







ವಿವಿಧ ಕಲಾ ತಯಾರಿಕೆ, ರಂಗ ಶಿಕ್ಷಣ, ಕಲಾ ಶಿಕ್ಷಣದ ಜೊತೆಗೆ ಮಕ್ಕಳ ಮನೋವಿಕಾಸ


ಪುತ್ತೂರು: ಮಕ್ಕಳ ಚಟುವಟಿಕೆಗಳಿಗೆ ಪೂರಕವಾಗಿರುವ ಪುತ್ತೂರು ಕಲ್ಲಾರೆ ಕಾವೇರಿ ಕಾಂಪ್ಲೆಕ್ಸ್ ನಲ್ಲಿರುವ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ಎ.12 ರಿಂದ 19ರ ತನಕ ಬೇಸಿಗೆ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.



ಶಿಬಿರದಲ್ಲಿ ವಿವಿಧ ಕಲಾ ತಯಾರಿಕೆ, ರಂಗ ಶಿಕ್ಷಣ, ಕಲಾ ಶಿಕ್ಷಣದ ಜೊತೆಗೆ ಮಕ್ಕಳ ಮನೋವಿಕಾಸ ಕುರಿತು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು ಅನುಭವಿ ಸಂಪನ್ಮೂಲ ವ್ಯಕ್ತಿಗಳು ವಿವಿಧ ತರಬೇತಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶಿಬಿರದಲ್ಲಿ ಪಾಪೆಟ್ ತಯಾರಿ, ಹೊಸ ವಿನ್ಯಾಸದ ಅಬ್‌ಸ್ಟ್ರೈಕ್ ಪ್ರಿಂಟ್, ಮನೋವಿಕಾಸ ಆಟಗಳು, ರೇಖಾ ಚಿತ್ರದ ವಿನ್ಯಾಸ ಹಾಗು ಆಟ ಮೊದಲ ಕಾರ್ಯಕ್ರಮವಾಗಿ ನಡೆಯಲಿದ್ದು, ಬಳಿಕ ಏಷ್ಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿರುವ ಗೀತಾ ಲಕ್ಷ್ಮಿ ಕೆದಿಮಾರ್ ಅವರು ಕರೋಕೆಯೊಂದಿಗೆ ಹಾಡುವ ವಿಧಾನ, ವೇದಿಕೆಯಲ್ಲಿ ನಿಲ್ಲುವ ಭಂಗಿ, ಭಯವಿಲ್ಲದೆ ಹಾಡುವ ವಿಧಾನ, ಭಜನೆಗಳು ಹಾಗು ಭಜನೆಗಳ ಮಹತ್ವ ತಿಳಿಸಿಕೊಡಲಿದ್ದಾರೆ. ನೀನಾಸಂನ ರಂಗ ಗಣೇಶ್ ಭೀಮನ ಕೋಣೆ ಅವರು ರಂಗ ಶಿಕ್ಷಣ, ರಂಗ ಗೀತೆಗಳು, ರಂಗ ವಿನ್ಯಾಸಗಳನ್ನು ಹೇಳಿಕೊಡಲಿದ್ದಾರೆ.
ವಿದುಷಿ ಪ್ರಜ್ಞಾಶ್ರೀ ಕೆದಿಮಾರ್, ಸಂಸ್ಥೆಯಲ್ಲಿ ಚಿತ್ರಕಲೆ ಕಲಿತು ವಿದ್ವತ್ ಪಡೆದಿರುವ ವಿದುಷಿ ಲಕ್ಷ್ಮೀ ಯು ಎಮ್, ವಿದ್ವಾನ್ ಗಗನ್, ವಿದುಷಿ ಭುವಿ ವರ್ಣಕುಟೀರ ಅವರು ಲಿಪ್ಟನ್ ಆರ್ಟ್ ಲಿಪ್ಟನ್ ಆರ್ಟ್‌ಗಳ ಕುರಿತು ತರಬೇತಿ ನೀಡಲಿದ್ದಾರೆ. ವಿದುಷಿ ಮೈತ್ರಿ ಅವರು ಯು.ವಿ. ರೆಜಿನ್ ಆರ್ಟ್, ವಿದ್ವಾನ್ ಆರ್ಯನ್ ಆರ್ ಅವರು ನೃತ್ಯ ಹಾಗು ನೃತ್ಯ ರೂಪಕಗಳನ್ನು ಹೇಳಿಕೊಡಲಿದ್ದಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರ್, ಸಂಸ್ಥೆಯ ಉಪ್ಪಿನಂಗಡಿ ಶಾಖೆಯ ಸಂಗೀತ ಶಿಕ್ಷಕಿ ಅನುಷಾ ಅಮ್ಮಣ್ಣಾಯ, ಪೋಷಕರಾದ ಪೂರ್ಣಿಮ ಉರಿಮಜಲು ಅವರು ಉಪಸ್ಥಿತರಿದ್ದರು.










