






ಶನಿವಾರ ಮತ್ತೆ ಧ್ವಜ ಅಳವಡಿಸುವ ಚಿಂತನೆ ಇದೆ- -ವಿದ್ಯಾ ಎಂ ಕಾಳೆ


ಪುತ್ತೂರು:ರಾಜ್ಯದ 3ನೇ ಅತಿ ಎತ್ತರದ ರಾಷ್ಟ್ರಧ್ವಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, 78 ಮೀ.ಎತ್ತರದ ತ್ರಿವರ್ಣ ಧ್ವಜ ಪುತ್ತೂರಿನಲ್ಲಿ ಲೋಕಾರ್ಪಣೆಗೊಂಡು ಒಂದು ತಿಂಗಳೊಳಗೆ ಮಾ.16ರಂದು ಸುರಿದ ಭಾರೀ ಗಾಳಿ ಮಳೆಗೆ ಧ್ವಜ ತನ್ನ ಸ್ತಂಭದಿಂದ ಕಳಚಿ ಭೂಸ್ಪರ್ಶವಾಗಿರುವ ಕಾರಣದಿಂದ ಮುಂದೆ, ಸುರಕ್ಷತೆಯ ದೃಷ್ಟಿಯಿಂದ ಹವಾಮಾನ ಆಧರಿಸಿ ಅಳವಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆಯಿಂದ ಮಾಹಿತಿ ಲಭ್ಯವಾಗಿದೆ.



ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನೆಲ್ಲಿಕಟ್ಟೆ ಉದ್ಯಾನವನದಲ್ಲಿ ನಿರ್ಮಿಸಲಾದ ರಾಷ್ಟ್ರಧ್ವಜ ಸ್ತಂಭಕ್ಕೆ ಸುಮಾರು 2,4೦೦ ಚದರ ಅಡಿ ವಿಸ್ತೀರ್ಣದ ತ್ರಿವರ್ಣ ಧ್ವಜವನ್ನು ಫೆ.17ರಂದು ಆರೋಹಣ ಮಾಡಲಾಗಿತ್ತು.ದಿನದ 24 ಗಂಟೆಯೂ ಬಾನಂಗಳದಲ್ಲಿ ಹಾರಾಡುತ್ತಿದ್ದ ತ್ರಿವರ್ಣ ಧ್ವಜ ರಾತ್ರಿ ಮಾ.16ರಂದು ಸುರಿದ ಗಾಳಿ ಮಳೆಗೆ ಸ್ತಂಭದಿಂದ ಕಳಚಿ ಭೂಸ್ಪರ್ಶಗೊಂಡಿತ್ತು.ದಾರ ಕಡಿದು ಧ್ವಜ ಭೂಸ್ಪರ್ಶಗೊಂಡಿದೆ ಎಂದೇ ಎಲ್ಲರೂ ಭಾವಿಸಿದ್ದರು.ಘಟನೆ ಸಂದರ್ಭ ಸಂಪೂರ್ಣ ಕತ್ತಲೆ ಆವರಿಸಿದ್ದರಿಂದ ಇದು ಸ್ಪಷ್ಟವಾಗಿ ತಿಳಿಯುತ್ತಿರಲಿಲ್ಲ.ಆದರೆ ದಾರ ಕಡಿಯದೇ ದಾರದಿಂದ ಧ್ವಜವೇ ಬೇರ್ಪಟ್ಟು ಭೂಸ್ಪರ್ಶಗೊಂಡಿರುವುದು ಇದೀಗ ಬೆಳಕಿಗೆ ಬಂದಿದೆ.ನಗರಸಭೆಯಿಂದ ಧ್ವಜವನ್ನು ಸುರಕ್ಷಿತವಾಗಿ ತೆರವು ಮಾಡಲಾಗಿದೆ.ಗಾಳಿಯ ಹೊಡೆತಕ್ಕೆ ಧ್ವಜಕ್ಕೆ ಹಾನಿಯಾಗಿತ್ತು.ಇದೀಗ ಮಳೆಯ ಮುನ್ಸೂಚನೆ ಇರುವುದರಿಂದ ಸ್ವಲ್ಪ ದಿನ ಕಳೆದು ಹವಾಮಾನ ಆಧರಿಸಿ ಮತ್ತೆ ಧ್ವಜಾರೋಹಣ ಮಾಡಲು ನಗರಸಭೆ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಎತ್ತರದ ಧ್ವಜಸ್ತಂಭಗಳಲ್ಲಿ ರಾಷ್ಟ್ರಧ್ವಜಕ್ಕೆ ಹಾನಿ ಸಹಜ:
