ಗ್ರಾಮೀಣ ಪ್ರದೇಶಗಳಲ್ಲಿ 9&11, ಕಟ್ಟಡ ಪರವಾನಿಗೆಗೆ ರಸ್ತೆ ದೃಢಪತ್ರ ನೀಡಲು ಮಾರ್ಗಸೂಚಿ ಹೊರಡಿಸಿ: ಜಿ.ಪಂ ಸಿಇಒಗೆ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಮನವಿ

0

ಮಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ 9&11 ಹಾಗೂ ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯುವ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತ್ ರಸ್ತೆಗಳಿಗೆ ಸಂಬಂಧಿಸಿದ ದೃಢಪತ್ರ ನೀಡಲು ಸ್ಪಷ್ಟ ಮಾರ್ಗಸೂಚಿ ಹೊರಡಿಸುವಂತೆ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆ ಐಎಎಸ್ ಅವರಿಗೆ ಮನವಿ ಸಲ್ಲಿಸಿದ್ದಾರೆ.


ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ 9&11 ಮತ್ತು ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯಲು ಸರ್ಕಾರದ ನಿಯಮದಂತೆ ಸಂಬಂಧಿತ ಪ್ರಾಧಿಕಾರಗಳು ಮತ್ತು ಜಿಲ್ಲಾ ಸಹಾಯಕ ನಿರ್ದೇಶಕರ ಅನುಮೋದನೆ ಅಗತ್ಯವಿದೆ. ಗ್ರಾಮಾಂತರ ಪ್ರದೇಶಗಳಿಂದ ಸ್ವೀಕರಿಸುವ ಪ್ರಸ್ತಾವನೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಮುಖ್ಯವಾಗಿ ಗ್ರಾಮ ಪಂಚಾಯತ್ ರಸ್ತೆಗಳ ಕುರಿತು ಗ್ರಾಮ ಪಂಚಾಯತ್‌ನಿಂದ ದೃಢಪತ್ರ ಅವಶ್ಯಕವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


ಕೆಲವು ಸಂದರ್ಭಗಳಲ್ಲಿ ಹಾಲಿ ಬಳಕೆಯಲ್ಲಿರುವ ಗ್ರಾಮ ಪಂಚಾಯತ್ ರಸ್ತೆಗಳು ವಿವಿಧ ಯೋಜನೆಗಳಡಿ ಅಭಿವೃದ್ಧಿಪಡಿಸಲ್ಪಟ್ಟಿದ್ದರೂ ದಾಖಲೆಗಳ ಪ್ರಕಾರ ಅವು ಪಟ್ಟಾ ಭೂಮಿ ಅಥವಾ ಸರ್ಕಾರಿ ಭೂಮಿಯಾಗಿರುತ್ತವೆ. ಈ ಹಿನ್ನೆಲೆ ಪಂಚಾಯತ್ ವ್ಯಾಪ್ತಿಯ ಖಾಸಗಿ ರಸ್ತೆಗಳನ್ನು ಭೂ ಪರಿವರ್ತನೆ ಮಾಡಿ ಹಸ್ತಾಂತರಿಸುವ ಪ್ರಕ್ರಿಯೆ ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.


ಈ ಸಂದರ್ಭದಲ್ಲಿ ಭೂಮಿ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆದು, ಸ್ಥಳ ಪರಿಶೀಲನೆ ನಡೆಸಿ ಪಂಚಾಯತ್ ಪ್ರಾಪರ್ಟಿ ದಾಖಲೆಗಳಲ್ಲಿ ನಮೂದಿಸಿ, ಹಾಲಿ ಉಪಯೋಗದಲ್ಲಿರುವ ರಸ್ತೆಗಳ ಕುರಿತು ಗ್ರಾಮ ಪಂಚಾಯತ್‌ನಿಂದ ದೃಢಪತ್ರ ನೀಡಿದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮುಸ್ತಫ ಅಭಿಪ್ರಾಯಪಟ್ಟಿದ್ದಾರೆ.


ಆದ್ದರಿಂದ ಜನರ ಹಿತಾಸಕ್ತಿಯನ್ನು ಪರಿಗಣಿಸಿ, ಹಾಲಿ ಬಳಕೆಯಲ್ಲಿರುವ ರಸ್ತೆಗಳ ಕುರಿತು ಗ್ರಾಮ ಪಂಚಾಯತ್ ದೃಢಪತ್ರ ನೀಡಲು ಸೂಕ್ತ ಮಾರ್ಗಸೂಚಿ ಹೊರಡಿಸುವಂತೆ ಅವರು ಜಿ.ಪಂ ಸಿಇಒ ಅವರನ್ನು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here