ಕುಡಿಪ್ಪಾಡಿ ಗ್ರಾಮ ಸಭೆ : ಕುಡಿಯುವ ನೀರನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡಿದರೆ ಸಂಪರ್ಕ ಕಡಿತ

0

ಪುತ್ತೂರು: ಪಂಚಾಯತ್‌ನಿಂದ ಸಂಪರ್ಕ ಪಡೆದುಕೊಂಡ ಕುಡಿಯುವ ನೀರನ್ನು ಕೃಷಿ ಹಾಗೂ ಇನ್ನಿತರ ಉದ್ದೇಶಗಳಿಗೆ ಬಳಕೆ ಮಾಡಿದರೆ ಸಂಪರ್ಕ ಕಡಿತಗೊಳಿಸಿ, ದಂಡ ವಿಧಿಸಲಾಗುವುದು ಎಂದು ಕುಡಿಪ್ಪಾಡಿ ಗ್ರಾ.ಪಂ ಸಭೆಯಲ್ಲಿ ತೀರ್ಮಾನಿಸಲಾಗಿದೆ.


ಸಭೆಯು ಗ್ರಾ.ಪಂ ಅಧ್ಯಕ್ಷ ಸೋಮಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಇತರ ವಿಷಯಗಳ ಚರ್ಚೆಯ ವೇಳೆ ಗ್ರಾಮಸ್ಥರು ಮಾತನಾಡಿ, ಪಂಚಾಯತ್‌ನ ಕುಡಿಯುವ ನೀರನ್ನು ಕೆಲವು ಕಡೆಗಳಲ್ಲಿ ಕೃಷಿ, ಹೂವಿನ ಗಿಡಗಳಿಗೆ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಇದೆಯಾ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಪಿಡಿಓ ಶರೀಫ್ ಮಾತನಾಡಿ, ಕುಡಿಯುವ ನೀರು ಜನರಿಗೆ ಅತೀ ಆವಶ್ಯಕ ಮೂಲಭೂತ ಸೌಲಭ್ಯಗಳಲ್ಲಿ ಒಂದು. ಪಂಚಾಯತ್‌ನಿಂದ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. ಇದನ್ನು ಉದ್ದೇಶಗಳಿಗೆ ಬಳಕೆ ಮಾಡಲು ಅವಕಾಶವಿಲ್ಲ. ಆದರೆ ಕೆಲವು ಕಡೆಗಳಲ್ಲಿ ಬಳಕೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯಲು ಸಂಪರ್ಕ ಪಡೆದುಕೊಂಡಿರುವ ನೀರನ್ನು ಕೃಷಿ, ಹೂವಿನ ಗಿಡಗಳು ಸೇರಿದಂತೆ ಇತರ ಉದ್ದೇಶಗಳಿಗೆ ಬಳಕೆ ಮಾಡಿದರೆ ಎಚ್ಚರಿಕೆಯ ನೊಟೀಸ್ ನೀಡಲಾಗುವುದು. ಮತ್ತೆಯೂ ಬಳಕೆ ಮಾಡಿದರೆ ನೀರಿನ ಸಂಪರ್ಕ ಕಡಿತಗೊಳಿಸಿ ದಂಡ ವಿಧಿಸಲಾಗುವುದು ಎಂದು ತಿಳಿಸಿದಾಗ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.


ತೆರಿಗೆ ಪಾವತಿದಾರರಲ್ಲದಿದ್ದರೂ ಗೃಹಲಕ್ಷ್ಮೀ ಬರುತ್ತಿಲ್ಲ
ಗೃಹಲಕ್ಷ್ಮೀ ಯೋಜನೆ ರೂ.2000 ಮೊತ್ತವು ನನಗೆ ಪ್ರಾರಂಭದ ಕೆಲ ತಿಂಗಳು ಮಾತ್ರ ಖಾತೆಗೆ ಜಮೆಯಾಗಿದೆ. ಅದರ ಬಳಿಕ ನನಗೆ ಯೋಜನೆಯ ಸೌಲಭ್ಯ ದೊರೆಯುತ್ತಿಲ್ಲ. ವಿಚಾರಿಸಿದಾಗ ತೆರಿಗೆ ಪಾವತಿಸುತ್ತಿದ್ದೀರಿ ಎಂಬ ಉತ್ತರ ದೊರೆತಿದೆ. ನಾನು ಈ ತನಕ ಯಾವುದೇ ತೆರಿಗೆ ಪಾವತಿಸಿಲ್ಲ. ನಾನು ತೆರಿಗೆ ಪಾವತಿಸುವಷ್ಟು ಶಕ್ತರಾಗಿದ್ದರೆ ಅವರ ನನ್ನ ಮನೆಗೆ ಬಂದು ತನಿಖೆ ನಡೆಸಲಿ. ನಾನು ಈಗ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯದಿಂದ ವಂಚಿತಲಾಗಿದ್ದೇನೆ ಎಂದು ಗ್ರಾಮಸ್ಥೆ ಸುನೀತಾ ಅವರು ತಿಳಿಸಿದರು.


