







@ ಸಿಶೇ ಕಜೆಮಾರ್
ಪುತ್ತೂರು: ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್‌ಗಳ ಸರಬರಾಜಿನಲ್ಲಿ ಉಂಟಾದ ವ್ಯತ್ಯಯ ಅದರಲ್ಲೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ತಾತ್ಕಾಲಿಕ ಸ್ಥಗಿತದಿಂದಾಗಿ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಗ್ಯಾಸ್ ಸಿಗದಿದ್ರೆ ಏನು ಮಾಡೋದು ಎಂಬ ಚಿಂತೆಯಲ್ಲಿಯೇ ಹೋಟೆಲ್ ಮಾಲೀಕರು ತಮ್ಮ ದುಡಿಮೆ ಉಳಿಸಿಕೊಳ್ಳಲು ಕಟ್ಟಿಗೆ ಒಲೆಗಳತ್ತ ಚಿತ್ತ ಹಾಯಿಸಿದ್ದಾರೆ. ಈಗಾಗಲೇ ಹಲವು ಮಂದಿ ಹೋಟೆಲ್ ಮಾಲೀಕರು ತಮ್ಮ ಹೋಟೆಲ್‌ನಲ್ಲಿ ಕಟ್ಟಿಗೆ ಒಲೆಗಳನ್ನು ನಿರ್ಮಿಸುತ್ತಿದ್ದಾರೆ ಇದಲ್ಲದೆ ಉಪಯೋಗಿಸದೇ ಹಾಗೆ ಬಿದ್ದಿದ್ದ ಕಟ್ಟೆಗೆ ಒಲೆಗಳನ್ನು ಮತ್ತೆ ಚಾಲೂ ಮಾಡಲು ಹೊರಟಿದ್ದಾರೆ. ಗ್ಯಾಸ್ ಸಿಗಲಿ ಬಿಡಲಿ ಹೋಟೆಲ್‌ನಲ್ಲಿರುವ ಕೆಲಸಗಾರರಿಗೆ ಕೆಲಸ ಕೊಡಬೇಕು ಹಾಗೂ ಬರುವ ಗ್ರಾಹಕರಿಗೆ ಸಾಧ್ಯವಾಗುವ ಆಹಾರ ನೀಡಬೇಕು ಎಂಬ ನಿಟ್ಟಿನಲ್ಲಿ ಹೋಟೆಲ್ ಮಾಲೀಕರು ಸರ್ಕಸ್ ಮಾಡುತ್ತಿದ್ದಾರೆ.



ಕಟ್ಟಿಗೆ ಒಲೆಗಳಿಗೆ ಭಾರೀ ಡಿಮ್ಯಾಂಡ್
ಒಂದು ಕಾಲದಲ್ಲಿ ಯಾರಿಗೂ ಬೇಡವಾಗಿದ್ದ ಕಟ್ಟಿಗೆ ಒಲೆಗಳು ಇದೀಗ ಮತ್ತೆ ಬೇಡಿಕೆಯನ್ನು ಹೆಚ್ಚಿಸಿಕೊಂಡಿವೆ. ಮನೆ, ಹೋಟೆಲ್‌ಗಳ ಮೂಲೆಯಲ್ಲಿ ಬಿದ್ದುಕೊಂಡಿದ್ದ ಕಟ್ಟಿಗೆ ಒಲೆಗಳಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳತೊಡಗಿದೆ. ಗ್ಯಾಸ್ ಸಿಗದಿದ್ದರೂ ಕಟ್ಟಿಗೆಗೆ ಮಾತ್ರ ಯಾವುದೇ ಬರ ಇಲ್ಲ, ಪೇಟೆಗಳಲ್ಲಿ ಕಟ್ಟಿಗೆ ಡಿಫೋಗಳಿದ್ದು ಗ್ರಾಹಕರಿಗೆ ಬೇಕಾದ ಕಟ್ಟಿಗೆಗಳನ್ನು ಪೂರೈಕೆ ಮಾಡುತ್ತಿವೆ. ಅದೇ ರೀತಿ ಹಳ್ಳಿಗಳಲ್ಲಿ ಪ್ರತಿಯೊಂದು ಮನೆಯವರಿಗೂ ಬೇಕಾದಷ್ಟು ಅರಣ್ಯ ಪ್ರದೇಶವಿದ್ದು ಅದರಲ್ಲಿ ಬೇಕಾದಷ್ಟು ಕಟ್ಟಿಗೆ ದೊರೆಯುತ್ತದೆ. ಹೀಗಿರುವಾಗ ಗ್ಯಾಸ್ ಸಿಗದಿದ್ದರೂ ಕಟ್ಟಿಗೆಯನ್ನು ಉಪಯೋಗಿಸಿ ತಿನ್ನಲು ಬೇಕಾದ ಆಹಾರ ಉತ್ಪನ್ನಗಳನ್ನು ತಯಾರಿಸಲು ಯಾವುದೇ ಆತಂಕ ಇಲ್ಲ.



