ಎ.9-12: ಇತಿಹಾಸ ಪ್ರಸಿದ್ಧ ಹನುಮಗಿರಿ ಬ್ರಹ್ಮಕಲಶೋತ್ಸವ – ಉಪ ಸಮಿತಿಗಳ ಸಮಾಲೋಚನಾ ಸಭೆ

0

ಫಲಾಪೇಕ್ಷೆ ಇಲ್ಲದೇ ಸೇವೆ ಮಾಡಿದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ: ನಳಿನ್ ಕುಮಾರ್ ಕಟೀಲ್


ಪುತ್ತೂರು: ದಕ್ಷಿಣ ಭಾರತದ ಇತಿಹಾಸದಲ್ಲೇ ಅತ್ಯಂತ ಕಾರಣಿಕತೆಯ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಸ್ವಾಮಿ ಕ್ಷೇತ್ರವಾಗಿರುವ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ‘ಹನುಮಗಿರಿ ಬ್ರಹ್ಮಕಲಶೋತ್ಸವ’ವು ವಿವಿಧ ಧಾರ್ಮಿಕ, ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ.9 ರಿಂದ ಆರಂಭಗೊಂಡು 12 ರ ತನಕ ವಿಜೃಂಭಣೆಯಿಂದ ಜರಗಲಿದೆ. ಬ್ರಹ್ಮಕಲಶೋತ್ಸವ ಸಮಿತಿಯ ಉಪ ಸಮಿತಿಗಳ ಸಮಾಲೋಚನಾ ಸಭೆಯು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರ ಅಧ್ಯಕ್ಷತೆಯಲ್ಲಿ ಮಾ.16 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.


ಶ್ರೀಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಹನುಮಗಿರಿ ಬ್ರಹ್ಮಕಲಶೋತ್ಸವದಲ್ಲಿ ವಿಶೇಷವಾಗಿ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನಡೆಯಲಿದ್ದು ಶ್ರೀ ಕೋದಂಡರಾಮ ದೇವರಿಗೆ 1008 ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೇ ಶ್ರೀ ಪಂಚಮುಖಿ ಆಂಜನೇಯ ದೇವರಿಗೆ 1008 ಕಲಶ ಸಹಿತ ಕಲಶಾಭಿಷೇಕ ನಡೆಯಲಿದೆ. ಕೋಟಿ ಶ್ರೀರಾಮ ತಾರಕ ಜಪ, ಯಜ್ಞ, ಯಾಗವು ವೈಧಿಕ ವಿದ್ವಾಂಸರಾದ ವೇದಮೂರ್ತಿ ಸತ್ಯಕೃಷ್ಣ ಭಟ್ ಮಂಗಳೂರು ಇವರಿಂದ ನಡೆಯಲಿದೆ. ಶ್ರೀ ಕೋದಂಡರಾಮ ದೇವರಿಗೆ ಹಾಗೂ ಶ್ರೀ ಪಂಚಮುಖಿ ಆಂಜನೇಯ ದೇವರಿಗೆ ಭಕ್ತರಿಂದ ಲಕ್ಷೋತ್ತರ ನಾರಿಕೇಳ ಸಮರ್ಪಣೆ ನಡೆಯಲಿದೆ. ವಿಶೇಷವಾಗಿ ಅಯೋಧ್ಯೆಯಿಂದ ಶ್ರೀ ರಾಮ ಜ್ಯೋತಿ ಹಾಗೇ ಕೊಪ್ಪಳದ ಗಂಗಾವತಿಯ ಅಂಜನಾದ್ರಿಯಿಂದ ಆಂಜನೇಯ ಜ್ಯೋತಿಯು ಹನುಮಗಿರಿಗೆ ಬರಲಿದೆ. ಭಕ್ತರಿಗೆ ಗಂಗಾ ಜಲ ಮತ್ತು ಅಯೋಧ್ಯೆಯಿಂದ ತಂದ ಮೃತ್ತಿಕೆಯನ್ನು ಪ್ರಸಾದ ರೂಪದಲ್ಲಿ ನೀಡಲಿದ್ದೇವೆ. ಪ್ರತಿ ದಿನ ಭಜನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಈಗಾಗಲೇ 180 ತಂಡ ಭಜನಾ ನೋಂದಾವಣೆ ಆಗಿದೆ. ಕುಣಿತ ಭಜನೆಯು ನಡೆಯಲಿದೆ. ಶ್ರೀರಾಮ ತಾರಕ ಯಾಗವು 10 ಕುಂಡದಲ್ಲಿ ನಡೆಯಲಿದ್ದು ಪ್ರತಿ ಕುಂಡದಲ್ಲಿ 10 ಮಂದಿ ವೈಧಿಕರಿರಲಿದ್ದಾರೆ. ಯಾಗಕ್ಕೆ ಅಗ್ನಿಯನ್ನು ಅರನಿಮಥನದಿಂದ ಜನನಿಸುವ ಮೂಲಕ ಅಗ್ನಿ ಸ್ಪರ್ಶ ಮಾಡುವ ಕಾರ್ಯ ನಡೆಯಲಿದೆ. ಬ್ರಹ್ಮಕಲಶೋತ್ಸವದಲ್ಲಿ ಗೀತಾಪಾರಾಯಣ ಹಾಗೂ ವಿಷ್ಣು ಸಹಸ್ರನಾಮ ಪಠಣ ಕೂಡ ನಡೆಯಲಿದೆ ಎಂದು ಅಚ್ಚುತ ಮೂಡೆತ್ತಾಯವರು ಮಾಹಿತಿ ನೀಡಿದರು.


ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರು ಮಾತನಾಡಿ, ಕರಾವಳಿ ಭಾಗದ ಜನರಿಗೆ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಗೊಳಿಸುವ ಕಾರ್ಯ ನಿರಂತರವಾಗಿ ನಡೆಸುತ್ತಾರೆ. ಬ್ರಹ್ಮಕಲಶೋತ್ಸವದ ಕಾರ್ಯಕ್ರಮ ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ರನ್ನು ಸೇರಿಸಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ನಿರ್ಧಾರದಂತೆ ಕಾರ್ಯ ಗಳು ನಡೆಯುತ್ತದೆ.ಸಮಿತಿ ಗಳ ಕರ್ತವ್ಯ ಮತ್ತು ಜವಾಬ್ದಾರಿ ಗಳ ಬಗ್ಗೆ ಮಾಹಿತಿ ನೀಡಿದರು.ದೇವರ ಸೇವೆ ಮಾಡುವ ಭಾಗ್ಯ ನಮಗೆಲ್ಲರಿಗೂ ಸಿಕ್ಕಿದೆ.ಯಾವುದೇ ಫಲಾಪೇಕ್ಷೆ ಇಲ್ಲದೇ ಸೇವೆ ಮಾಡಿದರೆ ಭಗವಂತ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು. ಈಗಾಗಲೇ 30 ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಉಪ ಸಮಿತಿಗಳಿಗೆ ಸಂಚಾಲಕರು, ಅಧ್ಯಕ್ಷರು ಸೇರಿದಂತೆ ಸದಸ್ಯರುಗಳನ್ನು ಸೇರಿಸುವ ಕೆಲಸ ಆಗುತ್ತಿದ್ದು ಮುಂದೆ ಯಾವ ರೀತಿಯಲ್ಲಿ ಈ ಸಮಿತಿಗಳ ಕಾರ್ಯ ವೈಖರಿ ನಡೆಯುವ ಬಗ್ಗೆ ನಿರಂತರ ಸಭೆಗಳನ್ನು ನಡೆಸಿ ಸಹಕರಿಸುವಂತೆ ಕೇಳಿಕೊಂಡರು. ಹನುಮಗಿರಿ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುವಲ್ಲಿ ಪ್ರತಿಯೊಂದು ಸಮಿತಿಗಳ ಪದಾಧಿಕಾರಿಗಳು ಸಹಕರಿಸುವಂತೆ ಕೇಳಿಕೊಂಡರು.


ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮತ್ತು ಶ್ರೀರಾಮ ತಾರಕ ಜಪ ಯಜ್ಞದ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಎಸ್.ಎನ್ ಮನ್ಮಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಕ್ಷೇತ್ರದ ಧರ್ಮದರ್ಶಿ ಶಿವರಾಮ್ ಪಿ, ಶಿವರಾಮ್ ಶರ್ಮ ಕತ್ರಿಬೈಲು ಹಾಗೂ ವಿವಿಧ ಸಮಿತಿಗಳ ಸಂಚಾಲಕರು, ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಸಾಂಸ್ಕೃತಿಕ ವೇದಿಕೆ 2 ರ ಸಂಚಾಲಕ ರಾಜೇಂದ್ರ ಪ್ರಸಾದ್ ರೈ ಮೇನಾಲ ಕಾರ್ಯಕ್ರಮ ನಿರೂಪಿಸಿದರು. ಸಾಮಾಜಿಕ ಜಾಲತಾಣದ ಸಂಚಾಲಕ ಹರಿಪ್ರಸಾದ್ ವಂದಿಸಿದರು.


ಫೈಲ್, ಪುಸ್ತಕ ಹಸ್ತಾಂತರ
ಬ್ರಹ್ಮಕಲಶೋತ್ಸವ ಸಮಿತಗಳ ಉಪ ಸಮಿತಿಗಳ ಸಂಚಾಲಕರು, ಪದಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ಫೈಲ್ ಮತ್ತು ಪುಸ್ತಕ ಹಾಗೂ ದೂರವಾಣಿ ಸಂಖ್ಯೆಗಳಿರುವ ಲಿಸ್ಟ್‌ಗಳನ್ನು ಹಸ್ತಾಂತರ ಮಾಡಲಾಯಿತು.

LEAVE A REPLY

Please enter your comment!
Please enter your name here