






ಕಡಬ: ವಿದೇಶದಲ್ಲಿ ಉತ್ತಮ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ನಿವಾಸಿ ಮನೋಜ್ (43) ಎಂಬವರು ವಂಚನೆಗೊಳಗಾದವರು. ವೆಲ್ಡರ್ ಕೆಲಸ ಮಾಡಿಕೊಂಡಿದ್ದ ಇವರು ವಿದೇಶದಲ್ಲಿ ಕೆಲಸ ಹುಡುಕುತ್ತಿದ್ದಾಗ, ಸ್ನೇಹಿತನ ಮೂಲಕ ಬೆಳ್ತಂಗಡಿ ತಾಲೂಕಿನ ರೇಖ್ಯಾ ಗ್ರಾಮದ ಇಂಜಿರ ನಿವಾಸಿಗಳಾದ ಪರಂಬಿಲ್ ಜೋಸೆಫ್ ಮನೋಜ್ ಹಾಗೂ ಆತನ ಪತ್ನಿ ಸ್ಮಿತಾ ಮನೋಜ್ ಎಂಬವರ ಪರಿಚಯವಾಗಿತ್ತು. ಆರೋಪಿಗಳು ತಮಗೆ ಪೋಲೆಂಡ್ ದೇಶದಲ್ಲಿ ವೀಸಾ ನೀಡುವ ಅಧಿಕಾರಿಗಳ ಪರಿಚಯವಿದೆ ಎಂದು ನಂಬಿಸಿದ್ದರು. ವೀಸಾ ಕೊಡಿಸಲು ಸುಮಾರು 5 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ತಿಳಿಸಿ, ಮುಂಗಡವಾಗಿ ಹಣ ನೀಡುವಂತೆ ಕೇಳಿದ್ದರು. ಇದನ್ನು ನಂಬಿದ ಮನೋಜ್ 02-02-2023 ರಿಂದ 04-09-2023 ರ ಅವಧಿಯಲ್ಲಿ ವಿವಿಧ ಹಂತಗಳಲ್ಲಿ ಒಟ್ಟು 3.5 ಲಕ್ಷ ರೂಪಾಯಿಗಳನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.
ಬಳಿಕ ವೀಸಾ ಸಂದರ್ಶನಕ್ಕೆ ಮುಂಬೈಗೆ ಹೋಗಬೇಕು ಎಂದು ನಂಬಿಸಿ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸ್ಮಿತಾ ಮನೋಜ್ ಅವರು ದೂರುದಾರರಿಂದ 1 ಲಕ್ಷ ರೂಪಾಯಿ ನಗದನ್ನು ಪಡೆದಿದ್ದರು. ಹೀಗೆ ಒಟ್ಟು 4.5 ಲಕ್ಷ ರೂಪಾಯಿ ಹಣವನ್ನು ಆರೋಪಿಗಳು ವಸೂಲಿ ಮಾಡಿದ್ದರು.



ಮೋಸ ಬಯಲಿಗೆ ಬಂದಿದ್ದು ಹೇಗೆ?
ಜನವರಿ 09, 2024 ರಂದು ದೂರುದಾರರು ಸಂದರ್ಶನಕ್ಕಾಗಿ ಮುಂಬೈಗೆ ಹೋದಾಗ, ಆರೋಪಿಗಳು ವೀಸಾಕ್ಕೆ ಯಾವುದೇ ಅರ್ಜಿ ಸಲ್ಲಿಸದೆ ಮೋಸ ಮಾಡಿರುವುದು ತಿಳಿದುಬಂದಿದೆ. ಈ ಬಗ್ಗೆ ಹಣ ವಾಪಸ್ ಕೇಳಿದಾಗ, 2025 ರ ಡಿಸೆಂಬರ್ನಲ್ಲಿ ನೀಡುವುದಾಗಿ ಆರೋಪಿಗಳು ಕಾಲಹರಣ ಮಾಡಿದ್ದರು. ಆದರೆ ನಂತರ ಹಣ ನೀಡದೆ ಉದ್ಧಟತನದ ಉತ್ತರ ನೀಡಿ, ಹಣ ಕೇಳಿದರೆ ಮಾನಹಾನಿ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸ್ ತನಿಖೆ
ದೂರುದಾರ ಮನೋಜ್ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.









