ಫೆ.1: ಉಪ್ಪಿನಂಗಡಿಯಲ್ಲಿ ಹಿಂದೂ ಸಂಗಮ

0

ಉಪ್ಪಿನಂಗಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಸಮಾಜದ ಪರಿವರ್ತನೆಗೆ ಪಂಚ ಕಾರ್ಯಗಳನ್ನು ಅಳವಡಿಸುವ ಹಾಗೂ ಹಿಂದೂ ಸಂಘಟನೆಗಳನ್ನು ಬಲಪಡಿಸುವ ಉದ್ದೇಶದಿಂದ ಉಪ್ಪಿನಂಗಡಿ ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ಫೆ.೧ರಂದು ಉಪ್ಪಿನಂಗಡಿಯಲ್ಲಿ ಹಿಂದೂ ಸಂಗಮ ಆಯೋಜಿಸಲಾಗಿದೆ ಎಂದು ಮಂಡಲ ನಿರ್ವಹಣಾ ತಂಡದ ಸಂಯೋಜಕ ಜಯಂತ ಪೊರೋಳಿ ತಿಳಿಸಿದರು.


ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದೂ ಸಂಘಟಿತನಾದಾಗ ಸಮರ್ಥ ಭಾರತದ ನಿರ್ಮಾಣ ಸಾಧ್ಯ. ಶಿಸ್ತು, ಧೈರ್ಯ, ದೇಶಭಕ್ತಿ, ಪ್ರಾಮಾಣಿಕತೆ, ಸೇವಾ ಚಟುವಟಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಗುಣ ಸಂಪನ್ನ ವ್ಯಕ್ತಿ ನಿರ್ಮಾಣ ಕಾರ್ಯದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಮೇಲು- ಕೀಳು ತೊಡೆದು ಹಾಕಿ ಸಮರಸತೆಯ ಬದುಕು ರೂಪಿಸಲು ಸಾಮಾಜಿಕ ಸಾಮರಸ್ಯದ ಸಂಕಲ್ಪ, ಪರಿಸರ ಸಂರಕ್ಷಣೆಯ ಸಂಕಲ್ಪ, ಕೌಟುಂಬಿಕ ಮೌಲ್ಯಗಳ ಬಲವರ್ಧನೆಗೆ ಕುಟುಂಬ ಜೀವನದ ಸಂಕಲ್ಪ, ಮಾತೃ ಭಾಷೆ ಬಳಕೆ, ಉಡುಗೆ ತೊಡುಗೆ, ಸರಳ ಜೀವನದ ಮೂಲಕ ಸ್ವದೇಶಿಯ ಸಂಕಲ್ಪ ಹಾಗೂ ಸಂವಿಧಾನ, ಕಾನೂನು, ನಿಯಮ ಪಾಲನೆ, ಶಿಸ್ತು ಎಲ್ಲರೂ ಎಲ್ಲಾ ಸಂದರ್ಭಗಳಲ್ಲಿ ಪಾಲಿಸುವಂತಾಗಲು ಹಾಗೂ ಸದಾ ದೇಶ ಮತ್ತು ಸಮಾಜದ ಕಾಳಜಿ ಇರುವಂತಾಗಲು ನಾಗರಿಕ ಕರ್ತವ್ಯ ಪ್ರಜ್ಞೆಯ ಸಂಕಲ್ಪವನ್ನು ಇಲ್ಲಿ ಬೋಧಿಸಲಾಗುವುದು ಎಂದು ತಿಳಿಸಿದರು.


ಸಂಜೆ ೩ಗಂಟೆಗೆ ಸಿಎ ಬ್ಯಾಂಕ್ ಆವರಣದಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದವರೆಗೆ ಶೋಭಾಯಾತ್ರೆ ನಡೆಯಲಿದ್ದು, ಬಳಿಕ ದೇವಾಲಯದ ವಠಾರದಲ್ಲಿ ೪ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಸ್ಸೆಫ್‌ನ ನಿವೃತ್ತ ಡೆಪ್ಯೂಟಿ ಕಮಾಡೆಂಟ್ ಡಿ. ಚಂದಪ್ಪ ಮೂಲ್ಯ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಸಾಮಾಜಿಕ ಕಾರ್ಯಕರ್ತೆ ಸವಿತಾ ಪಿ.ಜಿ. ಭಟ್ ಭಾಗವಹಿಸಲಿದ್ದಾರೆ. ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರ ಬಿ. ಗಣೇಶ ಶೆಣೈ, ಹಿರೇಬಂಡಾಡಿಯ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಪದ್ಯೋಟ್ಟು, ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಶ್ರೀಧರ ಗೌಡ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಉದಯಶಂಕರ ಭಟ್ಟ ಎನ್., ಮುದ್ಯ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ನೇಮಿಚಂದ್ರ ಗೌಡ, ಕೆಮ್ಮಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಸಂಜೀವ ಪಿ., ಉದಯಗಿರಿಯ ಶ್ರೀ ಉಮಾಮಹೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಹರೀಶ್ ಮುಡಿಪು, ನಂದಿನಿನಗರದ ಶ್ರೀ ನಂದಿಕೇಶ್ವರ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ಪುಲಮುಗೇರ್, ಶ್ರೀ ಮಂಜುಶ್ರೀ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ನಾಯಕ್, ದುರ್ಗಾಗಿರಿಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ವೆಂಕಟರಮಣ ಭಟ್ ಮುಣ್ಣಿಕಾನ, ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಪ್ರಸನ್ನ ಪೆರಿಯಡ್ಕ, ಅಯೋಧ್ಯಾನಗರದ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಪಿ.ಎನ್., ಬೆದ್ರೋಡಿಯ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದ ಅಧ್ಯಕ್ಷ ಗೌತಮ್ ಎಸ್. ಗೌರವ ಉಪಸ್ಥಿತಿ ಇರಲಿದ್ದಾರೆ. ಈ ಸಂದರ್ಭ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದ ಇಲ್ಲಿನ ಪ್ರತಿಭೆ ಶ್ರಮಿಕ ಎಂ.ಕೆ. ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.‌


ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಎಸ್ಸೆಫ್‌ನ ನಿವೃತ ಕಮಾಂಡೆಂಟ್ ಚಂದಪ್ಪ ಮೂಲ್ಯ, ತಾಲೂಕು ಆಯೋಜನಾ ಸಮಿತಿಯ ಅಧ್ಯಕ್ಷ ಹರಿರಾಮಚಂದ್ರ, ಪ್ರಮುಖರಾದ ಸುನೀಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್, ಎನ್. ರಾಮಚಂದ್ರ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here