ಈ ಘಟನೆ ಕುರಿತು ತಾಂತ್ರಿಕ ಪರಿಣಿತರು ಮತ್ತು ಸಂಬಂಧಿಸಿದ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಇಂತಹ ಘಟನೆಗಳು ಎತ್ತರದ ಧ್ವಜಸ್ತಂಭಗಳಲ್ಲಿ ಸಂಭವಿಸುವ ಸಾಧ್ಯತೆ ಅಧಿಕ.ಎತ್ತರದಲ್ಲಿನ ಧ್ವಜಗಳು ನೆಲ ಮಟ್ಟಕ್ಕಿಂತ ಬಹಳ ಹೆಚ್ಚು ಗಾಳಿಯ ಒತ್ತಡಕ್ಕೆ ಒಳಗಾಗುತ್ತದೆ.ವಿಶೇಷವಾಗಿ ಮಳೆಗಾಲದಲ್ಲಿ ಭಾರೀ ಗಾಳಿ ಮತ್ತು ಮಳೆ ಸೇರಿ ಧ್ವಜದ ಬಟ್ಟೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ.ಇದರಿಂದಾಗಿ ಧ್ವಜವು ನಿರಂತರವಾಗಿ ಬಡಿದುಕೊಳ್ಳುವುದರಿಂದ ಅಂಚು ಭಾಗದಲ್ಲಿ ಹರಿಯುವಿಕೆ ಉಂಟಾಗಿ ಹಾನಿಯಾಗುವುದು ಸಹಜ ಪ್ರಕ್ರಿಯೆಯಾಗಿದೆ.ಇದೇ ರೀತಿಯ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ದಾಖಲಾಗಿದೆ.ಹೈದರಾಬಾದ್ನಲ್ಲಿ 291 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಗಾಳಿಯಿಂದ ಧ್ವಜವು ಹಲವು ಬಾರಿ ಹಾನಿಗೊಂಡಿದ್ದು,ಕೆಲವೊಮ್ಮೆ ಎರಡು ತಿಂಗಳೊಳಗೆ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.ಮಂಗಳೂರು ಸೇರಿದಂತೆ ಕಡಲತೀರ ಪ್ರದೇಶಗಳಲ್ಲಿ 80 ಮೀಟರ್ ಧ್ವಜಸ್ತಂಭಗಳಲ್ಲಿ ಮಳೆಗಾಲದಲ್ಲಿ ಧ್ವಜವನ್ನು ತಾತ್ಕಾಲಿಕವಾಗಿ ತೆಗೆದು ಹಾಕುವ ಸಂದರ್ಭಗಳು ಕಂಡು ಬಂದಿದೆ.ಬೆಂಗಳೂರಿನಲ್ಲಿ ಕೂಡಾ ಭಾರೀ ಗಾಳಿಯಿಂದ ಕೆಲವೇ ಗಂಟೆಗಳಲ್ಲಿ ಧ್ವಜ ಹಾನಿಗೊಂಡ ಉದಾಹರಣೆ ಇದೆ.