







ಶಿಸ್ತು – ಸಂಯಮ ಬದುಕಿನ ಎರಡು ಕಣ್ಣುಗಳಿದ್ದಂತೆ : ಒಡಿಯೂರು ಶ್ರೀ


ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ: ಸತೀಶ್ ಕುಂಪಲ
ರಾಷ್ಟ್ರೀಯತೆಯ ಚಿಂತನೆಯಲ್ಲಿ ಸಮ್ಮೇಳನ ಮಾಡಿದಲ್ಲಿ ಅದು ಕೇಂದ್ರಕ್ಕೆ ತಲುಪಲು ಸಾಧ್ಯ: ದುರ್ಗಾ ಪ್ರಸಾದ್ ರೈ ಕುಂಬ್ರ
ರೈತರಿಗೆ, ಸೈನಿಕರಿಗೆ ಗೌರವ ನೀಡುವ ಕೆಲಸ ಈ ಸಾಹಿತ್ಯ ಸಮ್ಮೇಳದ ಮೂಲಕ ನಡೆದಿದೆ: ಕದ್ರಿ ನವನೀತ ಶೆಟ್ಟಿ




ವಿಟ್ಲ: ದೇಶದ ಅಂದ ’ವಂದೇ ಮಾತರಂ’ನಲ್ಲಿದೆ. ಈ ನಿಟ್ಟಿನಲ್ಲಿಯೂ ಈ ಒಂದು ಕಾರ್ಯಕ್ರಮದ ಆಯೋಜನೆಯಾಗಿದೆ. ಶಿಸ್ತು – ಸಂಯಮ ಬದುಕಿನ ಎರಡು ಕಣ್ಣುಗಳಿದ್ದಂತೆ. ಸೈನಿಕರ ಶಿಸ್ತು ಇತರರಿಗೆ ಮಾದರಿ. ಸೈನಿಕರ ತ್ಯಾಗದ ಮನೋಭಾವನೆ ಅಭಿನಂದನೀಯ. ಅವರ ತ್ಯಾಗದಿಂದ ದೇಶ ಇಂದಿಗೂ ಭದ್ರವಾಗಿದೆ. ದೇಶದ ಭದ್ರತೆಯಲ್ಲಿ ಸೈನಿಕರ ಪಾತ್ರ ವಿಶೇಷವಾದುದು. ಆದರ್ಶ ರಾಷ್ಟ್ರ ನಿರ್ಮಾಣದಲ್ಲಿ ಸೈನಿಕರ ಪಾತ್ರ ಏನೆಂಬುದನ್ನು ಅರಿಯುವ ಕೆಲಸವಾಗಬೇಕು. ತಾಯಿ ಸಂಸ್ಕೃತಿ – ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡೋಣ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜ.27ರಂದು ತುಳುನಾಡ ಜಾತ್ರೆ- ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಇಪ್ಪತ್ತಾರನೇ ವರುಷದ ’ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರವರು ಮಾತನಾಡಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಆಧ್ಯಾತ್ಮಿಕ ಶಕ್ತಿ ಒಡಿಯೂರು ಶ್ರೀ. ಧಾರ್ಮಿಕ ವಿಚಾರಗಳ ಬಗ್ಗೆ ಆಳವಾಗಿ ಅರಿತಿರುವವರು ಶ್ರೀಗಳ ಮೂಲಕ ತುಳುವನ್ನು ಬೆಳೆಸುವ ಕೆಲಸ ಸಂಸ್ಥಾನದಿಂದ ನಿತ್ಯ ನಿರಂತರವಾಗಿ ನಡೆಯುತ್ತಿದೆ. ತುಳು ಗಟ್ಟಿಯಾಗಲು ಇಂತಹ ಗುರುಗಳ ಪ್ರಯತ್ನ ಅಪಾರ. ದೇಶದ ಮೇಲೆ ಪ್ರೀತಿ ಇಟ್ಟು ದೇಶಕಟ್ಟುವ ಕೆಲಸ ಮಾಡೋಣ. ಶ್ರೀಗಳ ಕೆಲಸಕ್ಕೆ ನಾವೆಲ್ಲರೂ ಬೆನ್ನೆಲುಬಾಗಿ ನಿಂತು ಸಹಕರಿಸೋಣ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರರವರು ಮಾತನಾಡಿ ಬಹಳ ಸುಂದರ ಕಾರ್ಯಕ್ರಮ ಇದಾಗಿದೆ. ಶ್ರೀಗಳ ಪ್ರತಿಯೊಂದೂ ಹೆಜ್ಜೆಯನ್ನು ನೋಡುತ್ತಾ ಬಂದವ ನಾನು. ಶ್ರೀಗಳ ಪ್ರತಿಯೊಂದೂ ಕಾರ್ಯಕ್ರಮಗಳು ಬಹಳಷ್ಟು ವಿಶೇಷತೆಗಳಿಂದ ಕೂಡಿರುತ್ತದೆ. ಪ್ರತಿಯೊಂದೂ ಅರ್ಥಪೂರ್ಣ ಕಾರ್ಯಕ್ರಮವಾಗಿರುತ್ತದೆ. ರಾಷ್ಟ್ರೀಯತೆಯ ಚಿಂತನೆಯಲ್ಲಿ ಸಮ್ಮೇಳನ ಮಾಡಿದಲ್ಲಿ ಅದು ಕೇಂದ್ರಕ್ಕೆ ತಲುಪಲು ಸಾಧ್ಯ ಎಂದರು.
