







@ ಸಿಶೇ ಕಜೆಮಾರ್
ಪುತ್ತೂರು: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಯಾಲ್ತಡ್ಕದಿಂದ ಗರಡಿ ಮೂಲಕ ನಿಡ್ಯಾಳ ಕುರುಡುಕಟ್ಟೆಯಾಗಿ ದೇರಾಜೆ ಅಥವಾ ಬಲ್ನಾಡು ಮೂಲಕ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿಡ್ಯಾಳದಿಂದ ಕುರುಡುಕಟ್ಟೆಯ ತನಕದ ಜಿಪಂ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆ ತುಂಬಾ ಹೊಂಡ ಗುಂಡಿಗಳೇ ತುಂಬಿದ್ದು ವಾಹನ ಸವಾರರು ಕಷ್ಟಪಡಬೇಕಾಗಿದೆ. ಪರಿಯಾಲ್ತಡ್ಕ ಗರಡಿಯಿಂದ ದೇವಸ್ಯ-ದೇರಾಜೆ ರಸ್ತೆಗೆ ಸಂಪರ್ಕ ಕಲ್ಪಿಸಲು ಕಳೆದ 7 ವರ್ಷಗಳ ಹಿಂದೆ ಗರಡಿಯಿಂದ ನಿಡ್ಯಾಳದ ತನಕ ಹೊಸ ರಸ್ತೆ ನಿರ್ಮಾಣವಾಗಿದೆ. ಇದೀಗ ನಿಡ್ಯಾಳದಿಂದ ಕುರುಡುಕಟ್ಟೆ ತನಕ ಇದ್ದ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆ ರಿಪೇರಿ ಮಾಡಿಕೊಡಿ ಎಂದು ಗ್ರಾಮಸ್ಥರು ಬಾಳೆ ಗಿಡ ನೆಟ್ಟು ‘ರಸ್ತೆ ರಿಪೇರಿಗಾಗಿ ರಸ್ತೆ ಮಾರಾಟಕ್ಕಿದೆ’ ಎಂಬ ಬರಹದ ಬೋರ್ಡ್ ಅನ್ನು ನೇತು ಹಾಕುವ ಮೂಲಕ ಪ್ರತಿಭಟಿಸಿದ್ದಾರೆ.



ನಿಡ್ಯಾಳದಿಂದ ಕುರುಡುಕಟ್ಟೆ ತನಕ ಸುಮಾರು ಅರ್ಧ ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು ಹೊಂಡ ಗುಂಡಿಗಳು ತುಂಬಿಕೊಂಡಿವೆ. ಇದೇ ರೀತಿ ದೇರಾಜೆಯಿಂದ ಬಲ್ನಾಡು ರಸ್ತೆಯಲ್ಲಿಯೂ ದೇರಾಜೆಯಿಂದ ಸುಮಾರು ೨ ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದೆ.ಅಲ್ಲಲ್ಲಿ ಡಾಂಬರ್, ಜಲ್ಲಿ ಎದ್ದು ಹೋಗಿದ್ದು ಗುಂಡಿಗಳಾಗಿವೆ. ನಿಡ್ಯಾಳದಿಂದ ಕುರುಡುಕಟ್ಟೆ ತನಕ ಅಲ್ಲಲ್ಲಿ ದೊಡ್ಡ ಗಾತ್ರದ ಹೊಂಡಗಳು ಆಗಿದ್ದು ಮಳೆಗಾಲದಲ್ಲಿ ಈ ಹೊಂಡಗಳಲ್ಲಿ ನೀರು ತುಂಬಿಕೊಂಡು ಪಾದಚಾರಿಗಳಿಗೂ ಕೂಡ ಕಷ್ಟವಾಗುತ್ತಿದೆ.