ಹೋಟೆಲ್‌ಗಳಲ್ಲೂ ಕಟ್ಟಿಗೆ, ಸಿಗಡಿ ಒಲೆ ಬಳಕೆ
ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಅಭಾವದಿಂದಾಗಿ ಹೋಟೆಲ್ ಮಾಲೀಕರು ಚಿಂತೆಗೀಡಾಗಿದ್ದು ಈಗಾಗಲೇ ಬೆಂಗಳೂರಿನಂತಹ ಸಿಲಿಕಾಟ್ ಸಿಟಿಗಳಲ್ಲಿ ಬಹಳಷ್ಟು ಹೋಟೆಲ್‌ಗಳ ಬಂದ್ ಆಗಿದೆ. ಕೆಲವೊಂದು ಹೋಟೆಲ್‌ನವರು ಸೀಮಿತ ಆಹಾರವನ್ನು ಮಾತ್ರ ತಯಾರಿಸುತ್ತಿದ್ದು ಆಹಾರ ಉತ್ಪನ್ನಗಳ ಬೆಲೆಯನ್ನು ಕೂಡ ಏರಿಕೆ ಮಾಡಿದ್ದಾರೆ. ಬಹುತೇಕ ಹೋಟೆಲ್‌ಗಳಲ್ಲಿ ನೇಪಾಲ, ಜಾರ್ಖಂಡ್, ಯುಪಿ,ಮಣಿಪುರ ಇತ್ಯಾದಿ ರಾಜ್ಯಗಳ ಕೆಲಸಗಾರರಿದ್ದು ಇವರಿಗೆ ಕೆಲಸ ಕೊಡಬೇಕು ಹಾಗೂ ಹೋಟೆಲ್‌ಗೆ ಬರುವ ದಿನನಿತ್ಯದ ಗ್ರಾಹಕರಿಗೆ ಅಗತ್ಯ ಆಹಾರ ತಿನಿಸುಗಳನ್ನು ಕೊಡಬೇಕು ಎಂಬ ನಿಟ್ಟಿನಲ್ಲಿ ಹೋಟೆಲ್ ಮಾಲೀಕರು ಕಟ್ಟಿಗೆ ಒಲೆ, ಸಿಗಡಿ ಒಲೆ ಇತ್ಯಾದಿಗಳಿಗೆ ಮಾರು ಹೋಗುತ್ತಿದ್ದಾರೆ. ನಮ್ಮ ಹೋಟೆಲ್‌ನಲ್ಲೂ ಬಹುತೇಕ ಕೆಲಸಗಾರರು ಹೊರ ರಾಜ್ಯದವರೇ ಆಗಿದ್ದು ಇವರಿಗೆ ಕೆಲಸ ಕೊಡಬೇಕಾಗಿದೆ ಹೋಟೆಲ್ ಬಂದ್ ಮಾಡಿದರೆ ಇವರಿಗೆ ಕೆಲಸ ಇಲ್ಲದಂತಾಗುತ್ತದೆ ಹಾಗೇ ನಮ್ಮ ದಿನ ನಿತ್ಯದ ಗ್ರಾಹಕರಿಗೆ ಅಗತ್ಯ ಆಹಾರ ತಿನಿಸುಗಳನ್ನು ಕೊಡಬೇಕಾಗುತ್ತದೆ ಈ ನಿಟ್ಟಿನಲ್ಲಿ ನಾವು ಕೂಡ ಕಟ್ಟಿಗೆ ಒಲೆಯನ್ನು ನಿರ್ಮಿಸುತ್ತಿದ್ದೇವೆ ಎನ್ನುತ್ತಾರೆ ಕುಂಬ್ರದ ಅಲ್‌ರಾಯ ಫ್ಯಾಮಿಲಿ ರೆಸ್ಟೋರೆಂಟ್ ಮಾಲೀಕ ರಫೀಕ್ ಅಲ್‌ರಾಯರವರು.
