ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ಶ್ರದ್ಧಾ ಭಕ್ತಿಯ ಗುಡ್‌ಫ್ರೈಡೇ ಆಚರಣೆ

0

ಇಂದು ಯೇಸುಕ್ರಿಸ್ತರ ಪುನರುತ್ಥಾನ ಆಚರಣೆ,ನಾಳೆ ಈಸ್ಟರ್ ಹಬ್ಬ

ಪುತ್ತೂರು: ಯೇಸು ಕ್ರಿಸ್ತರು ಶಿಲುಬೆಯಲ್ಲಿ ತನ್ನ ಪ್ರಾಣವನ್ನು ಅರ್ಪಿಸಿದ ದಿನವಾದ ಶುಭಶುಕ್ರವಾರ “ಗುಡ್ ಫ್ರೈಡೇ” ಆಚರಣೆ ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.


ಶುಭ ಶುಕ್ರವಾರ ಕ್ರೈಸ್ತ ಭಕ್ತಾದಿಗಳಿಗೆ ಒಂದು ಪವಿತ್ರ ಮತ್ತು ಮಹತ್ವದ ದಿನವಾಗಿದೆ. ಏಸು ಕ್ರಿಸ್ತರು ಮನುಜ ಕುಲವನ್ನು ಪಾಪದಿಂದ ವಿಮುಕ್ತಗೊಳಿಸಲು ತನ್ನನ್ನು ತಾನೆ ಶಿಲುಬೆಗೆ ಏರಿದ ದಿನವಾಗಿದೆ. ಶುಭ ಶುಕ್ರವಾರದ ಮಹತ್ವವು ಯೇಸು ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದನ್ನು ಸ್ಮರಿಸುವುದರಲ್ಲಿ ಇದೆ. ಕ್ರೈಸ್ತದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಧ್ಯಾನ ಮತ್ತು ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ. ಜನರು ಉಪವಾಸದಿಂದ ದಿನ ಕಳೆಯುತ್ತಾರೆ ಮತ್ತು ಮೌನದಿಂದ ದೇವರನ್ನು ಸ್ಮರಿಸುತ್ತಾರೆ. ಈ ದಿನವು ದುಃಖದ ದಿನವಾದರೂ, ಯೇಸು ತನ್ನ ಮರಣದ ಮುಖಾಂತರ ಲಭಿಸಿ ಕೊಟ್ಟ ಮೋಕ್ಷದ ಕಾರಣದಿಂದಾಗಿ ಅದನ್ನು ಶುಭ ಶುಕ್ರವಾರ ಎಂದು ಕರೆಯುತ್ತಾರೆ.


ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ಬೆಳಿಗ್ಗೆ ಪ್ರಾರ್ಥನೆ ಬಳಿಕ 7.15ರಿಂದ 8.30ರ ತನಕ ಶಿಲುಬೆ ಹಾದಿಯನ್ನು ಹಮ್ಮಿಕೊಳ್ಳಲಾಯಿತು. ಎಲ್ಲಾ ಕ್ರೈಸ್ತ ಭಕ್ತಾದಿಗಳು ಯೇಸುವಿನ ಕಷ್ಟದ ಹಾದಿಯನ್ನು ಮೆಲುಕು ಹಾಕಿ ಧನ್ಯರಾದರು.


