






ಉಮೇಶ್ ಶೆಟ್ಟಿಯವರ ಕಾರ್ಯದಕ್ಷತೆಯಿಂದ ಸಂಘಕ್ಕೆ ಉತ್ತಮ ಹೆಸರು; ಶಶಿಕುಮಾರ್ ರೈ


ನೆಲ್ಯಾಡಿ: ಜ.13ರಂದು ನಿಧನರಾದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ದಿ| ಉಮೇಶ್ ಶೆಟ್ಟಿ ಮೂಡಂಬೈಲ್ಗುತ್ತು ಅವರಿಗೆ ನುಡಿನಮನ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಜ.24ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.




ನುಡಿನಮನ ಸಲ್ಲಿಸಿದ ದ.ಕ.ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷರೂ, ಸಹಕಾರಿ ಯೂನಿಯನ್ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು, ಹಲವು ಏಳು ಬೀಳುಗಳ ನಡುವೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೂ ಎದ್ದುನಿಂತಿದೆ. ಉಮೇಶ್ ಶೆಟ್ಟಿಯವರ ಕಾರ್ಯದಕ್ಷತೆಯಿಂದ ಜಿಲ್ಲೆಯಲ್ಲೇ ಉತ್ತಮ ಸಹಕಾರಿ ಸಂಘ ಎಂದು ಹೆಸರು ಪಡೆದುಕೊಂಡಿದೆ. ಅವರ ಅವಧಿಯಲ್ಲಿ ಎರಡು ಶಾಖೆ, ಕೇಂದ್ರ ಕಚೇರಿ ಹಾಗೂ ಶಾಖೆಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಿದೆ. ಸಂಘದಲ್ಲಿ ಸತತ ಶೇ.100 ಸಾಲ ವಸೂಲಾತಿಗೂ ಉಮೇಶ್ ಶೆಟ್ಟಿ ಅವರು ಕಾರಣಕರ್ತರು. ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಸತತವಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರೊಬ್ಬ ಶ್ರಮಜೀವಿ. ಸಂಘಜೀವಿ. ಸದಾ ಸಂಸ್ಥೆಯ ಬಗ್ಗೆಯೇ ಚಿಂತಿಸುತ್ತಿದ್ದರು. ಅವರ ಅಗಲುವಿಕೆ ಅವರ ಕುಟುಂಬಕ್ಕೂ, ಸಂಘದ ಸದಸ್ಯರಿಗೂ ದು:ಖ ತಂದಿದೆ. ಅವರ ಹೆಸರು ನೆಲ್ಯಾಡಿ, ಪುತ್ತೂರು, ಸುಳ್ಯ ಭಾಗದಲ್ಲಿ ಅಮರವಾಗಿರಲಿ ಎಂದರು.
ಸೇವಾಮನೋಭಾವ ನಮಗೆ ಮಾದರಿ;
ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಉಮೇಶ್ ಶೆಟ್ಟಿ ಅವರು 30 ವರ್ಷ, ಆರು ಅವಧಿಗೆ ಅಧ್ಯಕ್ಷರಾಗಿ ಎಲ್ಲಾ ನಿರ್ದೇಶಕರನ್ನೂ ಜೊತೆಯಾಗಿ ಸೇರಿಸಿಕೊಂಡು ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅವರ ಅವಧಿಯಲ್ಲಿ ಸಂಘಕ್ಕೆ ಸತತವಾಗಿ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಪ್ರಶಸ್ತಿಯೂ ಬಂದಿದೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರಿಂದಲೂ ವಿಶೇಷ ಸನ್ಮಾನ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಾರತೀಯ ಜನತಾ ಪಾರ್ಟಿಯಲ್ಲೂ ಸಕ್ರಿಯರಾಗಿದ್ದರು. ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ರಾಜಕೀಯ, ಧಾರ್ಮಿಕ, ಸಾಮಾಜಿಕ ಸಹಿತ ವಿವಿಧ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಅವರ ಸೇವಾಮನೋಭಾವ ನಮಗೆಲ್ಲರಿಗೂ ಮಾದರಿಯಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ದುಡ್ಡಿನ ಹಿಂದೆ ಎಂದೂ ಹೋದವರಲ್ಲ;
ಸಂಘದ ಕಾನೂನು ಸಲಹೆಗಾರರೂ ಆದ ನೋಟರಿ, ನ್ಯಾಯವಾದಿ ಶಿವಪ್ರಸಾದ್ ಇ.ಮಾತನಾಡಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಉಳಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರೆಲ್ಲಾ ಸೇರಿಕೊಂಡು 1994-95ರಲ್ಲಿ ಉಮೇಶ್ ಶೆಟ್ಟಿಯವರಿಗೆ ನೇತೃತ್ವ ನೀಡಿದ್ದರು. ಆಡಳಿತದ ಅನುಭವವೇ ಇಲ್ಲದ ಉಮೇಶ್ ಶೆಟ್ಟಿಯವರು ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಅವರು ದುಡ್ಡಿನ ಹಿಂದೆ ಎಂದೂ ಹೋದವರಲ್ಲ. ಸೊಸೈಟಿಯ ಉಳಿವಿಗಾಗಿ ಎಲ್ಲಾ ರೀತಿಯ ಹೋರಾಟವನ್ನೂ ಮಾಡಿದ್ದಾರೆ. ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಅವರು ಮಾದರಿ ವ್ಯಕ್ತಿಯಾಗಿದ್ದರು ಎಂದರು. ಸಂಘದಲ್ಲಿ ಕ್ಯಾಂಪ್ಕೋ ಶಾಖೆ, ಪಡುಬೆಟ್ಟುವಿನಲ್ಲಿ ಹೈಸ್ಕೂಲ್ ಆರಂಭಕ್ಕೂ ಕಾರಣಕರ್ತರು. ಸ್ವಂತಕ್ಕೆ ಏನೂ ಯೋಚಿಸದೇ ತನ್ನ 25ನೇ ವರ್ಷದಿಂದಲೇ ಸಮಾಜಕ್ಕಾಗಿ ಕೆಲಸ ಮಾಡಿದ್ದಾರೆ. ಈ ಸಂಸ್ಥೆ ಉಮೇಶ್ ಶೆಟ್ಟಿಯವರ ಕನಸಿನ ಸಂಸ್ಥೆ. ಮುಂದಿನ ತಲೆಮಾರೂ ಅವರನ್ನು ಆದರ್ಶವಾಗಿಟ್ಟುಕೊಂಡು ಬೆಳೆಯಬೇಕೆಂದು ಶಿವಪ್ರಸಾದ್ ಇ.ಹೇಳಿದರು.
ಸತ್ಕಾರ್ಯಗಳನ್ನು ನೆನಪಿಟ್ಟುಕೊಳ್ಳಬೇಕು;
ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು ಮಾತನಾಡಿ, ಉಮೇಶ್ ಶೆಟ್ಟಿ ಅವರು ಮಾಡಿದ ಸತ್ಕಾರ್ಯಗಳನ್ನು ನೆನಪಿಸಿಕೊಳ್ಳಬೇಕು. ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಅವರು ಕೆಲಸ ಮಾಡಿದ್ದಾರೆ. ಅವರ ತ್ಯಾಗ, ಪರಿಶ್ರಮ, ದುಡಿಮೆ ಎಲ್ಲರಿಗೂ ಮಾದರಿಯಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದರು.
ಉಮೇಶ್ ಶೆಟ್ಟಿಯವರ ಹೆಸರು ಶಾಶ್ವತ ಆಗಿರಬೇಕು;
ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಮಾತನಾಡಿ, ಸಣ್ಣ ಪ್ರಾಯದಲ್ಲೇ ಉಮೇಶ್ ಶೆಟ್ಟಿ ಅವರೊಂದಿಗೆ ಬೆರೆತುಕೊಂಡಿದ್ದೇನೆ. ಅವರು ನೆಲ್ಯಾಡಿ ಗ್ರಾ.ಪಂ.ಸದಸ್ಯನಾಗಿದ್ದ ವೇಳೆ ನಾನು ಉಪಾಧ್ಯಕ್ಷನಾಗಿ ಅವರ ಜೊತೆ ಕೆಲಸ ಮಾಡಿದ್ದೇನೆ. ಎಲ್ಲರೊಂದಿಗೂ ಆತ್ಮೀಯತೆಯಿಂದ ಗುರುತಿಸಿಕೊಂಡಿದ್ದರು. ಉಮೇಶ್ ಶೆಟ್ಟಿ ಅವರು ಇಲ್ಲದಿದ್ದರೂ ಅವರ ಹೆಸರು ಶಾಶ್ವತ ಆಗಿರಬೇಕು. ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ. ಇದನ್ನು ಸರಿದೂಗಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಅಧಿಕಾರಕ್ಕೆ ಅಂಟಿಕೊಂಡಿರಲಿಲ್ಲ;
ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗಾಗಿ ಉಮೇಶ್ ಶೆಟ್ಟಿಯವರು ಸಲ್ಲಿಸಿದ ಸೇವೆ ಮರೆಯಲು ಸಾಧ್ಯವಿಲ್ಲ. ಅವರ ಆದರ್ಶ ವ್ಯಕ್ತಿತ್ವ, ಸಾಧನೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಅದೇ ಅವರಿಗೆ ಸಲ್ಲುವ ನಿಜವಾದ ಗೌರವವಾಗಿದೆ. ಅವರೆಂದೂ ಅಧಿಕಾರಕ್ಕೆ ಅಂಟಿಕೊಂಡಿರಲಿಲ್ಲ ಎಂದರು.
ಸಂಘವನ್ನು ಉನ್ನತ ರೀತಿಯಲ್ಲಿ ಮುನ್ನಡೆಸಿದ್ದಾರೆ;
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ, ಹುಟ್ಟು, ಸಾವು ಜಗತ್ತಿನಲ್ಲಿ ನಿರಂತರವಾಗಿರುತ್ತದೆ. ನಷ್ಟದಿಂದಾಗಿ ಮುಚ್ಚುವ ಹಂತದಲ್ಲಿದ್ದ ಸಂಘದ ನೇತೃತ್ವ ವಹಿಸಿಕೊಂಡು ಎಲ್ಲರೂ ನಿಬ್ಬೆರಗಾಗುವಂತೆ ಉನ್ನತಿಗೊಳಿಸಿದ ಕೀರ್ತಿ ಉಮೇಶ್ ಶೆಟ್ಟಿಯವರಿಗೆ ಸಲ್ಲಬೇಕು. ಈ ಸಹಕಾರಿ ಸಂಘವನ್ನು ಉನ್ನತ ರೀತಿಯಲ್ಲಿ ಮುನ್ನಡೆಸಿದ್ದಾರೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ವೆಂಕಟ್ರಮಣ ಆರ್., ಸಂಘದ ನಿರ್ದೇಶಕರೂ, ಜಿ.ಪಂ.ಮಾಜಿ ಸದಸ್ಯರೂ ಆದ ಸರ್ವೋತ್ತಮ ಗೌಡ, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್, ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ, ಉದ್ಯಮಿ ನಾಸೀರ್ ಹೊಸಮನೆ, ಪ್ರತಾಪ್ಚಂದ್ರ ರೈ ಕುದ್ಮಾರುಗುತ್ತು, ತಾ.ಪಂ.ಮಾಜಿ ಸದಸ್ಯ ವ್ಯಾಸ ಎನ್.ವಿ., ಕಿಶೋರ್ ಶಿರಾಡಿ ಮತ್ತಿತರರು ನುಡಿನಮನ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ನಿರ್ದೇಶಕರಾದ ಜಿನ್ನಪ್ಪ ಗೌಡ, ಜನಾರ್ದನ ಗೌಡ ಬರೆಮೇಲು, ಸುಧಾಕರ ಬಿ., ಶೇಷಮ್ಮ, ಹರೀಶ್ ಎ., ಬಾಬು ನಾಯ್ಕ್, ಭಾಸ್ಕರ ರೈ ತೋಟ, ಸಂಘದ ಮಾಜಿ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ಮಾಜಿ ನಿರ್ದೇಶಕರಾದ ಸುದರ್ಶನ್ ಶಿರಾಡಿ, ಪ್ರಸಾದ್ ಅಬ್ರಹಾಂ, ಗುರುರಾಜ್ ಜಿ., ಅಣ್ಣು ಬಿ., ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಧಾಕೃಷ್ಣ ಎಡಪಡಿತ್ತಾಯ, ಆನಂದ ಪಿ.ಹೆಗ್ಡೆ, ಮೇನೇಜರ್ಗಳಾದ ಸೆಬಾಸ್ಟಿಯನ್ ಪಿ.ಜೆ., ಸತೀಶ್ ಶೆಟ್ಟಿ, ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತನಿಯಪ್ಪ ದೇವಾಡಿಗ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ದೋಂತಿಲ, ನೆಲ್ಯಾಡಿ ಅಲ್ಬದ್ರಿಯಾ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಅಧ್ಯಕ್ಷ ನಾಝೀಂ ಸಾಹೇಬ್, ಸಂಘದ ಕಾನೂನು ಸಲಹೆಗಾರ ಜೇಮ್ಸ್ ಪಿ.ವಿ., ತುಕ್ರಪ್ಪ ಶೆಟ್ಟಿ ನೂಜೆ, ರಾಧಾಕೃಷ್ಣ ಕೆರ್ನಡ್ಕ, ಡಾ.ಸದಾನಂದ ಕುಂದರ್, ಸುಂದರ ಗೌಡ ಅತ್ರಿಜಾಲು, ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಶಿವಣ್ಣ ಪಿ.ಹೆಗ್ಡೆ, ಗೋಳಿತ್ತೊಟ್ಟು ಗ್ರಾ.ಪಂ.ಪಿಡಿಒ ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿ, ನಿರೂಪಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಎಂ., ಮೇನೇಜರ್ಗಳಾದ ರತ್ನಾಕರ ಬಂಟ್ರಿಯಾಲ್, ರಮೇಶ್ ನಾಯ್ಕ್, ಮಹೇಶ್ ಎಂ.ಟಿ., ಸಿಬ್ಬಂದಿಗಳಾದ ಅನೀಶ್ ಕೆ.ಜೆ., ಅಶೋಕ ಎಸ್., ಮುಕುಂದಪ್ರಸಾದ್ ಎಸ್., ರೋಹರ್ಕುಮಾರ್ ಬಿ.ಜೆ., ವಿಶ್ವನಾಥ ಕೆ., ಧನುಶ್ ಜೆ., ಪ್ರಜ್ಞಾ ಬಿ., ವನಿತಾ ಡಿ., ನಾಗೇಶ್, ತಾರನಾಥ, ಪ್ರಮೋದ್ ಎಂ., ವಸಂತ ಕೆ., ಗಣೇಶ್ ಶಿರಾಡಿ, ಪಿಗ್ಮಿ ಸಂಗ್ರಾಹಕ ರಘುನಾಥ ಮತ್ತಿತರರು ಸಹಕರಿಸಿದರು.










