







ಪುತ್ತೂರು: ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಮತ್ತು ನಾಲ್ಕನೇ ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.



2023 ನ.6ರಂದು ನೆಹರುನಗರದಲ್ಲಿ ರಾತ್ರಿ ವೇಳೆ ಅಕ್ಷಯ್ ಕಲ್ಲೇಗ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಪಡೀಲು ನಿವಾಸಿ ಮನೀಶ್, ಕೃಷ್ಣನಗರದ ಚೇತನ್, ಬನ್ನೂರಿನ ಮಂಜುನಾಥ್ ಯಾನೆ ಹರಿ ಹಾಗೂ ಕೇಶವ ಪಡೀಲ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ಕೊಲೆ ಪ್ರಕರಣದ 3ನೇ ಆರೋಪಿ ಮಂಜುನಾಥ್ ಶೆಣೈ ಮತ್ತು 4ನೇ ಆರೋಪಿ ಕೇಶವ ಅವರಿಗೆ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಸರಿತಾ ಡಿ. ಅವರು ಷರತ್ತುಬದ್ದ ಜಾಮೀನು ಮಂಜೂರುಗೊಳಿಸಿದ್ದಾರೆ.



ನ್ಯಾಯಾಲಯ ವಿಧಿಸಿರುವ ಪ್ರಮುಖ ಷರತ್ತುಗಳು: ತಲಾ 1 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸುವುದು, ಪ್ರಕರಣದ ಸಾಕ್ಷಿಗಳಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಅಥವಾ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು, ವಿಚಾರಣಾ ಸಮಯದಲ್ಲಿ ತಪ್ಪದೇ ನ್ಯಾಯಾಲಯಕ್ಕೆ ಹಾಜರಾಗಬೇಕು.









