






ಅಗೆದು ಹಾಕಿ ಕಳೆಯಿತು ಒಂದೂವರೇ ತಿಂಗಳು | ವಾಹನ ಸವಾರರಿಗೆ, ಸ್ಥಳೀಯರಿಗೆ ಸಂಕಷ್ಟ


ಪುತ್ತೂರು: ಮುಖ್ಯರಸ್ತೆಯ ಬೊಳುವಾರು ಇನ್ಲ್ಯಾಂಡ್ ಮಯೂರದ ಬಳಿಯಿಂದ ಉರ್ಲಾಂಡಿ ಬೈಪಾಸ್ ರಸ್ತೆ ಸಂಪರ್ಕಿಸುವಲ್ಲಿ ನಗರ ಸಭೆಯಿಂದ ನಡೆಸುತ್ತಿರುವ ಚರಂಡಿ ಕಾಮಗಾರಿಯು ಅರ್ಧಕ್ಕೆ ನಿಂತಿದ್ದು ಇದರಿಂದಾಗಿ ವಾಹನ ಸವಾರರು, ಸ್ಥಳೀಯ ಮನೆ ಹಾಗೂ ಗ್ಯಾರೇಜ್ನವರು ಸಂಕಷ್ಟಕ್ಕೆ ಸಿಲುಕಿದ್ದಾರೆ.



ಬೊಳುವಾರು-ಉರ್ಲಾಂಡಿ ಸಂಪರ್ಕ ರಸ್ತೆಯ ಸುಶ್ರುತ ಆಯುರ್ವೇದ ಆಸ್ಪತ್ರೆ ತಿರುವು ಬಳಿಯಿಂದ ಕಾಂಕ್ರೀಟ್ ಚರಂಡಿ ಕಾಮಗಾರಿ ನಡೆಸಲಾಗಿದ್ದರೂ ಕಾಂಕ್ರೀಟ್ ಮೇಲೆ ಸ್ಲ್ಯಾಬ್ ಅಳವಡಿಸದೇ ಹಾಗೇಯೇ ಇದೆ. ಕೆಲವು ಗ್ಯಾರೇಜ್ಗಳ ಮಾಲಕರು ಅವರೇ ತಮ್ಮ ಅಂಗಡಿ ಮುಂಭಾಗದಲ್ಲಿ ಸ್ಲ್ಯಾಬ್ ಅಳವಡಿಸಿಕೊಂಡಿದ್ದರೆ ಇನ್ನುಳಿದ ಭಾಗದಲ್ಲಿ ಹಾಗೆಯೇ ಬಾಯ್ತೆರೆದು ನಿಂತಿದೆ. ಚರಂಡಿ ಕಾಂಕ್ರಿಟೀಕರಣಗೊಳಿಸಲು ಇನ್ನುಳಿದ ಭಾಗದಲ್ಲಿ ಜೆಸಿಬಿ ಮೂಲಕ ಅಗೆದು ಹಾಕಿ ಹಾಗೆಯೇ ಬಿಟ್ಟು ಹೋಗಿದ್ದಾರೆ. ಇದರಿಂದಾಗಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯ ವಾಗದೇ ಕೊಳಚೆ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣವಾಗಿ ಪರಿಣಮಿಸಿದೆ. ಡಾಮರು ರಸ್ತೆಯ ಅಂಚಿನ ತನಕ ಚರಂಡಿಗಾಗಿ ಅಗೆದು ಹಾಕಲಾಗಿದೆ. ಈ ರಸ್ತೆಯಲ್ಲಿ ಶಾಲಾ ಬಸ್ಗಳು ಸೇರಿದಂತೆ ನೂರಾರು ಘನ ವಾಹನಗಳು ಸಂಚರಿಸುತ್ತಿದ್ದು ರಸ್ತೆ ಕುಸಿಯುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಚರಂಡಿಗಾಗಿ ಅಗೆದು ಹಾಕಿದ ಪರಿಣಾಮ ರಸ್ತೆ ಅಗಲ ಕಿರಿದಾಗಿದ್ದು ನಿತ್ಯ ವಾಹನ ಸಂಚಾರಕ್ಕೂ ತಡೆ ಉಂಟಾಗುತ್ತಿದೆ. ಇದರ ಬಗ್ಗೆ ನಗರ ಸಭೆಯ ಗಮನಕ್ಕೂ ತಂದಿದ್ದರೂ ಸೂಕ್ತ ಸ್ಪಂಧನೆ ದೊರೆತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಟೆಂಡರ್ಗೆ ಮುನ್ನವೇ ಕಾಮಗಾರಿ ಪ್ರಾರಂಭ…?:
ಸಂಪರ್ಕ ರಸ್ತೆಯ ಉರ್ಲಾಂಡಿ ಸುಶ್ರುತ ಆಸ್ಪತ್ರೆಯ ತಿರುವು ಬಳಿಯಿಂದ 40 ಮೀ. ಉದ್ದದ ಚರಂಡಿ ಕಾಮಗಾರಿಗೆ ಟೆಂಡರ್ ಅಗಿತ್ತು. ಆದರೆ ಅಲ್ಲಿ ಕಾಮಗಾರಿ ನಡೆಸಲು ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಆಕ್ಷೇಪದ ಜಾಗ ಬಿಟ್ಟು ನಂತರ ಜಾಗದಲ್ಲಿ ಕಾಮಗಾರಿ ನಡೆಸಲಾಗಿತ್ತು. ಚರಂಡಿ ಕಾಮಗಾರಿಗಾಗಿ ರಸ್ತೆಯ ಉದ್ದಕ್ಕೂ ಅಗೆದು ಹಾಕಲಾಗಿದೆ. ಟೆಂಡರ್ ಆಗಿರುವ 40 ಮೀಟರ್ ಕಾಮಗಾರಿ ಅಗಿದೆ. ಉಳಿದ ಭಾಗದಲ್ಲಿ ಅಗೆದು ಹಾಕಿ ಹಾಗೆಯೇ ಬಿಟ್ಟುಹೋಗಿದ್ದಾರೆ. ಚರಂಡಿ ಕಾಮಗಾರಿಗೆ ಟೆಂಡರ್ ಅಗುವ ಮೊದಲೇ ಅಗೆದು ಹಾಕಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.