ಇಂತಹ ಧ್ವಜಗಳ ನಿರ್ವಹಣೆ ನಿರಂತರ ಪ್ರಕ್ರಿಯೆಯಾಗಿದ್ದು, ಗಾಳಿ ಒತ್ತಡ ಮತ್ತು ವಸ್ತುಗಳ ದೌರ್ಬಲ್ಯದ ಪರಿಣಾಮವಾಗಿ ಕೆಲವೊಮ್ಮೆ ಕಡಿಮೆ ಅವಧಿಯಲ್ಲಿಯೇ ಬದಲಾವಣೆ ಅಗತ್ಯವಾಗುತ್ತದೆ.ಭಾರತ ಧ್ವಜ ಸಂಹಿತೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ 1971ರಂತೆ ಹಾನಿಗೊಂಡ ಅಥವಾ ಹರಿದು ಬಿದ್ದ ಧ್ವಜವನ್ನು ಹಾರಿಸುವುದು ನಿಷಿದ್ಧವಾಗಿದೆ.ಆದ್ದರಿಂದ ಹಾನಿಯಾದ ಧ್ವಜವನ್ನು ತಕ್ಷಣ ತೆರವುಗೊಳಿಸುವುದು ಕಡ್ಡಾಯ ಕ್ರಮವಾಗಿದೆ.ಹೀಗಾಗಿ ಪುತ್ತೂರಿನಲ್ಲಿ ನಡೆದ ಘಟನೆ ಅಸಾಮಾನ್ಯ ಅಲ್ಲ.ಬದಲಿಗೆ ಎತ್ತರದ ಧ್ವಜಸ್ತಂಭಗಳ ನಿರ್ವಹಣೆಯಲ್ಲಿ ಎದುರಾಗುವ ಸಹಜ ಸವಾಲುಗಳ ಒಂದು ಭಾಗವಾಗಿದೆ ಎಂದು ಪರಿಣಿತರು ತಿಳಿಸಿದ್ದಾರೆ.ಹಾಗಾಗಿ ವದಂತಿಗಳಿಗೆ ಕಿವಿಕೊಡಬಾರದು.ಮುಂದಿನ ಶುಕ್ರವಾರದ ತನಕ ಮಳೆಯ ಮುನ್ಸೂಚನೆ ಇದ್ದು, ಹವಾಮಾನ ಪರಿಶೀಲಿಸಿಕೊಂಡು ಸದ್ಯದಲ್ಲೇ ಹೊಸ ಧ್ವಜವನ್ನು ಸ್ತಂಭಕ್ಕೆ ಅಳವಡಿಸಲಾಗುವುದು ಎಂದು ಪೌರಾಯುಕ್ತ ವಿದ್ಯಾ ಎಂ.ಕಾಳೆ ಅವರು ಸ್ಪಷ್ಟೀಕರಣ ನೀಡಿದ್ದಾರೆ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಪತ್ರಕರ್ತರಿಗೆ ವಾಟ್ಸಪ್ ಮೇಸೆಜ್ ಮಾಡಿ ತಿಳಿಸಿದ್ದಾರೆ.
ರೂ. 4ಲಕ್ಷ ವೆಚ್ಚದ ಧ್ವಜ:
2,4೦೦ ಚದರ ಅಡಿ ವಿಸ್ತೀರ್ಣದ ರಾಷ್ಟ್ರಧ್ವಜ ದಿಲ್ಲಿಯ ಫ್ಲ್ಯಾಗ್ ಕಂಪೆನಿ ತಯಾರಿಸಿ ಕೊಟ್ಟಿದೆ.ಕಂಬವನ್ನು ಛತ್ತೀಸ್ಗಡದ ರಾಜಧಾನಿ ರಾಯ್ಪುರದಿಂದ ತರಿಸಿ ಜೋಡಿಸಲಾಗಿದೆ. ರಾಷ್ಟ್ರಧ್ವಜವೊಂದಕ್ಕೆ ರೂ.40 ಸಾವಿರ ಬೆಲೆಯಿದೆ.ಇಂತಹ 10 ಧ್ವಜಗಳಿಗೆ ರೂ.4 ಲಕ್ಷ ವೆಚ್ಚ ತಗುಲಿದೆ.ನಗರಸಭೆಯಲ್ಲಿ ಇನ್ನೂ 9 ಧ್ವಜಗಳಿವೆ.
