






ಹಸಿರು ಗದ್ದೆಗಳ ನಡುವೆ ಹರಿಯುವ ನೀರು, ಮಣ್ಣಿನ ಸುವಾಸನೆ, ಜನರ ಸಂಭ್ರಮದ ಕೂಗು ಮತ್ತು ಶಕ್ತಿಯ ಪ್ರತೀಕವಾದ ಎಮ್ಮೆಜೋಡಿಯ ವೇಗ. ಇವೆಲ್ಲ ಒಂದಾಗಿ ರೂಪುಗೊಳ್ಳುವ ದೃಶ್ಯವೇ ತುಳುನಾಡಿನ ಸಂಸ್ಕೃತಿಯ ಜೀವಂತ ಚಿತ್ರ. ಇದು ಕೇವಲ ಒಂದು ದಿನದ ಉತ್ಸವವಲ್ಲ ಶತಮಾನಗಳಿಂದ ಈ ನೆಲದ ಜನರ ಬದುಕಿನ ಭಾಗವಾಗಿ ಬೆಳೆದ ಪರಂಪರೆ. ಕೃಷಿ, ಭಕ್ತಿ, ಶ್ರಮ ಮತ್ತು ಸಂಭ್ರಮ ಒಂದೇ ವೇದಿಕೆಯಲ್ಲಿ ಸೇರುವ ಈ ಆಚರಣೆ ತುಳುನಾಡಿನ ಆತ್ಮವನ್ನೇ ಪ್ರತಿಬಿಂಬಿಸುತ್ತದೆ.


ಈ ಪರಂಪರೆಯೇ ಕಂಬಳ. ಕಂಬಳವು ಕೇವಲ ಕ್ರೀಡೆ ಅಲ್ಲ ಅದು ತುಳುನಾಡಿನ ಜನಜೀವನದ ಅವಿಭಾಜ್ಯ ಅಂಗ. ಮಣ್ಣು, ನೀರು ಮತ್ತು ಎಮ್ಮೆ. ಈ ಮೂರರ ಸಂಗಮದಿಂದ ಹುಟ್ಟಿದ ಸಂಸ್ಕೃತಿಯೇ ಕಂಬಳ. ಇದು ಗ್ರಾಮೀಣ ಬದುಕಿನ ಶ್ರಮವನ್ನು, ಪ್ರಕೃತಿಯೊಂದಿಗಿನ ಸಂಬಂಧವನ್ನು ಮತ್ತು ಜನರ ಒಗ್ಗಟ್ಟನ್ನು ಸಾರುತ್ತದೆ.



