ಕೊಡಿಪಾಡಿ ಜಾತ್ರಾಮಹೋತ್ಸವದ ಹಿನ್ನೆಲೆ – ಬ್ರಹ್ಮರಥ ಮಂದಿರದಿಂದ ರಥ ಹೊರತರುವ ಮುಹೂರ್ತ- ಕ್ಷೇತ್ರದ ಕಾರಣಿಕಕ್ಕೆ ಮತ್ತೆ ಸಾಕ್ಷಿಯಾದ ಗರುಡಾಗಮನ-ಮಾ.30 ರಾತ್ರಿ ಧ್ವಜಾರೋಹಣ | ಏ.2 – ಬ್ರಹ್ಮ ರಥೋತ್ಸವ

0

ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಾ.29ರಿಂದ ಏ.4ರ ವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.15ರಂದು ಬೆಳಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತಂದು ನಿಲ್ಲಿಸುವ ಕಾರ್ಯಕ್ರಮ ನಡೆಯಿತು.

ಬೆಳಗ್ಗಿನ ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಆರ್ಚಕರಾದ ಕೃಷ್ಣ ಬಡಿಕಿಲ್ಲಾಯರವರು ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ರಥಕ್ಕೆ ಪೂಜೆ ಸಲ್ಲಿಸಿ ತೆಂಗಿನ ಕಾಯಿ ಒಡೆದ ಬಳಿಕ ರಥವನ್ನು ಮಂದಿರದಿಂದ ರಥಬೀದಿಗೆ ತರಲಾಯಿತು. ಈ ಸಂದರ್ಭ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯ, ಸದಸ್ಯರಾದ ಸುಬ್ರಹ್ಮಣ್ಯ ಗೌಡ ಹಣಿಯೂರು, ಸುದೀರ್ ಪ್ರಸಾದ್ ಆನಾಜೆ, ಕೇಶವ ಪೆಲತ್ತಡಿ, ಸರೋಜಿನಿ ಆರ್ಕ, ಯಶೋದ ಹೊಸವೊಕ್ಲು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಕ್ಷೇತ್ರದ ಕಾರಣಿಕಕ್ಕೆ ಮತ್ತೆ ಸಾಕ್ಷಿಯಾದ ಗರುಡಾಗಮನ:
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಬ್ರಹ್ಮರಥವನ್ನು ರಥಮಂದಿರದಿಂದ ಹೊರ ತರುವ ಪ್ರಕ್ರಿಯೆ ಅಂತಿಮ ಹಂತ ತಲುಪುತ್ತಿದ್ದಂತೆ ಆಕಾಶದಲ್ಲಿ ಗರುಡನ ಹಾರಾಟ ಕಂಡುಬಂತು. ಮೇಲ್ಬಾಗದಲ್ಲಿ ಮೂರು ಸುತ್ತು ಹಾರಾಟ ನಡೆಸಿದ ಗರುಡಗಳು ಆ ಬಳಿಕ ಕಣ್ಮರೆಯಾಯಿತು. ವರುಷಗಳ ಹಿಂದೆ ಬ್ರಹ್ಮ ರಥ ಮಂದಿರದಿಂದ ರಥವನ್ನು ಹೊರತರುವ ಸಂದರ್ಭ ಹಾಗೂ ಬ್ರಹ್ಮ ರಥೋತ್ಸವದ ದಿನ ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿಯ ಸಮಯ ಸಮೀಪಿಸುತ್ತಿದ್ದಂತೆ ತಂತ್ರಿ ವರ್ಗದವರು ಧ್ವಜಸ್ಥಂಭದ ಬಳಿ ಪೂಜೆ ನೆರವೇರಿಸುತ್ತಿದ್ದಂತೆ ಧ್ವಜಸ್ಥಂಭದ ಮೇಲ್ಭಾಗ ಆಕಾಶದಲ್ಲಿ ಗರುಡ ಕಂಡು ಬಂದಿತ್ತು. ಅದಕ್ಕಿಂತ ಮೊದಲು ಕ್ಷೇತ್ರದಲ್ಲಿ ಧ್ವಜಸ್ಥಂಭ ನಿಲ್ಲಿಸುವಾಗ ಕಾರ್ಯ ನಡೆಯುತ್ತಿದ್ದಾಗ ಹಾಗೂ ಬ್ರಹ್ಮರಥದ ಪುರಪ್ರವೇಶ ನಡೆದು ಭೂಸ್ಪರ್ಶ ನಡೆದಾಗಲೂ ದೇವಾಲಯದ ಆಕಾಶದಲ್ಲಿ ಗರುಡನ ಹಾರಾಟ ಕಂಡುಬಂದಿತ್ತು.

ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ನಡೆಸಿದ ವೇಳೆಯೂ ಈ ಗರುಡನ ಬಗೆಗಿನ ವಿಚಾರಗಳು ಬಂದಿತ್ತು. ಪ್ರಾರಂಭದಲ್ಲಿ ಧ್ವಜಸ್ಥಂಭ ನಿಲ್ಲಿಸುವ ವೇಳೆ, ಆ ಬಳಿಕ ಬ್ರಹ್ಮ ರಥದ ಭೂಸ್ಪರ್ಶದ ವೇಳೆ, ಬಳಿಕ ದೇವರ ದರ್ಶನ ಬಲಿ ಸಂದರ್ಭದಲ್ಲಿ, ಕಳೆದ ಭಾರಿಯೂ ಬ್ರಹ್ಮರಥ ರಥದ ಮಂದಿರದಿಂದ ಹೊರತಂದು ರಥಬೀದಿಯಲ್ಲಿ ನಿಲ್ಲಿಸಿದ ವೇಳೆ ಹಾಗೂ ಬ್ರಹ್ಮರಥೋತ್ಸವದ ದಿನ ಗರುಡಾಗಮನವಾಗಿತ್ತು. ಇದೀಗ ಈ ಭಾರಿಯ ಬ್ರಹ್ಮರಥ ರಥದ ಮಂದಿರದಿಂದ ಹೊರತಂದು ರಥಬೀದಿಯಲ್ಲಿ ನಿಲ್ಲಿಸಿದ ವೇಳೆ ಗರುಡಾಗಮನ ಆಗಿರುವುದು ಭಕ್ತರಲ್ಲಿ ಭಯಭಕ್ತಿ ಹುಟ್ಟಿಸಿದಲ್ಲದೇ ಕ್ಷೇತ್ರದ ಕಾರಣಿಕತೆಯ ನಂಬಿಕೆಗೆ ಇನ್ನಷ್ಟು ಪುಷ್ಟಿನೀಡಿದೆ.

ಮಾ.24: ಗೊನೆಮುಹೂರ್ತ
ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಾ.29ರಿಂದ ಏ.4ರ ವರೆಗೆ ನಡೆಯಲಿರುವ ವಾರ್ಷಿಕ ಜಾತ್ರೋಮಹೋತ್ಸವದ ಅಂಗವಾಗಿ ಮಾ.24ರಂದು ಬೆಳಗ್ಗೆ ಕ್ಷೇತ್ರದಲ್ಲಿ ಗೊನೆ ಮುಹೂರ್ತ ನಡೆಯಲಿದೆ.

LEAVE A REPLY

Please enter your comment!
Please enter your name here