







ಪುತ್ತೂರು: ವಿದ್ಯಾರ್ಥಿ ಮನಸ್ಸುಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವಲ್ಲಿ ಆಲಂಕಾರು ಶ್ರೀ ದುರ್ಗಾಂಬಾ ಪ್ರೌಢ ಶಾಲಾ ಶಿಕ್ಷಕ ವೃಂದದವರು ಮಹತ್ತರ ಸಾಧನೆ ಮಾಡಿದ್ದಾರೆ. ಪ್ರೌಢ ಶಾಲೆಯ ಐವರು ವಿದ್ಯಾರ್ಥಿನಿಯರು ತಮ್ಮ ಚೊಚ್ಚಲ ಐದು ಕವನ ಸಂಕಲನ ಕೃತಿಗಳನ್ನು ಲೋಕಾರ್ಪಣೆಗೆ ಸಿದ್ದಗೊಳಿಸಿದ್ದು ಎ.4ರಂದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಭಾವಾಂಕುರ ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆಯುತ್ತಿದೆ. ಬೆಳಿಗ್ಗೆ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪಂಚ ಕೃತಿಗಳ ಲೋಕಾರ್ಪಣಾ ಸಮಾರಂಭ ನಡೆಯಲಿದ್ದು ನಿವೃತ್ತ ಉಪನ್ಯಾಸಕ, ಹಿರಿಯ ಸಾಹಿತಿಗಳಾದ ಪ್ರೊ.ವಿ.ಬಿ.ಅರ್ತಿಕಜೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆ ಸಭಾಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ, ಸುವರ್ಣ ಕನ್ನಡಿಗ ಪುತ್ತೂರು ಉಮೇಶ್ ನಾಯಕ್, ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ, ಶ್ರೀ ದುರ್ಗಾಂಬಾ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿನಿ, ಸಾಹಿತಿ ಜ್ಯೋತಿ ಶೈಲೇಶ್ ಭಾಗವಹಿಸಲಿದ್ದಾರೆ. ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮದ ಬಳಿಕ ವಿವಿಧ ಕಲಾ ಪ್ರದರ್ಶನಗಳು ನಡೆಯಲಿದೆ. ಸಾಹಿತ್ಯಾಭಿಮಾನಿ, ಶಿಕ್ಷಣ ಪ್ರೇಮಿಗಳು ಭಾಹವಹಿಸುವಂತೆ ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರುಗಳು, ಆಡಳಿತಾಧಿಕಾರಿಗಳು, ಮುಖ್ಯಗುರುಗಳು, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರರು, ರಕ್ಷಕ,ಶಿಕ್ಷಕ ಸಂಘ, ಪೂರ್ವ ವಿದ್ಯಾರ್ಥಿ ಸಂಘ, ವಿದ್ಯಾರ್ಥಿ ವೃಂದ ಮತ್ತು ಪೋಷಕರ ಪ್ರಕಟಣೆ ತಿಳಿಸಿದೆ.


ಪಂಚ ಕೃತಿಗಳು
9ನೇ ತರಗತಿಯ ಲಕ್ಷ್ಮೀಲೇಖನ ಬರೆದ‘ಶ್ರೀಲೇಖ’, 10ನೇ ತರಗತಿಯ ಪಲ್ಲವಿ ಕೆ.ಬರೆದ ‘ ತಿರುವು’, 9ನೇ ತರಗತಿಯ ಲಿಖಿತಾ ಬರೆದ ‘ ಕನಸುಗಳ ಹಾರಾಟ’, 10ನೇ ತರಗತಿಯ ದೀಪಿಕಾ ಬರೆದ ‘ ಮನದಾಳದ ರಸಮಂಜರಿ’, 9ನೇ ತರಗತಿಯ ಇಂಚರ ಬರೆದ ‘ ಹನಿ ಹೆಜ್ಜೆ’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಈ ಎಲ್ಲಾ ಐದು ಕೃತಿಗಳು ಕೂಡ ಕವನ ಸಂಕಲನಗಳಾಗಿವೆ ಎನ್ನುವುದು ಮತ್ತೊಂದು ವಿಶೇಷತೆಯಾಗಿದೆ.



ಐವರು ವಿದ್ಯಾರ್ಥಿನಿಯರ ಸಾಹಿತ್ಯ ಸಾಧನೆ
ಶ್ರೀ ದುರ್ಗಾಂಬಾ ಪ್ರೌಢ ಶಾಲೆಯ ಐವರು ವಿದ್ಯಾರ್ಥಿನಿಯರು ಈ ಸಾಧನೆಯನ್ನು ಮಾಡಿದ್ದಾರೆ. ಕನಸುಗಳ ಹಾರಾಟ ಕೃತಿಯನ್ನು ಬರೆದ ಲಿಖಿತಾರವರು ಗಂಗಾಧರ ಮೂಲ್ಯ ಮತ್ತು ಲತಾರವರ ಪುತ್ರಿಯಾಗಿದ್ದಾರೆ. ಮನದಾಳದ ರಸಮಂಜರಿ ಕೃತಿ ಬರೆದ ದೀಪಿಕಾರವರು ವಸಂತ ಮತ್ತು ಶಾರದಾರವರ ಪುತ್ರಿಯಾಗಿದ್ದಾರೆ. ಹನಿ ಹೆಜ್ಜೆ ಕೃತಿ ಬರೆದ ಇಂಚರರವರು ಗುರುವಪ್ಪ ಮತ್ತು ಸೌಮ್ಯರವರ ಪುತ್ರಿಯಾಗಿದ್ದಾರೆ. ಶ್ರೀಲೇಖ ಕೃತಿ ಬರೆದ ಲಕ್ಷ್ಮೀಲೇಖನರವರು ಸುಂದರ ಗೌಡ ಮತ್ತು ಸತ್ಯವತಿಯವರ ಪುತ್ರಿಯಾಗಿದ್ದಾರೆ. ತಿರುವು ಕೃತಿ ಬರೆದ ಪಲ್ಲವಿಯವರು ದಯಾನಂದ ಕುಲಾಲ್ ಮತ್ತು ಸುಮಿತ್ರರವರ ಪುತ್ರಿಯಾಗಿದ್ದಾರೆ.