ಸಮ್ಮೇಳನಾಧ್ಯಕ್ಷ ಕದ್ರಿ ನವನೀತ ಶೆಟ್ಟಿರವರು ಮಾತನಾಡಿ ಸಂಘಟನೆಯಿಂದ ಕಾರ್ಯಸಾಧನೆ ಸಾಧ್ಯ. ಧರ್ಮ ಉಳಿಯಲು ರಾಷ್ಟ್ರೀಯತೆ ಅಗತ್ಯ. ರೈತರಿಗೆ ಹಾಗೂ ಸೈನಿಕರಿಗೆ ಗೌರವ ನೀಡುವ ಕೆಲಸ ’ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳದ ಮೂಲಕ ನಡೆದಿದೆ. ತುಳು ಶಬ್ದ ಭಂಡಾರವನ್ನು ಉಳಿಸುವ ಕೆಲಸವಾಗಬೇಕು. ಸೈನಿಕರ ಶಿಸ್ತು ಅಪಾರ.
ನಿಜಾರ್ಥದ ತುಳುವರು ನಾವಾಗಬೇಕು. ಸಂಸ್ಕೃತಿ ಕಲಿಸುವ ಕೆಲಸ ನಮ್ಮ ಮನೆಯಿಂದಲೇ ಆಗಬೇಕಿದೆ ಎಂದರು.
ಸಾಽ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ತುಳು ಸಾಹಿತ್ಯ ಸಮ್ಮೇಳನ ಸಮಿತಿ ಪ್ರಧಾನ ಸಂಚಾಲಕರಾದ ವಸಂತಕುಮಾರ್ ಪೆರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇಶ ಸೇವೆ ಮಾಡಿದ ಯೋಧರಿಗೆ ’ತುಳುಸಿರಿ’ ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ನಿವೃತ್ತ ಯೋಧರಾದ ಎ.ಕೆ. ಜಯಚಂದ್ರನ್ ಮಂಗಳೂರು, ರಾಜೇಶ್ ಹೊಳ್ಳ ಮಂಗಳೂರು, ಡಿ. ಚಂದಪ್ಪ ಮೂಲ್ಯ, ನಿವೃತ್ತ ಡೆಪ್ಯೂಟಿ ಕಮಾಂಡೆಂಟ್, ಬಿ.ಎಸ್.ಎಫ್., ದೀಪಕ್ ಅಡ್ಯಂತಾಯ ಮಂಗಳೂರು, ಸುಧಿರ್ ಪೈ ಮಂಗಳೂರು, ಪೂವಪ್ಪ ಪೂಜಾರಿ, ಅಪ್ಪು ಶೆಟ್ಟಿ ಮಂಗಳೂರು, ಜನಾರ್ದನ, ಎಂ.ಬಿ. ರಾಜ, ಪುರುಷೋತ್ತಮ ಕೆ.ಸಿ., ಭಾಸ್ಕರ ಮುಲ್ಕಿ, ಸುಂದರ ಗೌಡ ಕೆ. ನಡುಬೈಲ್, ವಸಂತ ಗೌಡ ದೇವಸ್ಯ, ನಾಗಪ್ಪ ಗೌಡ ಕೇಪುಳು, ಸುಂದರ ಕೆ. ನೈತ್ತಾಡಿ, ಪುರಂದರ ಡಿ. ಚಂದಳಿಕೆ, ಚಂದ್ರಶೇಖರ ಗೌಡ ಎ. ಪಡ್ನೂರು, ವಸಂತಕುಮಾರ್ ಬಿ. ಪುತ್ತೂರು, ವೆಂಕಪ್ಪ ಗೌಡ ಪುಣಚ, ಬಾಲಕೃಷ್ಣ ಗೌಡ ಮಂಗಲಪದವು, ಚಂದ್ರ ಕೆ. ವಿಟ್ಲ, ಬಾಲಕೃಷ್ಣ ರೈ ಗೊಳ್ತಮಜಲು, ಕುಶಾಲಪ್ಪ ಗೌಡ ವಿಟ್ಲ, ಧನಂಜಯ ಗೌಡ ಮಂಗಲಪದವು, ಎಡ್ವಿನ್ ರಾಡ್ರಿಗಸ್ ವಿಟ್ಲ, ದಾಸಪ್ಪ ಪೂಜಾರಿ ಮಂಗಲಪದವು, ಅಶೋಕ ವಿಟ್ಲ, ಕರಿಬಸಪ್ಪ, ಬಿ.ಸಿ.ರೋಡ್, ಐವಾನ್ ಮೆನೆಜಸ್, ಬಿ.ಸಿ.ರೋಡ್, ರಮೇಶ್ ಕನ್ಯಾನ, ಮೋಹನ್‌ದಾಸ್, ಸೂರ್ಯಕಾಂತ್‌ರವರನ್ನು ’ತುಳುಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ವಾರುಣಿ ಆಚಾರ್ಯ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಐಟಿಐ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಂಕಾಲ ಮುಂಬೈಯ ಉದ್ಯಮಿ ವಾಮಯ್ಯ ಬಿ. ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಲಿ ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.











