ದೆ ಶಿವಾಜಿ ಯುವಸೇನೆಯ ಕಾರ್ಯಕರ್ತರು ಬೆಂದ್ರ್ ತೀರ್ಥ ಅಭಿವೃದ್ಧಿಗೆ ಪಣ ತೊಟ್ಟರು. ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಅಽನದಲ್ಲಿ ಈ ಕ್ಷೇತ್ರ ಇದೆ. ಆದರೆ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ.ಇಲ್ಲಿ ಒಂದು ಪ್ರವಾಸಿ ಮಂದಿರ ನಿರ್ಮಾಣವಾದರೂ ಅದರಲ್ಲಿ ಸರಿಯಾದ ವ್ಯವಸ್ಥೆಗಳು ಆಗಿಲ್ಲ. ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ನಡೆಯದೆ ಇರುವುದು ಇಲ್ಲಿಯ ಯುವಕರು ಹಾಗೂ ಪ್ರವಾಸಿಗರಿಂದ ದೂರು ಬರುತ್ತಲೇ ಇತ್ತು. ಇದೀಗ ಶಿವಾಜಿ ಯುವ ಸೇನೆ ಸಂಘಟನೆಯು ಇಲ್ಲಿ ದಶಕದ ಸಂಭ್ರಮದಲ್ಲಿ ಈ ಅಭಿವೃದ್ಧಿ ಕಾರ್ಯ ಕೈಗೆತ್ತಿ ಕೊಂಡು ಯಶಸ್ವಿಯಾಗಿದ್ದಾರೆ. ಈ ಕಾರ್ಯಾರಂಭಕ್ಕೆ ಮೊದಲು ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ಇದೀಗ ಕೆಲಸವು ಸುವ್ಯವಸ್ಥಿತವಾಗಿ ನಡೆದು ಜ.20 ರಂದು ರಾತ್ರಿ ಗಂಟೆ 11 ರವರೆಗೆ ನಡೆಸಿ ಈಗ ಕೆಲಸ ನಿಲ್ಲಿಸಲಾಗಿದೆ.
ಮೊದಲಿಗೆ ಕಲ್ಲನ್ನು ಒಡೆದಿದ್ದು, ನಂತರ ಸಣ್ಣ ಜೆ.ಸಿ.ಬಿ ಹಾಗೂ ಕಂಪ್ರೆಸರ್ ಯಂತ್ರದ ಸಹಾಯದಿಂದ ಕಲ್ಲನ್ನು ಹೊರತೆಗೆಯುವ ಕಾರ್ಯ ನಡೆಸಲಾಯಿತು.ಬೆಂದ್ರ್ ತೀರ್ಥದ ಪರಿಸರವನ್ನು ಸದಾ ಸ್ವಚ್ಛವಾಗಿ, ಸುಂದರವಾಗಿ ಕಾಪಾಡಿ ಅದನ್ನು ಮುಂದಿನ ದಿನಗಳಲ್ಲಿ ಒಂದು ಆಕರ್ಷಕ ಪುಣ್ಯಕ್ಷೇತ್ರವನ್ನಾಗಿ ರೂಪಿಸಬೇಕೆಂಬ ಉದ್ದೇಶದಿಂದ ಶ್ರಮಿಸುತ್ತಿರುವ ಶಿವಾಜಿ ಯುವ ಸೇನೆಯ ಎಲ್ಲಾ ಸದಸ್ಯರ ಸಾಮಾಜಿಕ ಧಾರ್ಮಿಕ ಯೋಚನೆಯೊಂದಿಗೆ ಸುಮಾರು ರೂ.1 ಲಕ್ಷದ ಅಂದಾಜಿನ ಕಾರ್ಯ ನಡೆದಿದೆ.ಇದಕ್ಕೆ ಎಲ್ಲರ ಸಹಕಾರ ಹಾಗೂ ಸರಕಾರವೂ ಈ ಕಡೆಗೆ ಗಮನ ಹರಿಸಿ ಅಭಿವೃದ್ಧಿ ಮಾಡಿದರೆ ಒಂದು ಉತ್ತಮ ಪ್ರವಾಸೋದ್ಯಮ ಕೇಂದ್ರವಾಗ ಬಹುದು.ಒಣಗಿ ಹೋಗುತ್ತಿದ್ದ ಈ ಸಂದರ್ಭದಲ್ಲಿ ಇದೀಗ ಕೆಲ ದಿನಗಳ ಕೆಲಸ ಕಾರ್ಯಗಳಿಂದ ಕೆರೆಯಾಳದಿಂದ ಎರಡರಿಂದ ಎರಡೂವರೇ ಅಡಿ ನೀರು ಬಂದಿದೆ. ಜಾತ್ರೋತ್ಸವದ ಸಂದರ್ಭ ಈ ಕೆರೆಯ ಪವಿತ್ರ ಜಲದಿಂದಲೇ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವರ ಬಿಂಬಕ್ಕೆ ಜಲಾಭಿಷೇಕ ಮಾಡಿ ಮುಂದಿನ ಧಾರ್ಮಿಕ ವಿಽವಿಧಾನ ಗಳಿಗೆ ಮುಂದಾಗುವುದು.ಶಿವಾಜಿ ಯುವ ಸೇನೆಯ ಸರ್ವರೂ ಕಳೆದ ಒಂಬತ್ತು ವರ್ಷಗಳಿಂದ ಈ ಕೆರೆಯ ಸ್ವಚ್ಛತೆ ಕಾರ್ಯಕ್ರಮಗಳನ್ನು ಕೈಗೊಂಡು ಇದೀಗ ಹತ್ತನೇ ವರ್ಷದ ಸಂದರ್ಭ ದೈವ ದೇವರ ಸಂಕಲ್ಪದಂತೆ,ಊರ ಹಿರಿಯರ ಅನುಗ್ರಹದಂತೆ ಮುಂದಿನ ಹೆಜ್ಜೆ ಇಟ್ಟಿದ್ದಾರೆ.
