









ಪುತ್ತೂರು: ಪಾಂಬಾರು ಸತ್ಯಪೀಠದಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಜರಗಿತು.



ಬೆಳಿಗ್ಗೆ ಗಣಪತಿ ಹೋಮ ತದ ನಂತರ ಶ್ರೀ ಸತ್ಯನರಾಯಣ ದೇವರ ಪೂಜೆಯು ಪುರೋಹಿತರಾದ ವೇದಮೂರ್ತಿ ಶಿವಪ್ರಸಾದ್ ಕಡಮಣ್ಣಾಯ ನೆರವೇರಿಸಿದರು. ಮಧ್ಯಾನ್ಹ ಮಹಾಮಂಗಳಾರತಿ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ನಂತರ ಸಭಾ ಕಾರ್ಯಕ್ರಮ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಗಳಾಗಿ ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಮೋದ್ ಕೆ. ಎಸ್. ರವರು ಮಾತನಾಡುತ್ತ ಈ ಸತ್ಯಪೀಠ ನಿರ್ಮಿಸಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ಪ್ರಾರಂಭಿಸಿದ ದಿ. ಪಾಂಬಾರು ಸುಬ್ಬಣ್ಣ ರೈ ಯವರನ್ನು ಸ್ಮರಿಸಿಕೊಂಡರು. ಪಾಂಬಾರು ಸುಬ್ಬಣ್ಣ ರೈಯವರು ಈ ಊರಿನವರನ್ನು ಒಟ್ಟು ಸೇರಿಸಿಕೊಂಡು ಪ್ರಾರಂಭಿಸಿದ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಕಾರ್ಯಕ್ರಮವು ಕಳೆದ ಹತ್ತು ವರ್ಷಗಳಿಂದ ಅವರ ಮಗ ಪ್ರದೀಪ್ ಕುಮಾರ್ ರೈ ಪಾಂಬಾರು ಮುಂದುವರಿಸಿಕೊಂಡು ಬಂದಿರುವುದನ್ನು ಶ್ಲಾಘಿಸಿದರು.

ಅತಿಥಿಗಳಾಗಿ ಭಾಗವಹಿಸಿದ ಷಣ್ಮುಖ ದೇವ ದೇವಸ್ಥಾನ ಭಯಂಬಾಡಿ ಇದರ ಮಾಜಿ ಅಧ್ಯಕ್ಷರಾದ ಕೆ. ಆರ್. ಲಕ್ಷ್ಮಣ ಗೌಡ ಕುಂಟಿಕಾನ ಇವರು ಈ ಸತ್ಯನಾರಾಯಣ ಪೂಜೆಯನ್ನು ಪ್ರಾರಂಭಿಸಿದ ದಿವಂಗತ ಪಾಂಬಾರು ಸುಬ್ಬಣ್ಣ ರೈಯವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು. ಮತ್ತು ಇವರ ಬಳಗದವರನ್ನು ಸೇರಿಸಿಕೊಂಡು ಈ ಪ್ರದೇಶಕ್ಕೆ ಸತ್ಯಪೀಠ ಪಾಂಬಾರು ಎಂಬ ಹೆಸರನಿಟ್ಟದನ್ನು ನೆನಪಿಸಿದರು.
ಇನ್ನೊರ್ವ ಮುಖ್ಯ ಅತಿಥಿಯಾದ ವಸಂತ್ ಕುಮಾರ್ ರೈ ದುಗ್ಗಳ ರವರು ಮಾತನಾಡುತ್ತ ನನ್ನ ಸಹೋದರ ದಿವಂಗತ ಪಾಂಬಾರು ಸುಬ್ಬಣ್ಣ ರೈಯವರು ಈ ಪ್ರದೇಶದಲ್ಲಿ ಸತ್ಯಪೀಠ ಎಂಬ ಹೆಸರನಿಟ್ಟು ಪೂಜಾ ಕಾರ್ಯಕ್ರಮವನ್ನು ಪ್ರಾರಂಭಿಸಿ ಇಲ್ಲಿಗೆ ಹಲವು ಸ್ವಾಮೀಜಿಗಳು, ನಾಯಕರು, ಅಧಿಕಾರಿಗಳನ್ನು ಕರೆಸಿ ಧಾರ್ಮಿಕ ಸಭೆಯನ್ನು ನಡೆಸಿರುವ ಇತಿಹಾಸವನ್ನು ನೆನಪಿಸಿಕೊಂಡರು. ಮುಖ್ಯ ಅತಿಥಿಯಾದ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅಮಳ ರಾಮಚಂದ್ರ ರವರು ಮಾತನಾಡುತ್ತ ಇಲ್ಲಿನ 25 ವರ್ಷದ ಕಾರ್ಯಕ್ರಮವನ್ನು ನೆನಪಿಸಿಕೊಂಡರು. ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ತೀರ್ಥನಂದ ದುಗ್ಗಳರವರು ಮಾತನಾಡುತ್ತಾ ಸತ್ಯಪೀಠ ಇದರ ಸ್ಥಾಪಕಧ್ಯಕ್ಷರಾದ ಪಾಂಬಾರು ಸುಬ್ಬಣ್ಣ ರೈಯವರ ಕಾರ್ಯವನ್ನು ಅವರ ಸಮಾಜ ಸೇವೆಯನ್ನು ಸ್ಮರಿಸಿಕೊಂಡರು.

ಸಭಾಧ್ಯಕ್ಷತೆಯನ್ನು ವಹಿಸಿದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪಾಂಬಾರು ಸತ್ಯಪೀಠ ಇದರ ಅಧ್ಯಕ್ಷರಾದ ಪ್ರದೀಪ್ ಕುಮಾರ್ ರೈ ಪಾಂಬಾರು ಮಾತನಾಡುತ್ತಾ 1992 ರಲ್ಲಿ ಪ್ರಾರಂಭಗೊಂಡ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ನಡೆದು ಬಂದ ಹಾದಿಯನ್ನು ವಿವರಿಸಿದರು. 1992 ರಲ್ಲಿ ನನ್ನ ತಂದೆ ದಿವಂಗತ ಪಾಂಬಾರು ಸುಬ್ಬಣ್ಣ ರೈಯವರ ನೇತೃತ್ವದಲ್ಲಿ ಆರಂಭಿಸಿ 1994 ರಲ್ಲಿ ಅಲ್ಲೇ ಪಕ್ಕದಲ್ಲಿ ಅಂದಿನ ಶಾಸಕರಾದ ವಿನಯ ಕುಮಾರ್ ಸೊರಕೆಯವರ ಮೂಲಕ ಸ್ಥಳವನ್ನು ಖಾದಿರಿಸಿ ಸತ್ಯಪೀಠವನ್ನು ನಿರ್ಮಿಸಿ ಮುಳ್ಳುಕಾಡು ಎಂಬ ಪ್ರದೇಶವನ್ನು ಪಾಂಬಾರು ಸತ್ಯಪೀಠ ಎಂಬ ಹೆಸರಿಟ್ಟು ಪ್ರತಿ ವರ್ಷ ಮಕರ ಸಂಕ್ರಮನದಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ನಡೆಸಿಕೊಂಡು ಬಂದಿರುವುದನ್ನು ಹೇಳಿದರು. ಮಾತ್ರವಲ್ಲದೆ ಊರಿನವರಿಗೆ ಕುಡಿಯುವ ನೀರಿಗಾಗಿ ಬಾವಿಯನ್ನು ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ದಿವಂಗತ ಪಾಂಬಾರು ಸುಬ್ಬಣ್ಣ ರೈಯವರು ಮತ್ತು ಬಳಗದವರು ಮಾಡಿರುವುದನ್ನು ನೆನಪಿಸಿಕೊಂಡರು. ತದನಂತರ ಕಾರಣಾoತರದಿಂದ ಒಟ್ಟು 13 ವರ್ಷ ನಡೆದುಕೊಂಡು ಬಂದ ಪೂಜಾ ಕಾರ್ಯಕ್ರಮವು 2004 ರಲ್ಲಿ ನಿಂತು ಹೋಯಿತು. ಮತ್ತೆ ಈ ಜಾಗದಲ್ಲಿ ನಿಂತು ಹೋದ ಪೂಜಾ ಕಾರ್ಯಕ್ರಮವನ್ನು 2015ರಲ್ಲಿ ಪಾಂಬಾರು ಸುಬ್ಬಣ್ಣ ರೈಯವರು ನನಗೆ ವಹಿಸಿಕೊಟ್ಟು ನನ್ನ ನೇತೃತ್ವದಲ್ಲಿ ನಮ್ಮ ಬಳಗದವರು ಸೇರಿ ಪ್ರಾರಂಭಿಸಿ ಈ ವರ್ಷಕ್ಕೆ 25ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ನಡೆದು ಬಂದ ದಾರಿಯನ್ನು ವಿವರಿಸಿದರು. ಮಾತ್ರವಲ್ಲದೆ 1992ರ ಪ್ರಥಮ ಸಮಿತಿಯ 17 ಜನರಿಗೂ, ಪ್ರಾರಂಭದಲ್ಲಿ ಕೆಲಸ ಮಾಡಿದ 18 ಜನರಿಗೂ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಸಿದರು. ಪ್ರತಿಯೊರ್ವರಿಗೂ ಶಾಲು ಹಾಕಿ ಗೌರವದ ಸ್ಮರಣಿಕೆಯನ್ನು ನೀಡಲಾಯಿತು. ಸಂಜೆ ಗಂಟೆ 4.00 ರಿಂದ ಪಾಂಬಾರು ಸತ್ಯಪೀಠದ ಸ್ಥಾಪಕರಾದ ಪಾಂಬಾರು ಸುಬ್ಬಣ್ಣ ರೈಯವರ ಸ್ಮರಣಾರ್ಥ ಪ್ರದೀಪ್ ಕುಮಾರ್ ರೈ ಪಾಂಬಾರು ಇವರ ಸೇವೆಯಾಗಿ ಗೆಜ್ಜೆಗಿರಿ ಮೇಳದವರಿಂದ ಸತ್ಯ ಹರೀಶ್ಚಂದ್ರ ತುಳು ಪೌರಾಣಿಕ ಯಕ್ಷಗಾನ ಬಯಾಲಾಟವು ನಡೆಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾದ ಕಿಶೋರ್ ಎಂ. ಡಿ. ಸ್ವಾಗತಿಸಿದರು. ಸಮಿತಿಯ ಪ್ರದಾನ ಕಾರ್ಯದರ್ಶಿ ಯಶೋಧರ ಗೌಡ ಪಾಂಬಾರು ವಂದಿಸಿದರು. ವಿನೋದ್ ರೈ ಕೆಳಗಿನಮನೆ ಕಾರ್ಯಕ್ರಮ ನಿರೂಪಿಸಿದರು.