ಕಂಬಳದ ಮೂಲ ಕೃಷಿ ಸಂಸ್ಕೃತಿಯಲ್ಲಿ ಇದೆ. ತುಳುನಾಡು ಭತ್ತದ ಕೃಷಿಗೆ ಪ್ರಸಿದ್ಧ ಪ್ರದೇಶ. ಮಳೆಗಾಲದಲ್ಲಿ ನೀರು ತುಂಬಿದ ಗದ್ದೆಗಳಲ್ಲಿ ಕೃಷಿ ಕಾರ್ಯಕ್ಕಾಗಿ ಎಮ್ಮೆಗಳನ್ನು ಬಳಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಎಮ್ಮೆಗಳ ಶಕ್ತಿ ಮತ್ತು ವೇಗವನ್ನು ಪರೀಕ್ಷಿಸುವ ಉದ್ದೇಶದಿಂದ ಆರಂಭವಾದ ಓಟ ಮುಂದೆ ಸಂಪ್ರದಾಯವಾಗಿ ಬೆಳೆದಿತು. ಆರಂಭದಲ್ಲಿ ಇದು ದೇವರಿಗೆ ಅರ್ಪಿಸುವ ಸೇವೆಯಾಗಿ ನಡೆಯುತ್ತಿದ್ದು, ಉತ್ತಮ ಬೆಳೆ ಮತ್ತು ನೆಮ್ಮದಿಗಾಗಿ ದೈವ–ದೇವತೆಗಳ ಆರಾಧನೆಯ ಭಾಗವಾಗಿತ್ತು.
ಕಂಬಳದಲ್ಲಿ ಎಮ್ಮೆಗಳಿಗೆ ನೀಡುವ ಗೌರವ ವಿಶಿಷ್ಟ. ಎಮ್ಮೆಗಳನ್ನು ಕೇವಲ ಪ್ರಾಣಿಗಳಂತೆ ಅಲ್ಲ, ಕುಟುಂಬದ ಸದಸ್ಯರಂತೆ ಕಾಣಲಾಗುತ್ತದೆ. ಅವುಗಳ ಆರೈಕೆ, ಆಹಾರ, ತರಬೇತಿ ಎಲ್ಲವೂ ಪ್ರೀತಿ ಮತ್ತು ಜವಾಬ್ದಾರಿಯಿಂದ ನಡೆಯುತ್ತದೆ. ಸ್ಪರ್ಧೆಗೆ ಮುನ್ನ ಎಮ್ಮೆಗಳಿಗೆ ಸ್ನಾನ ಮಾಡಿಸಿ, ಅಲಂಕರಿಸಿ, ಪೂಜೆ ಸಲ್ಲಿಸುವುದು ಸಂಪ್ರದಾಯ. ಎಮ್ಮೆ ಮತ್ತು ಯಜಮಾನನ ನಡುವಿನ ನಂಬಿಕೆ ಹಾಗೂ ಹೊಂದಾಣಿಕೆಯೇ ಕಂಬಳದ ಯಶಸ್ಸಿನ ಮೂಲ.
ಕಂಬಳ ನಡೆಯುವ ದಿನ ಊರೇ ಹಬ್ಬದ ವಾತಾವರಣಕ್ಕೆ ತಿರುಗುತ್ತದೆ. ಬೆಳಗ್ಗಿನಿಂದಲೇ ಜನರು ಕಂಬಳ ಕಣದತ್ತ ಆಗಮಿಸುತ್ತಾರೆ. ಮಕ್ಕಳು, ಯುವಕರು, ಹಿರಿಯರು ಎಲ್ಲರ ಮುಖದಲ್ಲೂ ಉತ್ಸಾಹ. ಡೊಳ್ಳು, ತಾಸೆ, ಜನಪದ ವಾದ್ಯಗಳ ಧ್ವನಿ, ತುಳು ಹಾಡುಗಳು ಮತ್ತು ಜನರ ಕೇಕೆಗಳು ವಾತಾವರಣವನ್ನು ಜೀವಂತಗೊಳಿಸುತ್ತವೆ. ಎಮ್ಮೆಜೋಡಿ ಗದ್ದೆಯಲ್ಲಿ ಓಡಿದಾಗ ನೀರು ಚಿಮ್ಮುತ್ತಾ, ಮಣ್ಣು ಹಾರುತ್ತಾ ಸೃಷ್ಟಿಯಾಗುವ ದೃಶ್ಯ ನೋಡುವುದು ಎಲ್ಲರಲ್ಲೂ ರೋಮಾಂಚನ ಮೂಡಿಸುತ್ತದೆ.
ಈ ಸಂಪ್ರದಾಯ ಸಮಾಜವನ್ನು ಒಂದಾಗಿ ಕೊಂಡೊಯ್ಯುವ ಶಕ್ತಿ ಹೊಂದಿದೆ. ಇಲ್ಲಿ ಜಾತಿ, ಧರ್ಮ, ವರ್ಗಗಳ ಬೇಧ ಇಲ್ಲ. ಎಲ್ಲರೂ ಒಂದೇ ನೆಲದ ಮಕ್ಕಳು ಎಂಬ ಭಾವನೆಯೇ ಮುಖ್ಯ. ಕಂಬಳವು ಜನರನ್ನು ಒಗ್ಗಟ್ಟಿನಲ್ಲಿ ಕಟ್ಟಿ ಹಾಕುವ ಜೊತೆಗೆ ಗ್ರಾಮೀಣ ಸಂಸ್ಕೃತಿಯನ್ನು ಉಳಿಸುತ್ತದೆ. ಪರಸ್ಪರ ಸಹಕಾರ, ಗೌರವ ಮತ್ತು ಸಂಭ್ರಮದ ಮೌಲ್ಯಗಳನ್ನು ಇದು ಬೋಧಿಸುತ್ತದೆ.
ಕಾಲದೊಂದಿಗೆ ಕಂಬಳವೂ ಬದಲಾವಣೆಯನ್ನು ಸ್ವೀಕರಿಸಿದೆ. ಇಂದಿನ ದಿನಗಳಲ್ಲಿ ಇದು ಹೆಚ್ಚು ಸಂಘಟಿತ ಮತ್ತು ನಿಯಮಬದ್ಧ ರೂಪ ಪಡೆದಿದೆ. ವಿವಿಧ ವರ್ಗಗಳು, ದಾಖಲೆಗಳು, ಬಹುಮಾನಗಳ ವ್ಯವಸ್ಥೆ ಇದ್ದರೂ ಅದರ ಮೂಲ ಆತ್ಮ ಇನ್ನೂ ಅದೆ ರೀತಿ ಉಳಿದಿದೆ. ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಈ ಸಮತೋಲನವೇ ಕಂಬಳದ ವೈಶಿಷ್ಟ್ಯ.
ಇತ್ತೀಚಿನ ವರ್ಷಗಳಲ್ಲಿ ಕಂಬಳವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಹೆಚ್ಚಿನ ಗಮನ ಸೆಳೆಯುತ್ತಿದೆ. ಯುವ ಪೀಳಿಗೆಯೂ ಈ ಪರಂಪರೆಯ ಮಹತ್ವವನ್ನು ಅರಿಯುತ್ತಿರುವುದು ಸಂತಸದ ಸಂಗತಿ. ಆದರೆ ಈ ಸಂಸ್ಕೃತಿಯನ್ನು ಉಳಿಸುವ ಹೊಣೆ ನಮ್ಮ ಮೇಲಿದೆ. ಕಂಬಳವನ್ನು ಕೇವಲ ಮನರಂಜನೆಯಾಗಿ ನೋಡದೆ, ಒಂದು ಸಂಸ್ಕೃತಿಯ ಪರಂಪರೆಯಾಗಿ ಗೌರವಿಸಬೇಕು.
ಕಂಬಳವು ತುಳುನಾಡಿನ ಗುರುತು. ಇದು ನಮ್ಮ ಪೂರ್ವಜರು ನಮಗೆ ಕೊಟ್ಟ ಅಮೂಲ್ಯ ವರಸ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಕರ್ತವ್ಯ. ಮಣ್ಣಿನೊಂದಿಗೆ, ಪ್ರಕೃತಿಯೊಂದಿಗೆ, ಜನರ ಭಾವನೆಗಳೊಂದಿಗೆ ಬೆಸೆದುಕೊಂಡಿರುವ ಈ ಸಂಸ್ಕೃತಿ ಎಂದಿಗೂ ನಾಶವಾಗದಿರಲಿ. ತುಳುನಾಡಿನ ಉಸಿರಾಗಿರುವ ಕಂಬಳ ಶಾಶ್ವತವಾಗಿ ಜೀವಂತವಾಗಿರಲಿ.
-ಅಶ್ವಿತ್ ರೈ, ಅಮೈ ಭಂಡಸಾಲೆ
ಅಂಬಿಕಾ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು










