







ರಾಮಕುಂಜ: ಇಲ್ಲಿನ ಪಾದೆ ಎಂಬಲ್ಲಿ ಜ.24ರಂದು ಸಂಜೆ ಗುಂಡೇಟಿನಿಂದ ಮೃತಪಟ್ಟ ಬಾಲಕನ ಅಂತ್ಯಕ್ರಿಯೆ ಜ.25ರಂದು ಸಂಜೆ ಕಾಸರಗೋಡು ಪೆರ್ಲ ಏಣ್ಮಕಜೆಯ ತಾಯಿ ಮನೆಯಲ್ಲಿ ನಡೆದಿದೆ. ಈ ಮಧ್ಯೆ ಆಸ್ಪತ್ರೆಗೆ ದಾಖಲಾಗಿರುವ ಬಾಲಕನ ತಂದೆಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.


ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಹಾಗೂ ಜಯಶ್ರೀ ದಂಪತಿ ಪುತ್ರ ಮೋಕ್ಷ್(17ವ.) ಜ.24ರಂದು ಸಂಜೆ ಪಾದೆ ಮನೆಯಲ್ಲಿ ಗುಂಡೇಟಿನಿಂದ ಮೃತಪಟ್ಟಿದ್ದರು. ಮೋಕ್ಷ್ ತಂದೆಗೆ ಇರಿದು ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದಾಗಿ ಆರಂಭದಲ್ಲಿ ಸುದ್ದಿಯಾಗಿದ್ದು ಪೊಲೀಸರು ಇದೇ ರೀತಿ ಪ್ರಾಥಮಿಕ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿ ತನಿಖೆ ಕೈಗೊಂಡಿದ್ದಾರೆ. ಜ.24ರಂದು ರಾತ್ರಿ 9 ಗಂಟೆ ವೇಳೆಗೆ ಮಂಗಳೂರಿನ ಎಫ್ಎಸ್ಎಲ್ ಅಧಿಕಾರಿಗಳ ತಂಡ ಆಗಮಿಸಿದ್ದು ಅವರು ಜ.25ರ ಮುಂಜಾನೆ 4 ಗಂಟೆಯ ತನಕವೂ ಮಾಹಿತಿ ಕಲೆ ಹಾಕಿದ್ದಾರೆ. ಆ ಬಳಿಕ ಬಾಲಕನ ಮೃತದೇಹವನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು ಅಲ್ಲಿ ಸಂಜೆ 5ಗಂಟೆ ವೇಳೆಗೆ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದು ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಆ ಬಳಿಕ ಮೃತದೇಹವನ್ನು ಪೆರ್ಲ ಏಣ್ಮಕಜೆಯಲ್ಲಿರುವ ತಾಯಿ ಜಯಶ್ರೀಯವರ ಮನೆಗೆ ಕೊಂಡೊಯ್ದು ರಾತ್ರಿ 7 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ವರದಿಯಾಗಿದೆ.



ವಸಂತ ಅಮೀನ್ಗೆ ಶಸ್ತ್ರಚಿಕಿತ್ಸೆ;
ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಾಗಿರುವ ವಸಂತ ಅಮೀನ್(55ವ.)ಅವರಿಗೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ತೀವ್ರ ನಿಗಾ ಘಟಕದಲ್ಲಿರುವ ವಸಂತ ಅಮೀನ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಶಸ್ತ್ರಚಿಕಿತ್ಸೆ ವೇಳೆ ವಸಂತ ಅಮೀನ್ ಅವರ ದೇಹದೊಳಗೆ ಕೋವಿಗುಂಡು ಹಾಗೂ ಚಿಲ್ಗಳು ಪತ್ತೆಯಾಗಿವೆ ಎಂದು ವಸಂತ ಅಮೀನ್ ಅವರ ಆಪ್ತ ವಲಯದಲ್ಲಿ ಕೇಳಿಬರುತ್ತಿದೆಯಾದರೂ ಈ ಬಗ್ಗೆ ಯಾರೂ ಅಧಿಕೃತವಾಗಿ ದೃಢಪಡಿಸಿಲ್ಲ.
ಪ್ರಕರಣದ ಬಗ್ಗೆ ಗೊಂದಲ:
ಮಗ ಮೋಕ್ಷ್ನನ್ನು ತಂದೆ ವಸಂತ ಅಮೀನ್ ಅವರೇ ಕೊಲೆ ಮಾಡಿರುವುದಾಗಿ ತಾಯಿ ಜಯಶ್ರೀ ಅವರು ಪೊಲೀಸರಿಗೆ ದೂರು ನೀಡಿರುವುದರಿಂದ ಘಟನೆಯ ಸತ್ಯಾಸತ್ಯತೆ ಬಗ್ಗೆ ಇನ್ನೂ ಗೊಂದಲ ಉಂಟಾಗಿದೆ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮೋಕ್ಷ್ ತಂದೆ ವಸಂತ ಅಮೀನ್ ಅವರ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು, ತಂದೆಯ ಹೆಸರಿನಲ್ಲಿದ್ದ ಪರವಾನಿಗೆ ಹೊಂದಿರುವ ಎಸ್ಬಿಬಿಎಲ್ ಬಂದೂಕಿನಿಂದ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಎಂದು ಪೊಲೀಸರು ಪ್ರಾಥಮಿಕ ವರದಿ ಮಾಹಿತಿ ನೀಡಿದ್ದರು. ಆದರೆ ತಾಯಿ ದೂರಿನಿಂದ ಈ ಪ್ರಕರಣದ ಬಗ್ಗೆ ಗೊಂದಲ ಉಂಟಾಗಿದ್ದು ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಾಗಿದೆ.
ವಸಂತ ಅಮೀನ್ ಅವರ ಪತ್ನಿ ಜಯಶ್ರೀ ಕಳೆದ 5 ತಿಂಗಳಿನಿಂದ ಪೆರ್ಲ ಏಣ್ಮಕಜೆಯ ತಾಯಿ ಮನೆಯಲ್ಲಿದ್ದರು. ತಾಯಿಯ ಜೊತೆಗೆ ಇದ್ದ ಮೋಕ್ಷ್ನನ್ನು ತಂದೆ ವಸಂತ ಅಮೀನ್ 1 ತಿಂಗಳ ಹಿಂದೆ ರಾಮಕುಂಜದ ಪಾದೆ ಮನೆಗೆ ಕರೆಸಿಕೊಂಡಿದ್ದರು. ಪ್ರಾಣಿ, ಪಕ್ಷಿಗಳ ಬಗ್ಗೆ ಅತೀವ ಪ್ರೀತಿ ಹೊಂದಿದ್ದ ಮೋಕ್ಷ್ ಮನೆಯಲ್ಲಿ ನವಿಲು ಸಹಿತ ಇತರೇ ಪ್ರಾಣಿಗಳನ್ನೂ ಸಾಕುತ್ತಿದ್ದರು. ಜ.24ರಂದು ಬೆಳಗ್ಗೆ ಬಾಲಕ ಮೋಕ್ಷನನ್ನು ವಸಂತ ಅಮೀನ್ ಅವರು ಚಿಕಿತ್ಸೆಗೆಂದು ಮಂಗಳೂರಿಗೆ ಕರೆದೊಯ್ದಿದ್ದು ಮಧ್ಯಾಹ್ನದ ವೇಳೆಗೆ ಇಬ್ಬರೂ ರಾಮಕುಂಜದ ಮನೆಗೆ ಬಂದಿದ್ದರು. ಸಂಜೆ ನಾಲ್ಕು ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ. ಈ ಘಟನೆಯೂ ಊರಿನ ಜನರನ್ನೂ ದಿಗ್ಬ್ರಮೆಗೊಳಿಸಿದೆ.