ಆಹಾರ ಉತ್ಪನ್ನಗಳ ಬೆಲೆಯಲ್ಲೂ ಏರಿಕೆ..?
ಗ್ಯಾಸ್ ಅಭಾವದಿಂದಾಗಿ ಪರ್ಯಾಯವಾಗಿ ಕಟ್ಟಿಗೆ ಒಲೆ, ಸಿಗಡಿ, ವಿದ್ಯುತ್ ಒಲೆ ಇತ್ಯಾದಿಗಳನ್ನು ಹೋಟೆಲ್ ಮಾಲೀಕರು ಅಳವಡಿಸಿಕೊಂಡು ಆಹಾರ ಉತ್ಪನ್ನಗಳನ್ನು ತಯಾರಿಸುತ್ತಿದ್ದು ಇದರಿಂದಾಗಿ ಆಹಾರ ಉತ್ಪನ್ನಗಳ ಬೆಲೆಯಲ್ಲೂ ಕೊಂಚ ಮಟ್ಟಿಗೆ ಏರಿಕೆಯನ್ನು ಮಾಡಿದ್ದಾರೆ. ಕಟ್ಟಿಗೆ ಒಲೆ, ಸಿಗಡಿ ಒಲೆಗಳಲ್ಲಿ ಆಹಾರ ತಯಾರಿಸುವುದು ಸ್ವಲ್ಪಮಟ್ಟಿಗೆ ಕಷ್ಟದ ಕೆಲಸವಾಗಿದ್ದು ಕಾರ್ಮಿಕರು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ ಅದೇ ರೀತಿ ವಿದ್ಯುತ್ ಒಲೆಗಳಲ್ಲಿ ಆಹಾರ ತಯಾರಿಸುವುದು ಅತೀ ದುಬಾರಿಯಾಗಿದೆ. ಇದರಿಂದಾಗಿ ಆಹಾರ ಉತ್ಪನ್ನಗಳ ಬೆಲೆಯಲ್ಲೂ ಏರಿಕೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಹೋಟೆಲ್ ಉದ್ಯಮಿ ರಫೀಕ್ ಅಲ್‌ರಾಯರು.
ಇನ್ನೆಷ್ಟು ದಿನ ಈ ಬಿಕ್ಕಟ್ಟು…?
ಕೊಲ್ಲಿ ರಾಷ್ಟ್ರಗಳ ಯುದ್ಧದ ಪರಿಣಾಮ ಉಂಟಾಗಿರುವ ಗ್ಯಾಸ್ ಅಭಾವವು ಅದರಲ್ಲೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಇನ್ನಷ್ಟು ದಿನ ಇರಬಹುದು ಎಂದು ನಾಗರೀಕರಲ್ಲಿ ಆತಂಕ ಸೃಷ್ಟಿಯಾಗಿದೆ. ಸರಕಾರವು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗಬಾರದು ಎಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ಆಗಿರುವ ತೊಂದರೆಯಿಂದಾಗಿ ಮುಖ್ಯವಾಗಿ ಹೋಟೆಲ್ ಉದ್ಯಮದ ದೊಡ್ಡ ಮಟ್ಟದ ಪರಿಣಾಮ ಬೀರಿದೆ.