ಮಳೆ ನೀರು, ಕೊಳಚೆ ನೀರು ರಸ್ತೆಗೆ ಬಿಟ್ಟರೆ ಕ್ರಮ
ರಸ್ತೆಯಿಂದ ಎತ್ತರ ಪ್ರದೇಶಗಳಲ್ಲಿರುವ ಮನೆಯವರು ಮಳೆ ನೀರನ್ನು ರಸ್ತೆಗೆ ಬಿಡುತ್ತಿದ್ದಾರೆ ಇದರಿಂದ ಮಳೆ ನೀರಿನ ಜೊತೆಗೆ ಮಣ್ಣು ಕೊಚ್ಚಿಬಂದು ರಸ್ತೆ ಹಾಲಾಗುತ್ತಿದೆ. ಮಳೆ ನೀರನ್ನು ರಸ್ತೆ ಬಿಡದಂತೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು. ಅಲ್ಲದೆ ಕೆಲವು ಕಡೆಗಳಲ್ಲಿ ಮನೆಯ ಕೊಳಚೆ ನೀರನ್ನು ರಸ್ತೆ ಬದಿಯ ಚರಂಡಿಗೆ ಬಿಡುತ್ತಿದ್ದು ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಮನೆಯವರು ಮಳೆ ನೀರು ಹಾಗೂ ಮನೆಯ ಕೊಳಚೆ ನೀರನ್ನು ರಸ್ತೆಗೆ ಬಿಡಬಾರದು. ರಸ್ತೆಗೆ ಬಿಟ್ಟರೆ ಸಂಬಂಧಪಟ್ಟ ಮನೆಯವರಿಗೆ ನೊಟೀಸ್ ಮಾಡಿ ಎಚ್ಚರಿಕೆ ನೀಡಲಾಗುವುದು. ಮತ್ತೆಯೂ ಮುಂದುವರಿದರೆ ದಂಡ ವಿಧಿಸಲಾಗುವುದು ಎಂದು ಪಿಡಿಓ ತಿಳಿಸಿದರು.


ಕೊಡಿಪ್ಪಾಡಿ-ಕಬಕ ರಸ್ತೆ ದುರಸ್ಥಿ ಯಾವಾಗ?
ಕೊಡಿಪ್ಪಾಡಿ- ಕಬಕ ರಸ್ತೆಯ ಅರ್ಕ, ಕೊಡುವರೆ ಪಡ್ಪುವಿನಿಂದ ಕಬಕ ತನಕದ ರಸ್ತೆ ತೀರಾ ಕೆಟ್ಟುಹೋಗಿದ್ದು ಸಂಚಾರಕ್ಕೆ ಸಂಕಷ್ಟು ಎದುರಿಸುವಂತಾಗಿದೆ. ಇದರ ಬಗ್ಗೆ ಪ್ರತಿ ಗ್ರಾಮಸಭೆಯಲ್ಲಿಯೂ ನಾವು ಒತ್ತಾಯ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆ ಯಾವಾಗ ದುರಸ್ಥಿಯಾಗುವುದು. ರಸ್ತೆಯು ಅಗಲ ಕಿರಿದಾಗಿದ್ದು ವಾಹನಗಳು ಇನ್ನೊಂದು ವಾಹನಕ್ಕೆ ಸೈಡ್ ಕೊಡಲು ಜಾಗವಿಲ್ಲ. ಹೀಗಾಗಿ ರಸ್ತೆಯನ್ನು ವಿಸ್ತರಿಸಿ, ಅಭಿವೃದ್ಧಿ ಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.


ಉಪಾಧ್ಯಕ್ಷೆ ರೇಖಾ, ಸದಸ್ಯರಾದ ಗಿರಿಧರ ಗೋಮುಖ, ಗಿರೀಶ್ ನಂದನ, ಚಂದ್ರಾವತಿ, ನವೀನ್ ಹಾಗೂ ಸುಮಿತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಶರೀಪ್ ಸ್ವಾಗತಿಸಿ, ಕಾರ್ಯದರ್ಶಿ ಭವಾನಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here