






ಮಡಿವಾಳ ಮಾಚಿದೇವ ಶರಣರಲ್ಲಿ ಅಗ್ರಗಣ್ಯ-ಎಸ್.ಬಿ.ಕೂಡಲಗಿ


ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪುತ್ತೂರು ತಾಲೂಕು ಮಡಿವಾಳರ ಸಂಘದ ಆಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ದಿನಾಚರಣೆಯು ಫೆ.1ರಂದು ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.



ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿ, 12ನೇ ಶತಮಾನದಲ್ಲಿದ್ದ ಜಾತೀಯತೆ, ದುರ್ಬಲರ ಶೋಷಣೆ, ಮೌಢ್ಯತೆಗಳನ್ನು ತನ್ನ ಅಗಾಧ ಪ್ರೌಢಿಮೆಯ ಮೂಲಕ ತೊಡೆದು ಹಾಕಿ ಸಾಮಾಜಿಕ ಅಂಕು ಡೊಂಕುಗಳನ್ನು ತಿದ್ದಿದ ಮಡಿವಾಳ ಮಾಚಿದೇವ ಅವರು ಶರಣರಲ್ಲಿ ಅಗ್ರಗಣ್ಯ ಶರಣರಾಗಿದ್ದಾರೆ.ತನ್ನ ವಚನಗಳ ಮೂಲಕ ಮೌಢ್ಯತೆಗಳ ವಿರುದ್ದ ಸಮರ ಸಾರಿದ್ದ ಅವರು ಜನರಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದರು.ಅವರ ತತ್ವ ಸಿದ್ದಾಂತಗಳನ್ನು ಅನುಸರಿಸುವುದರೊಂದಿಗೆ ಅವರ ಕಾರ್ಯವನ್ನು ನಾವು ಅರಿಯಬೇಕು ಎಂದು ಅವರು ಹೇಳಿದರು.
ಸಂಸ್ಮರಣಾ ಉಪನ್ಯಾಸ ನೀಡಿದ ಪುತ್ತೂರು ವೀರಮಾಚಿದೇವ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಇಂದುಶೇಖರ ಪಿ.ಬಿ.ಮಾತನಾಡಿ, ಮಡಿವಾಳ ಮಾಚಿದೇವರು ಬಸವಣ್ಣರೊಂದಿಗೆ ಸೇರಿಕೊಂಡು ಕನ್ನಡ ನಾಡಿನಲ್ಲಿದ್ದ ಜಾತಿ ಪದ್ದತಿಯನ್ನು ಮೆಟ್ಟಿ ನಿಲ್ಲುವ ಕೆಲಸವನ್ನು ಮಾಡಿದ್ದಾರೆ.ಕೆಳ ವರ್ಗಕ್ಕೆ ಸೇರಿದವರಿಗೆ ಶಿಕ್ಷಣ ನೀಡದಿರುವ ವ್ಯವಸ್ಥೆಗಳ ವಿರುದ್ದ ಸೆಟೆದು ನಿಂತು ಅವರ ವಿದ್ಯೆಗಾಗಿ ಶ್ರಮಿಸಿದ್ದರು.ತನ್ನ ಸಾವಿರಾರು ವಚನಗಳ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದರು.ಮಾಚಿದೇವರನ್ನು ವೀರಭದ್ರನ ಅವತಾರ ಎಂದು ಅನೇಕ ಇತಿಹಾಸಕಾರರು ವರ್ಣಿಸಿದ್ದಾರೆ.ವಚನ ರಚನೆಯೊಂದಿಗೆ ಇತರರ ಅನೇಕ ವಚನಗಳನ್ನು ಸಂರಕ್ಷಿಸುವ ಕೆಲಸವನ್ನು ಮಾಚಿದೇವರು ಮಾಡಿದ್ದಾರೆ ಎಂದರು.
ಪುತ್ತೂರು ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಪಿ.ಎನ್.ಸುಭಾಶ್ಚಂದ್ರ ಸಂದರ್ಭೋಚಿತವಾಗಿ ಮಾತನಾಡಿದರು.ನಗರಸಭಾ ಪೌರಾಯುಕ್ತೆ ವಿದ್ಯಾ ಎಂ ಕಾಳೆ, ಉಪ ತಹಸೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು. ತಾಲೂಕು ಕಚೇರಿಯ ವಿಷಯ ನಿರ್ವಾಹಕ ಡಿ.ಟಿ. ದಯಾನಂದ ಸ್ವಾಗತಿಸಿ, ವಂದಿಸಿದರು. ತಾಲೂಕು ಕಚೇರಿ ಸಿಬಂದಿ ಶ್ರೀಕಲಾ ನಿರೂಪಿಸಿದರು.ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










