ಬೆಟ್ಟಂಪಾಡಿ ಗುತ್ತು ಧರ್ಮಚಾವಡಿಯ ಶ್ರೀಜಠಾಧಾರಿ, ವ್ಯಾಘ್ರಚಾಮುಂಡಿ, ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶ, ನೇಮೋತ್ಸವಕ್ಕೆ ಹೊರೆಕಾಣಿಕೆ

0

ಪುತ್ತೂರು: ಸುಮಾರು 500 ವರ್ಷಗಳ ಇತಿಹಾಸವಿರುವ ಬೆಟ್ಟಂಪಾಡಿ ಗುತ್ತು ಮನೆತನದ ಧರ್ಮಚಾವಡಿ ನೂತನವಾಗಿ ನಿರ್ಮಾಣಗೊಂಡು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀಜಠಾಧಾರಿ, ಧರ್ಮದೈವ ವ್ಯಾಘ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವ ಕಾರ್ಯಕ್ರಮಗಳಿಗೆ ಫೆ.25ರಂದು ಹೊರೆಕಾಣಿಕೆ ಸಮರ್ಪಣೆ ಮೂಲಕ ಚಾಲನೆ ದೊರೆಯಿತು.

ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯಕ್ಕೆ ವಿವಿಧ ಭಾಗಗಳಿಂದ ಬಂದ ಹೊರೆಕಾಣಿಕೆ ದೇವಾಲಯದಿಂದ ಗುತ್ತು ಧರ್ಮಚಾವಡಿಗೆ ಮೆರವಣಿಗೆ ಮೂಲಕ ನಡೆಯಿತು. ಶ್ರೀಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಳ್ಳಾಲ್ ತೆಂಗಿನ ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಬಳಿಕ ಚೆಂಡೆ, ವಾದ್ಯ ಘೋಷದೊಂದಿಗೆ ಮೆರವಣಿಗೆ ನಡೆದು ಗುತ್ತು ದರ್ಮಚಾವಡಿಯಲ್ಲಿ ಸಮರ್ಪಣೆ ನಡೆಯಿತು.


ಬೆಟ್ಟಂಪಾಡಿ ಗುತ್ತು ಮನೆಯ ಚಂದ್ರಾವತಿ ಎ. ರೈ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಮೋಹನ್ ದಾಸ ರೈ ಎ., ಜೀರ್ಣೊದ್ಧಾರ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ರೈ ಆನಾಜೆ, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ರೈ ಗುತ್ತು, ಕೋಶಾಧಿಕಾರಿ ರಂಗನಾಥ ರೈ ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ದಯಾನಂದ ರೈ ಕೋರ್ಮಂಡ, ಕೋಶಾಧಿಕಾರಿ ಕಿಶೋರ್ ಶೆಟ್ಟಿ ಕೋರ್ಮಂಡ, ಹೊರೆಕಾಣಿಕೆ ಸಮಿತಿ ಸಂಚಾಲಕ ಸಂತೋಷ್ ರೈ ಗುತ್ತು, ಉಪಾಧ್ಯಕ್ಷರುಗಳಾದ ಅಮೃತಪ್ರಸಾದ ರೈ ಗುತ್ತು, ಶೇಷಪ್ಪ ರೈ ಮೂರ್ಕಾಜೆ ಸೇರಿದಂತೆ ವಿವಿಧ ಉಪಸಮಿತಿಗಳ ಸಂಚಾಲಕರು, ಸಹಸಂಚಾಲಕರು ಹಾಗೂ ಸದಸ್ಯರು ಭಾಗವಹಿಸಿದರು.

ಉಗ್ರಾಣ ಮುಹೂರ್ತ
ಹೊರೆಕಾಣಿಕೆ ಮೆರವಣಿಗೆ ಬಳಿಕ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು. ಇರ್ದೆ ಶ್ರೀವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ್ ರೈ ಬಾಲ್ಯೊಟ್ಟು ಗುತ್ತುರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ, ವಿವಿಧ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.

ಸಂಜೆ 5ರಿಂದ ತಂತ್ರಿವರ್ಯರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ಥಳಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಶ್ರೀದುರ್ಗಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ 1.30ರಿಂದ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ ಮತ್ತು ರಾತ್ರಿ 7.30ರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ನಡೆಯಿತು.

ಇಂದು ದೈವಗಳ ಪ್ರತಿಷ್ಠೆ, ನೇಮೋತ್ಸವ:
ಫೆ.26ರಂದು ಬೆಳಿಗ್ಗೆ 7ರಿಂದ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ, 9.36ರ ನಂತರದ ಮೇಷ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀಜಠಾಧಾರಿ ದೈವ, ಧರ್ಮದೈವ ವಾಘ್ರಚಾಮುಂಡಿ ದೈವ ಮತ್ತು ಸಪರಿವಾರ ದೈವಗಳ ಪುನಃ ಪ್ರತಿಷ್ಟೆ, ತಂಬಿಲ ಸೇವೆ ನಡೆಯಲಿದೆ. ಬಳಿಕ ಶ್ರೀವೆಂಕಟ್ರಮಣ ದೇವರ ಮುಡಿಪು ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬೆಳಿಗ್ಗೆ11.30ರಿಂದ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದೆ. ರಾತ್ರಿ 7ರಿಂದ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಪೂಜೆ, ದೈವಗಳಿಗೆ ತಂಬಿಲ ನಡೆದು ಗುತ್ತು ಧರ್ಮಚಾವಡಿಗೆ ದೈವದ ಭಂಡಾರ ಆಗಮನ ಬಳಿಕ ಶ್ರೀಜಠಾಧಾರಿ ದೈವದ ನೇಮ, ಶ್ರೀರಕ್ತೇಶ್ವರಿ ದೈವದ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here