






ಪುತ್ತೂರು: ಶಾಸಕರು ಯಾವುದೇ ರೀತಿಯಲ್ಲಿ ದಲಿತರನ್ನು ನಿಂದಿಸಿಲ್ಲ. ರಾಜಕೀಯ ವ್ಯಕ್ತಿಯ ಹೇಳಿಕೆಯನ್ನು ರಾಜಕೀಯವಾಗಿಯೇ ನಿಂದಿಸಿದ್ದಾರೆ ಹೊರತು ಎಲ್ಲೂ ಕೂಡಾ ಜಾತಿ ರಾಜಕಾರಣ ಮಾಡಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿಯವರನ್ನು ಅವಮಾನಿಸುವ ಮೂಲಕ ದಲಿತ ಸಮೂಹಕ್ಕೆ ಅವಮಾನ ಮಾಡಿದ್ದಾರೆಂಬ ಆರೋಪಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಾಬು ಮರಿಕೆ ಅವರು ಸ್ಪಷ್ಟನೆ ನೀಡಿದ್ದಾರೆ.


ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಮಹಾತ್ಮಾಗಾಂಧಿ ನರೇಗ ಯೋಜನೆಯ ಹೆಸರನ್ನು ಕೇಂದ್ರ ಸರಕಾರವು ವಿಬಿ ಜಿರಾಮ್ಜಿ ಎಂದು ಬದಲಾಯಿಸಿ ಮಹಾತ್ಮಗಾಂಧೀಜಿಯವರ ಹೆಸರನ್ನೇ ತೆಗೆದು ಹಾಕಿದ ವಿಚಾರಕ್ಕೆ ಸಂಬಂಧಿಸಿ ಫೆ.9ರಂದು ಕಾಂಗ್ರೆಸ್ನಿಂದ ಪಾದಯಾತ್ರೆ ನಡೆದಿತು. ಈ ಕುರಿತು 4 ದಿನಗಳ ಬಳಿಕ ಬಿಜೆಪಿ ಉಪ್ಪಿನಂಗಡಿಯಲ್ಲಿ ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮೀಯವರನ್ನು ಕರೆಸಿ ಪ್ರತಿಭಟನೆ ಮಾಡಿಸಿದ್ದರು. ಈ ವೇಳೆ ನಾರಾಯಣ ಸ್ವಾಮಿಯವರು ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಅವರು ತಂದಿರುವ ಅನುದಾನ ಮತ್ತು ಅಭಿವೃದ್ಧಿ ವಿಚಾರಗಳನ್ನು ಕೇವಲವಾಗಿ ಮಾತನಾಡಿ ನಿಂಧಿಸಿ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ಶಾಸಕರು ಒಂದು ರೀತಿಯ ಗಾದೆ ಮಾತಿನಲ್ಲಿ ನಾಯಿಗಳು ಕಳ್ಳರಿಗೂ, ಒಳ್ಳೆಯವರಿಗೂ ಬೊಗಳುತ್ತದೆ. ಹಾಗಾಗಿ ನಾನು ಅದಕ್ಕೆ ಸ್ಪಂದಿಸಲು ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ನಾಯಕರು ಶಾಸಕರು ದಲಿತ ನಾಯಕರನ್ನು ಅವಮಾನಿಸಿ ನಿಂದಿಸಿದ್ದಾರೆಂದು ಬಿಂಬಿಸಿ ದಲಿತ ಬಿಜೆಪಿ ಸದಸ್ಯನ್ನು ಸೇರಿಸಿ ಪತ್ರಿಕಾಗೋಷ್ಟಿ ಮತ್ತು ದೂರು ನೀಡಿದ್ದಾರೆ. ಆದರೆ ಶಾಸಕರು ಯಾವುದೇ ರೀತಿಯಲ್ಲಿ ದಲಿತರನ್ನು ನಿಂದಿಸಿಲ್ಲ. ರಾಜಕೀಯ ವ್ಯಕ್ತಿಯ ಹೇಳಿಕೆಯನ್ನು ರಾಜಕೀಯವಾಗಿಯೇ ನಿಂದಿಸಿದ್ದಾರೆ ಹೊರತು ಎಲ್ಲೂ ಕೂಡಾ ಜಾತಿರಾಜಕಾರಣ ಮಾಡಿಲ್ಲ. ಆದರೆ ಬಿಜೆಪಿಯವರು ಇದನ್ನು ರಾಜಕೀಯ ಅಸ್ತ್ರವಾಗಬಹುದೆಂಬ ಉದ್ದೇಶವಿಟ್ಟು ಪತ್ರಿಕಾಗೋಷ್ಟಿ ಮಾಡಿದ್ದಾರೆ. ಆದರೆ ನಮ್ಮ ಶಾಸಕರು ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಪಣತೊಟ್ಟವರು. ಅವರ ಅಭಿವೃದ್ದಿ ಕಾರ್ಯಕ್ಕೆ ಬಿಜೆಪಿಯವರು ಕೂಡಾ ಶಾಸಕರನ್ನು ಹೊಗಳಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ನವರು ನಿಂದಿಸಿದ್ದಾರೆ ಎಂದು ಹೇಳಿರುವ ದಿನೇಶ್ ಅಮ್ಟೂರು ಅವರ ನಾಲಿಗೆಗೆ ಹುಳಬೀಳಬೇಕು. ಯಾಕೆಂದರೆ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ದೇಶಕ್ಕೆ ಕೊಟ್ಟದು ಕಾಂಗ್ರೆಸ್. ಕೇವಲ 15 ವರ್ಷಗಳ ನಂತರ ಬಂದ ಬಿಜೆಪಿ ಸರಕಾರ ಈ ರೀತಿಯ ಹೇಳಿಕೆ ಕೊಡಬೇಕಾದರೆ ಇತಿಹಾಸ ತಿಳಿದುಕೊಳ್ಳುವುದು ಅಗತ್ಯ. ದಲಿತರ ಎಷ್ಟೋ ದೈವಸ್ಥಾನ, ದೇವಸ್ಥಾನಗಳಿಗೆ, ಮನೆಗಳಿಗೆ, ನಿವೇಶನ ಇಲ್ಲದವರಿಗೆ ಶಾಸಕರು ಅನುದಾನ ತಂದು ಕೊಟ್ಟಿದ್ದಾರೆ. ಎಷ್ಟೋ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಮನವೊಲಿಸಿ ದಲಿತರಿ ರಸ್ತೆ ಸಂಪರ್ಕ ಒದಗಿಸಿಕೊಟ್ಟಿದ್ದಾರೆ ಎಂದವರು ಹೇಳಿದರು.