ಇದೀಗ ನಾದುರಸ್ತಿಯಲ್ಲಿರುವ ರಸ್ತೆಯನ್ನು ತುರ್ತು ದುರಸ್ತಿ ಮಾಡಬೇಕಾದ ಅಗತ್ಯತೆ ಇದೆ. ದೇರಾಜೆಯಿಂದ ಬಲ್ನಾಡು ರಸ್ತೆಯಲ್ಲಿ ಸುಮಾರು 2 ಕಿಲೋ ಮೀಟರ್ ದೂರದ ತನಕ ಹಾಗೆ ಕುರುಡುಕಟ್ಟೆಯಿಂದ ನಿಡ್ಯಾಳದ ತನಕದ ಅರ್ಧ ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು ಶಾಲಾ ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ಕೂಡ ಕಷ್ಟವಾಗಿದೆ. ಆದ್ದರಿಂದ ಶಾಸಕರು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ ಎಂಬುದು ಈ ಭಾಗದ ಗ್ರಾಮಸ್ಥರ ಮನವಿಯಾಗಿದೆ.
1 ಕೋಟಿ 60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಪರಿಯಾಲ್ತಡ್ಕ ಗರಡಿಯಿಂದ ಕೃಷ್ಣಮೂಲೆ, ನಿಡ್ಯಾಳ, ಕೃಷ್ಣಗಿರಿ, ಕುರುಡುಕಟ್ಟೆಗಾಗಿ ಬಲ್ನಾಡು, ದೇರಾಜೆ ರಸ್ತೆಗೆ ಸಂಪರ್ಕ ಕಲ್ಲಿಸುವ ಈ ರಸ್ತೆಯು ಗರಡಿಯಿಂದ ನಿಡ್ಯಾಳ ತನಕ 1 ಕೋಟಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ರಸ್ತೆ ನಿರ್ಮಾಣವಾಗಿದೆ. 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿಡ್ಯಾಳದಲ್ಲಿ ಸೇತುವೆ ನಿರ್ಮಾಣವಾಗಿದೆ. ಈ ರಸ್ತೆ ನಿರ್ಮಾಣಕ್ಕಾಗಿ ಇಲ್ಲಿನ ಕೆಲವು ಮಂದಿ ಕೃಷಿಕರು ತಮ್ಮ ಕೃಷಿ ಭೂಮಿಯನ್ನೇ ಬಿಟ್ಟು ಕೊಟ್ಟಿದ್ದಾರೆ.
ಪಿಡಬ್ಲ್ಯೂಡಿಗೆ ರಸ್ತೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ
ಇದೀಗ ಪುತ್ತೂರು ಬಲ್ನಾಡುವಿನಿಂದ ಕುರುಡುಕಟ್ಟೆ, ನಿಡ್ಯಾಳ, ಗರಡಿ,ಪರಿಯಾಲ್ತಡ್ಕ, ತೋರಣಕಟ್ಟೆಯಾಗಿ ಕುದ್ದುಪದವುಗೆ ಸಂಪರ್ಕ ಕಲ್ಲಿಸುವ ಈ ರಸ್ತೆಯನ್ನು ಪಿಡಬ್ಲ್ಯೂಡಿ ರಸ್ತೆಯಾಗಿ ಮಾರ್ಪಡಿಸಬೇಕು ಎಂದು ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದೆ.
‘ ಗರಡಿ ಕುರುಡುಕಟ್ಟೆ ರಸ್ತೆಯಲ್ಲಿ ಗರಡಿಯಿಂದ ನಿಡ್ಯಾಳ ತನಕ ರಸ್ತೆಯು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣಗೊಂಡಿದ್ದು 6 ವರ್ಷಗಳ ನಿರ್ವಹಣೆಯ ಬಳಿಕ ರಸ್ತೆಯನ್ನು ಬಿಟ್ಟುಕೊಡಲಾಗಿದೆ. ಹೊಸ ರಸ್ತೆಯಿಂದ ಮುಂದೆ ನಿಡ್ಯಾಳದಿಂದ ಕುರುಡುಕಟ್ಟೆ ತನಕ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ.’
ಮಹೇಶ್ ಶೆಟ್ಟಿ ಬೈಲುಗುತ್ತು, ಸದಸ್ಯರು ಪುಣಚ ಗ್ರಾಮ ಪಂಚಾಯತ್