ಅನಿವಾರ‍್ಯವಾಗಿ ಬೆಲೆ ಏರಿಕೆ ಮಾಡಬೇಕಾಗಿದೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದಿಂದಾಗಿ ಹೋಟೆಲ್ ಮಾಲೀಕರು ಕಟ್ಟಿಗೆ, ಸಿಗಡಿ, ವಿದ್ಯುತ್ ಒಲೆಗಳನ್ನು ಬಳಸುತ್ತಿದ್ದು ಇದು ಹೆಚ್ಚು ದುಬಾರಿ ಅಲ್ಲದೆ ಹೆಚ್ಚು ಶ್ರಮದಾಯಕವಾಗಿದೆ.ಕೆಲವೊಂದು ಕಾರ್ಮಿಕರು ಕಟ್ಟಿಗೆ ಒಲೆಗಳಲ್ಲಿ ಅಡುಗೆ ಮಾಡಲು ಒಪ್ಪುತ್ತಿಲ್ಲ ಅಲ್ಲದೆ ಚೈನೀಸ್ ಇತ್ಯಾದಿ ಐಟಂಗಳನ್ನು ಕಟ್ಟಿಗೆ ಒಲೆಯಲ್ಲಿ ಮಾಡುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಆಹಾರ ಉತ್ಪನ್ನಗಳ ಬೆಲೆಯನ್ನು ಕೊಂಚ ಮಟ್ಟಿಗೆ ಏರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಬಗ್ಗೆ ಗ್ರಾಹಕರು ಸಹಕಾರ ನೀಡಬೇಕು ಎನ್ನುತ್ತಾರೆ ಹೋಟೆಲ್ ಮಾಲೀಕರು.
ತಿಂಡಿ ಐಟಮ್‌ಗಳನ್ನು ಮಾಡುವುದನ್ನು ಕಡಿಮೆ ಮಾಡಿದ್ದೇವೆ. ಇಡ್ಲಿ ಇತ್ಯಾದಿಗಳನ್ನು ಮನೆಯಲ್ಲಿ ಕಟ್ಟಿಗೆ ಒಲೆಯಲ್ಲಿ ಮಾಡಿ ಹೋಟೆಲ್‌ಗೆ ತರುತ್ತಿದ್ದೇವೆ. ಮಧ್ಯಾಹ್ನ ಚಿಕನ್ ಸಾಂಬಾರು ಮಾಡುವುದನ್ನು ನಿಲ್ಲಿಸಿದ್ದೇವೆ. ಒಂದಷ್ಟು ದಿನಕ್ಕೆ ಬರುವಷ್ಟು ಗ್ಯಾಸ್ ಇದೆ ಮತ್ತೆ ಹೋಟೆಲ್ ಬಂದ್ ಮಾಡಬೇಕಷ್ಟೆ ಬೇರೆ ಯಾವುದೇ ಉಪಾಯವಿಲ್ಲ.
ಪುರುಷೋತ್ತಮ ಪರ್ಪುಂಜ
ಮಾಲಕರು ಹೋಟೆಲ್ ದ್ವಿತಿ ಪರ್ಪುಂಜ
ನಾನು ಬಹುತೇಕ ಎಲ್ಲಾ ತಿಂಡಿ ತಿನಿಸುಗಳನ್ನು ಮನೆಯಲ್ಲಿ ಕಟ್ಟಿಗೆ ಒಲೆಯಲ್ಲಿ ಮಾಡಿಯೇ ಕ್ಯಾಟೀನ್‌ಗೆ ತರುತ್ತಿದ್ದೇನೆ. ಕ್ಯಾಟೀನ್ ಪಕ್ಕದಲ್ಲಿ ಕಟ್ಟಿಗೆ ಒಲೆ ಮಾಡಿಕೊಂಡಿದ್ದು ಅದರಲ್ಲಿ ಅನ್ನ ಬೇಯಿಸುತ್ತಿದ್ದೇನೆ. ಒಟ್ಟಿನಲ್ಲಿ ಕ್ಯಾಟೀನ್‌ಗೆ ಬಂದ ಗ್ರಾಹಕರಿಗೆ ಸಾಧ್ಯವಾದಷ್ಟು ರೀತಿಯಲ್ಲಿ ಆಹಾರ ಉತ್ಪನ್ನಗಳನ್ನು ನೀಡಲು ಪ್ರಯತ್ನಿಸುತ್ತಿದ್ದೇನೆ.
ಜನಾರ್ದನ್ ಗೌಡ,
ಕ್ಯಾಟೀನ್ ಮಾಲಕರು ತಿಂಗಳಾಡಿ