ಸಂಜೆ ನಡೆದ ಪ್ರಾರ್ಥನಾ ವಿಧಿಯಲ್ಲಿ ಚರ್ಚ್ ಪ್ರಧಾನ ಧರ್ಮಗುರು ವಂ| ಲಾರೆನ್ಸ್ ಮಸ್ಕರೇನಸ್, ವಂ| ಮರ್ವಿನ್ ಪ್ರವೀಣ್ ಲೋಬೊರವರು ಯೇಸುವಿನ ಕಷ್ಟ ಮರಣದ ಕಥಾಪ್ರಸಂಗವನ್ನು ರಾಗಭರಿತವಾಗಿ ಓದಿದರು. ವಂ| ಮ್ಯಾಕ್ಸಿಮ್ ಡಿಸೋಜರವರು ಪ್ರವಚನ ನೀಡಿ ಶಿಲುಬೆಯ ಮಹತ್ವವನ್ನು ತಿಳಿಸಿ ಯೇಸು ಸ್ವಾಮಿಯ ಶಿಲಬೆಯ ೭ ಸಂದೇಶಗಳನ್ನು ನೀಡಿದರು. ವಿಶೇಷ ಪ್ರಾರ್ಥನೆ ಮೂಲಕ ಇಡೀ ಪ್ರಪಂಚದಾದ್ಯಂತ ಕ್ಯಾಥೋಲಿಕ್ ಸಮುದಾಯವನ್ನು ನಡೆಸುವ ಪೋಪ್ ಫ್ರಾನ್ಸಿಸ್, ಬಿಷಪ್, ಹಾಗೂ ಎಲ್ಲಾ ಧಾರ್ಮಿಕ ಗುರುಗಳಿಗೆ, ಪ್ರಪಂಚದಾದ್ಯಂತ ದೇಶಗಳನ್ನು ನಡೆಸುವ ಮುಖಂಡರುಗಳಿಗೆ, ಯೇಸು ಕ್ರಿಸ್ತರನ್ನು ನಂಬಿ ಪೂಜಿಸುವ, ನಂಬಿಕೆ ಇಲ್ಲದ, ಪೂಜಿಸಿದ ಮಾನವರ ಒಳಿತಿಗೆ, ಇಡೀ ಮನುಜ ಕುಲಕ್ಕೆ ಒಳ್ಳೆಯದಾಗಲಿ, ಒಳ್ಳೆಯದನ್ನು ಮಾಡಲು ಆ ದೇವರು ಆಶೀರ್ವದಿಸಲಿ ಎಂದು ಆಶಿಸಿದರು. ಎಲ್ಲಾ ಭಕ್ತಾದಿಗಳಿಗೆ ಶಿಲುಬೆಯನ್ನು ಮುಟ್ಟಿ ನಮಸ್ಕರಿಸಲು ಅನುವು ಮಾಡಿ ಕೊಡಲಾಯಿತು. ಈ ಸಮಯದಲ್ಲಿ ಒಟ್ಟುಕೂಡಿದ ಕಾಣಿಕೆ ಹಣವನ್ನು ರೋಗಿಗಳಿಗೆ ಮತ್ತು ಒಂದು ಹೊತ್ತು ಆಹಾರವಿಲ್ಲದ ಬಡಜನರಿಗೆ ಇರಿಸಲಾಯಿತು.

ಮೆರವಣಿಗೆ:
ಯೇಸುಕ್ರಿಸ್ತರ ಪಾರ್ಥೀವ ಶರೀರ ಮತ್ತು ಮೇರಿ ಮಾತೆಯ ಮೂರ್ತಿಯ ಮೌನ ಮೆರವಣಿಗೆ ನಡೆಯಿತು. ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಭಕ್ತಾದಿಗಳು ಯೇಸುವಿನ ಪಾರ್ಥಿವ ಶರೀರವಿರುವ ತೊಟ್ಟಿಲು ಮತ್ತು ದುಃಖ ತಪ್ತ ಮೇರಿ ಮಾತೆಯ ವಿಗ್ರಹವನ್ನು ಚರ್ಚ್ ವಠಾರದಿಂದ ಎಂ.ಟಿ. ರಸ್ತೆಯ ಮೂಲಕ ಕೋರ್ಟ್ ರಸ್ತೆಯಾಗಿ ಚರ್ಚ್ ವಠಾರಕ್ಕೆ ಮೆರವಣಿಗೆ ಮೂಲಕ ತಂದರು. ತದನಂತರ ಭಕ್ತಾದಿಗಳಿಗೆ ವೀಕ್ಷಣೆಗೆ ಅನುವು ಮಾಡಿ ಕೊಟ್ಟು ತೊಟ್ಟಿಲಿಗೆ ಹಾಕಿದ ಹೂಗಳನ್ನು ಭಾಗವಹಿಸಿದ ಕ್ರೈಸ್ತ ಬಾಂಧವರಿಗೆ ನೀಡಲಾಯಿತು. ಕೃಸ್ತಬಾಂಧವರು ಹೂಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಯೇಸಕ್ರಿಸ್ತರ ಕೃಪೆಗೆ ಪಾತ್ರರಾದರು.

ವಂ| ಅಶೋಕ್ ರಾಯನ್ ಕ್ರಾಸ್ತಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಶನ್ ಲಸ್ರಾದೊ, ಪಾಲನಾ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು ಮೆರವಣಿಗೆ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಸಹಕರಿಸಿದರು. ಕ್ರೈಸ್ತ ಭಾಂಧವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here