






ಪುತ್ತೂರು: ಪುತ್ತೂರು ತಾಲ್ಲೂಕಿನ ಬಜತ್ತೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 2025–26ನೇ ಸಾಲಿನ ವಿಕಲಚೇತನರ ವಿಶೇಷ ಗ್ರಾಮ ಸಭೆಯು ಜ.21ರಂದು ನಡೆಯಿತು. ಸಭೆಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಪಿ.ಎನ್. ಅವರು ಅಧ್ಯಕ್ಷತೆ ವಹಿಸಿದ್ದರು.



ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ, ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ ಕೆ., ಹಾಗೂ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ ಕೆ. ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ತಾಲ್ಲೂಕು ಪಂಚಾಯತ್ ವಿಶೇಷ ಚೇತನರ ಬಹುಉದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಅವರು ವಿಕಲಚೇತನರ ವಿಶೇಷ ಗ್ರಾಮ ಸಭೆಯ ಉದ್ದೇಶ, 21 ವಿಧದ ವಿಕಲತೆಗಳು, ಹಾಗೂ ವಿಕಲಚೇತನರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಬಜತ್ತೂರು ಗ್ರಂಥಾಲಯ (ಅರಿವು ಕೇಂದ್ರ)ದಲ್ಲಿ ವಿಕಲಚೇತನರಿಗೆ ಲಭ್ಯವಿರುವ ಸಹಾಯಕ ಸಾಧನಗಳು, ಬ್ರೈಲ್ ಲಿಪಿ ಪುಸ್ತಕಗಳು, ಅಬಾಕಸ್, ಬ್ರೈಲ್ ಹಾವು–ಏಣಿ ಆಟ ಸೇರಿದಂತೆ ದೃಷ್ಟಿಹೀನರಿಗೆ ಉಪಯುಕ್ತವಾದ ಸಾಧನಗಳ ಕುರಿತು ಮಾಹಿತಿ ನೀಡಿದರು.
ವಿಕಲಚೇತನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ಯು.ಡಿ.ಐ.ಡಿ (UDID) ವಿಶೇಷ ಗುರುತಿನ ಚೀಟಿ, ಪಿಂಚಣಿ, ಆರೋಗ್ಯ ಸೌಲಭ್ಯಗಳು, ವಿಕಲಚೇತನರ ಕಾಯ್ದೆ–2016, ಹಿರಿಯ ನಾಗರಿಕರ ಕಾಯ್ದೆ, ವಿಕಲಚೇತನರ ಆರೈಕೆದಾರರ ಪಿಂಚಣಿ, ಮಾನಸಿಕ ಆರೋಗ್ಯ ಸಹಾಯವಾಣಿ ‘ಟೆಲಿ ಮನಸ್ 14416’, ಹಾಗೂ ವಿಕಲಚೇತನ ಸ್ನೇಹಿ ವಾತಾವರಣದ ಬಗ್ಗೆ ವಿವರಿಸಿದರು.
ಪುತ್ತೂರು ಕೆನರಾ ಬ್ಯಾಂಕ್ನ ಅಮೂಲ್ಯ ಆರ್ಥಿಕ ಸಾಕ್ಷರತಾ ಆಪ್ತ ಸಮಾಲೋಚಕಿ ಗೀತಾ ವಿಜಯ್ ಅವರು ಬ್ಯಾಂಕ್ ಖಾತೆ ನಿರ್ವಹಣೆ ಹಾಗೂ ಆರೋಗ್ಯ ವಿಮೆಯ ಕುರಿತು ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ ಅವರು ವಿಕಲಚೇತನರಿಗೆ ಮೀಸಲಾಗಿರುವ 5% ಅನುದಾನದ ಕುರಿತು ತಿಳಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಕುಮಾರಿ ಐಸಿಂತಾ ಪ್ರಜ್ವಲ್ ವೇಗಸ್ ಅವರು ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಗಳು, ವಿಕಲಚೇತನರು ಮತ್ತು ಪೋಷಕರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.