ಇಲಾಖೆ ಇನ್ನಾದರೂ ಗಮನ ಹರಿಸಬೇಕು
ಪ್ರವಾಸೋದ್ಯಮ ಇಲಾಖೆಯವರು ಆಗಾಗ ಬಂದು ಹೋಗುತ್ತಿದ್ದರು. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ರಾಜಕೀಯ ಪಕ್ಷ ಹಾಗೂ ಅಧಿಕಾರಿಗಳಿಗೆ ಇಚ್ಚಾಶಕ್ತಿ ಇಲ್ಲ.ಹಾಗಾಗಿ ನಾವು ಜ.16 ರಿಂದ 20 ರವರೆಗೆ ಯಂತ್ರ ಬಳಸಿ ಗುಂಡಿ ತೋಡುವ ಕಾರ್ಯ ಆರಂಭಿಸಿ ಸುಮಾರು 7 ಫೀಟ್ ಆಳ ಆಗಿದೆ.ಸುಮಾರು 80 ಸಾವಿರದಿಂದ 90 ಸಾವಿರದವರೆಗೆ ಖರ್ಚು ತಗಲಿರಬಹುದು.ಈ ಕಾರ್ಯದಿಂದ ಅಲ್ಲಿಯ ಅಭಿವೃದ್ಧಿ ಕೆಲಸಕ್ಕೆ ಇಲಾಖೆ ಇನ್ನಾದರೂ ಗಮನ ಹರಿಸಬಹುದು ಎಂಬ ವಿಶ್ವಾಸ ನಮಗಿದೆ.
ಧನ್ಯರಾಜ್, ಅಧ್ಯಕ್ಷರು
ಶಿವಾಜಿ ಯುವ ಸೇನೆ, ಇರ್ದೆ.
ಯುವಕರ ಕಾರ್ಯಕ್ಕೆ ಮೆಚ್ಚಬೇಕು
ಶಿವಾಜಿ ಯುವ ಸೇನೆಯ ಯುವಕರ ಕಾರ್ಯಕ್ಕೆ ಮೆಚ್ಚಲೇ ಬೇಕು.ಬೆಂದ್ರ್ ತೀರ್ಥ ಅಭಿವೃದ್ಧಿ ಆಗ ಬೇಕೆಂಬ ಕೂಗು ನಿನ್ನೆ ಇಂದಿನದಲ್ಲ. ಅದರ ಅಭಿವೃದ್ಧಿಗೆ ಈಗ ಯುವಕರು ಕೈ ಹಾಕಿ ಕೆಲಸ ಮಾಡಿದಕ್ಕೆ ಪಂಚಾಯತ್ ವತಿಯಿಂದ ಅಭಿನಂದಿಸುತ್ತೇವೆ. ಇನ್ನಾದರೂ ಸರಕಾರ, ಪ್ರವಾಸೋದ್ಯಮ ಇಲಾಖೆ ಮುತುವರ್ಜಿ ವಹಿಸಿ ಅಭಿವೃದ್ಧಿ ಕಾರ್ಯ ನಡೆಸಲಿ ಎಂಬುದೇ ನಮ್ಮ ಒತ್ತಾಯವಾಗಿದೆ.ಗ್ರಾಮ ಪಂಚಾಯತ್ ನಿಂದ ಅದು ಸಾಧ್ಯವಾಗುವುದಲ್ಲ ಆದರೆ ನಮ್ಮ ಸಹಕಾರ ಇದೆ.
ವಿದ್ಯಾಶ್ರೀ ಸರಳಿಕಾನ, ಅಧ್ಯಕ್ಷರು, ಗ್ರಾ.ಪಂ.ಬೆಟ್ಟಂಪಾಡಿ