ಸ್ತಂಭ ವಾಲಿಲ್ಲ, ದಾರ ಕಡಿದಿಲ್ಲ:
ತ್ರಿವರ್ಣ ಧ್ವಜ ಹಾರಾಡುವ ಸ್ತಂಭ ಸುರಕ್ಷಿತವಾಗಿದೆ.ಅದು ಎಲ್ಲೂ ವಾಲಿಲ್ಲ.ಯಾಕೆಂದರೆ ಅದರ ಫೌಂಡೆಶನ್ ತುಂಬಾ ಆಳವಾಗಿ ಚೆನ್ನಾಗಿ ಮಾಡಿಸಿದ್ದೇವೆ.ಹಾಗಾಗಿ ಸ್ತಂಭ ವಾಲಿದ ವಿಚಾರವೇ ಇಲ್ಲ.ಅದು ಸರಿಯಾಗಿಯೇ ಇದೆ.ಅದೇ ರೀತಿ ಇಲ್ಲಿ ಬೆಲ್ಟ್ ರೋಪ್ ಸಂಪರ್ಕದಿಂದ ಧ್ವಜ ಕಡಿತಗೊಂಡಿರುವುದು ಹೊರತು ರೋಪ್ ತುಂಡಾಗಿಲ್ಲ.ಟೆಂಡರ್ ಕಂಡಿಷನ್ನಲ್ಲಿ ಧ್ವಜಸ್ತಂಭ ಅಳವಡಿಸಿರುವುದು.ಅವರು ವರ್ಷವಿಡೀ 10 ಧ್ವಜ ನೀಡಬೇಕೆಂದಿದೆ.ಅದರಂತೆ ಈಗ 9 ಧ್ವಜ ಇದೆ ಎಂದು ನಗರಸಭೆ ಪೌರಾಯುಕ್ತೆ ವಿದ್ಯಾ ಎಂ.ಕಾಳೆ ತಿಳಿಸಿದ್ದಾರೆ.
ಶನಿವಾರ ಮತ್ತೆ ಧ್ವಜ ಅಳವಡಿಸುವ ಚಿಂತನೆ ಇದೆ
ಹವಾಮಾನ ಮಾಹಿತಿಯಂತೆ ಇನ್ನೂ ಮೂರು ನಾಲ್ಕು ದಿನ ಮಳೆ ಇದೆ.ಈ ನಿಟ್ಟಿನಲ್ಲಿ,ಮುಂದೆ ಹವಾಮಾನವನ್ನು ನೋಡಿಕೊಂಡು ಧ್ವಜ ಅಳವಡಿಸುವ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.ಶನಿವಾರಕ್ಕೆ ಎಲ್ಲಾ ಕ್ಲಿಯರ್ ಆಗಬಹುದು ಎಂಬ ಭರವಸೆ ಇದೆ. ಮಳೆ ಮುಂದುವರಿದರೆ ಮತ್ತೆ ತಡವಾಗಬಹುದು.ಮಳೆಯ ಭಾರ ತಾಳಲಾರದೆ ಧ್ವಜ ಕಳಚಿತ್ತು. ಇಂತಹ ಘಟನೆ ಹಲವು ಕಡೆ ಆಗಿದೆ.ಗಾಳಿಯ ಒತ್ತಡ, ಬಿಸಿಲಿನ ತಾಪಕ್ಕೆ ತೊಂದರೆ ಆಗುತ್ತಿರುತ್ತದೆ.ಆಗ ಬದಲಾಯಿಸುವ ವ್ಯವಸ್ಥೆಯೂ ಇದೆ
-ವಿದ್ಯಾ ಎಂ ಕಾಳೆ, ನಗರಸಭೆ ಆಯುಕ್ತರು










