ರಾಜ್ಯದಲ್ಲಿ ಗೃಹ ಬಳಕೆ ಎಲ್‌ಪಿಜಿ ಕೊರತೆ ಇಲ್ಲ

0

ವಾಣಿಜ್ಯ ಸಿಲಿಂಡರ್ ಸಮಸ್ಯೆಗೆ ವಾರದಲ್ಲೇ ಪರಿಹಾರ

ಬೆಂಗಳೂರು: ರಾಜ್ಯದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲ.ವಾಣಿಜ್ಯ ಬಳಕೆಯ ಸಿಲಿಂಡರ್ ಸರಬರಾಜಿನಲ್ಲಿನ ವ್ಯತ್ಯಯವನ್ನು ವಾರದ ಒಳಗೆ ಬಗೆಹರಿಸಲಾಗುವುದು. ಹೋಟೆಲ್, ಕಲ್ಯಾಣ ಮಂಟಪಗಳ ಶುಭ ಕಾರ್ಯಗಳನ್ನು ಅಗತ್ಯ ಸೇವೆ ಎಂದು ಪರಿಗಣಿಸಿ ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಲಾಗುವುದು.ತೈಲ ಕಂಪನಿಗಳ ಜತೆ ಶುಕ್ರವಾರ ಸಭೆ ನಡೆಸಿದ ನಂತರ ಹೋಟೆಲ್ ಉದ್ಯಮಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.


ಆಧಾರ ರಹಿತ ವದಂತಿಯಿಂದ ಆತಂಕಕ್ಕೊಳಗಾಗಬಾರದು
ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯದಲ್ಲಿ ಪೆಟ್ರೋಲ್,ಡೀಸೆಲ್ ಮತ್ತು ಅಡುಗೆ ಅನಿಲ(ಎಲ್‌ಪಿಜಿ)ದ ಕೊರತೆಯಿದೆ ಎಂಬ ಸುಳ್ಳು ಮತ್ತು ಆಧಾರರಹಿತ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದೆ.ಇಂತಹ ವದಂತಿಗಳಿಂದ ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.


ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ರಮೇಶ್ ಬಾಬು, ಐವನ್ ಡಿ’ಸೋಜ, ಕೆ.ಶಿವಕುಮಾರ್, ರಾಮೋಜಿಗೌಡ, ಜಗದೇವ್ ಗುತ್ತೇದಾರ್, ರಾಜೇಂದ್ರ ರಾಜಣ್ಣ ಅವರು ನಿಯಮ ೩೩೦ರ ಅಡಿ ಮಂಡಿಸಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರಕಾರದ ಮಾಹಿತಿಯಂತೆ ದೇಶಾದ್ಯಂತ ಇಂಧನ ಮತ್ತು ಎಲ್‌ಪಿಜಿ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಪೆಟ್ರೋಲ್ ಬಂಕ್‌ಗಳು ಮತ್ತು ಎಲ್‌ಪಿಜಿ ವಿತರಕರಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ. ಸಾರ್ವಜನಿಕರು ಆತಂಕದಿಂದ ಅತಿಯಾಗಿ ಖರೀದಿಸುವುದರಿಂದ ಸರಬರಾಜು ವ್ಯವಸ್ಥೆಯಲ್ಲಿ ಅನಗತ್ಯ ಅಸ್ತವ್ಯಸ್ತ ಉಂಟಾಗುತ್ತಿದೆ ಎಂದರು.


ಮಾ.9ರ ಕೇಂದ್ರ ಸರಕಾರದ ಆದೇಶದಂತೆ, ಎಲ್ಲ ಸಾರ್ವಜನಿಕ ವಲಯದ ತೈಲ ಕಂಪನಿಗಳು ಉತ್ಪಾದನೆಯಾಗುವ ಅನಿಲವನ್ನು ಮೊದಲು ಗೃಹಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಪೂರೈಸಲು ಬದ್ಧವಾಗಿವೆ.ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಆಸ್ಪತ್ರೆಗಳು ಮತ್ತು ವಿದ್ಯಾರ್ಥಿ ನಿಲಯಗಳಂತಹ ವಾಣಿಜ್ಯ ಉದ್ದೇಶಗಳಿಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.ವಾಣಿಜ್ಯ ಬಳಕೆಯ ಅನಿಲ ಪೂರೈಕೆಯಲ್ಲಿ ಕೊರತೆಯಾಗದಂತೆ ಮತ್ತು ಅತಿ ಹೆಚ್ಚಿನ ದರ ವಸೂಲಿ ಮಾಡದಂತೆ ತೈಲ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.