ಜಿ.ಪಂ ಮಾಜಿ ಅಧ್ಯಕ್ಷರೂ ಮತ್ತು ಕಾಂಗ್ರೆಸ್ ಎಸ್ಸಿ ಘಟಕದ ಹಿರಿಯ ನಾಯಕ ಸೋಮನಾಥ ಅವರು ಮಾತನಾಡಿ ನಮ್ಮ ಶಾಸಕರು ಎಲ್ಲರನ್ನು ಸಮಾನತೆಯಲ್ಲಿ ಕಾಣುತ್ತಾರೆ. ನಾವು ಹಿರಿಯ ಕಾಂಗ್ರೆಸ್ ನಾಯಕರಿದ್ದರೂ ಮೊನ್ನೆ ಮೊನ್ನೆ ಅಂಬೇಡ್ಕರ್ ಭವನದ ಶಿಲಾನ್ಯಾಸ ಸಂದರ್ಭದಲ್ಲೂ ಬಿಜೆಪಿಯ ಅಣ್ಣಪ್ಪ ಕಾರೆಕ್ಕಾಡು ಅವರ ಕೈಯಲ್ಲೇ ತೆಂಗಿನ ಕಾಯಿ ಒಡೆಸಿದ್ದಾರೆ. ಶಾಸಕರಿಂದ ಅನೇಕ ಪ್ರಯೋಜನ ಪಡೆದುಕೊಂಡ ಅಣ್ಣಪ್ಪ ಕಾರೆಕ್ಕಾಡು ಅವರು ಉಂಟ ಮನೆಗೆ ಎರಡು ಬಗೆದಿದ್ದಾರೆ ಎಂದು ಆರೋಪಿಸಿದರು.
ಅಕ್ರಮಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಅವರು ಮಾತನಾಡಿ ನಮ್ಮ ಶಾಸಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೋಟಿಗಟ್ಟಲೆ ಅನುದಾನ ತಂದಿದ್ದಾರೆ. 14.5 ಕೋಟಿ ರೂಪಾಯಿ ಕೇವಲ ರಸ್ತೆ ಮತ್ತು ನೀರಿಗಾಗಿ ನೀಡಿದ್ದಾರೆ. ಸುಮಾರು ರೂ. 22 ಕೋಟಿ ಅನುದಾನವನ್ನು ಅಂಬೇಡ್ಕರ್ ವಸತಿಶಾಲೆಗೆ ನೀಡಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಮಾಜಿ ಅಧ್ಯಕ್ಷರಾಗಿರುವ ನಗರಸಭೆ ಮಾಜಿ ಸದಸ್ಯ ಮುಕೇಶ್ ಕೆಮ್ಮಿಂಜೆ, ಬನ್ನೂರು ವಲಯ ಕಾಂಗ್ರೆಸ್ ಎಸ್ಸಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಾರಾಡಿ ಉಪಸ್ಥಿತರಿದ್ದರು.