ಸಿಲಿಂಡರ್ ವಿತರಣೆಯಲ್ಲಿ ವಿಳಂಬ, ಅಕ್ರಮ ದಾಸ್ತಾನು ಅಥವಾ ಹೆಚ್ಚಿನ ದರ ವಸೂಲಿ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ದೂರವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ದೂರು ನೀಡಬಹುದು.ಬುಕಿಂಗ್ ನಂಬರ್‌ಗಳು ಕೆಲಸ ಮಾಡದಿದ್ದಲ್ಲಿ ಪರ್ಯಾಯ ವಾಟ್ಸಾಪ್ ಮಾರ್ಗಗಳ ಮೂಲಕ ಬುಕ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಾಳಸಂತೆಕೋರರ ವಿರುದ್ಧ ಕಾನೂನು ಕ್ರಮ
ಪರಿಸ್ಥಿತಿಯ ದುರುಪಯೋಗಪಡಿಸಿಕೊಂಡು ಇಂಧನ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಸರಕಾರವು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ.ಗೃಹಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುವವರ ಮೇಲೆ ನಿರಂತರ ದಾಳಿ ಮುಂದುವರೆಸಲಾಗಿದೆ.ಅಕ್ರಮ ರೀಫಿಲ್ಲಿಂಗ್ ಮತ್ತು ಕಡಿಮೆ ತೂಕದ ಅನಿಲ ವಿತರಿಸುವ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದೂ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಅಗತ್ಯ ಎಲ್‌ಪಿಜಿ ಸಿಲಿಂಡರ್ ಲಭ್ಯವಿದೆ ಆಹಾರ ಇಲಾಖೆ ಪ್ರಕಟಣೆ
ರಾಜ್ಯದಲ್ಲಿ ಅಗತ್ಯವಿರುವಷ್ಟು ಎಲ್‌ಪಿಜಿ ಸಿಲಿಂಡರ್‌ಗಳು ಲಭ್ಯವಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೇಳಿದೆ. ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಇದೆ.ಪ್ರಮುಖ ತೈಲಕಂಪನಿಗಳಾದ ಐಒಸಿಎಲ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದೇವೆ.ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಇಲ್ಲ ಮತ್ತು ಮುಂಬರುವ ದಿನಗಳಿಗೆ ಬೇಕಾಗುವಷ್ಟು ದಾಸ್ತಾನು ಇದೆ ಎಂದು ಕಂಪನಿಗಳು ದೃಢಪಡಿಸಿವೆ.ಗ್ರಾಹಕರು ಆತಂಕದಿಂದ, ಅನಗತ್ಯವಾಗಿ ಸಿಲಿಂಡರ್‌ಗಳನ್ನು ಬುಕ್ ಮಾಡಬಾರದು. ಅನಗತ್ಯ ಬುಕ್ಕಿಂಗ್‌ನಿಂದ ಸಿಲಿಂಡರ್‌ಗಳ ಕೊರತೆ ಮತ್ತು ಕೃತಕ ಅಭಾವ ಸೃಷ್ಟಿಯಾಗಬಹುದು. ಯಾರೂ ಹೆಚ್ಚಿನ ಸಂಖ್ಯೆಯಲ್ಲಿ ಸಿಲಿಂಡರ್‌ಗಳನ್ನು ಸಂಗ್ರಹಿಸಬಾರದು ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡಬಾರದು. ಹಾಗೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

LEAVE A REPLY

Please enter your comment!
Please enter your name here