






ಪುತ್ತೂರು :ಸಂಗೀತ ಕ್ಷೇತ್ರದಲ್ಲಿ ವಿಶೇಷವಾಗಿ ಸುಗಮ ಸಂಗೀತ ಕ್ಷೇತ್ರದಲ್ಲಿ ರಾಜ್ಯದಲ್ಲೇ ಹೆಸರುಗಳಿಸಿರುವ ಪುತ್ತೂರಿನ ಗಾನಸಿರಿ ಕಲಾಕೇಂದ್ರದ 25ನೇ ವರ್ಷ ಸಂಭ್ರಮದ ಗಾನ ನೃತ್ಯ ಸಮ್ಮಿಲನ ಕಾರ್ಯಕ್ರಮವು ಬೆಂಗಳೂರಿನ ಡ್ಯಾನ್ಸ್ ಬೀಟ್ಸ್ ನೃತ್ಯ ಸಂಸ್ಥೆಯ ಸಹಕಾರದೊಂದಿಗೆ ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್ 5ರಂದು ಸಾಯಂಕಾಲ 3:30 ರಿಂದ ರಾತ್ರಿ 8.30 ರವರೆಗೆ ನಡೆಯಲಿದೆ.


ಕಳೆದ 24 ವರ್ಷಗಳಲ್ಲಿ ಡಾ. ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಸಂಸ್ಥೆ 44 ಸಾವಿರ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡಿರುವುದು ರಾಜ್ಯದಲ್ಲೇ ಒಂದು ದಾಖಲೆಯಾಗಿದೆ…



ಕಾರ್ಯಕ್ರಮದಲ್ಲಿ ಕಿರಣ್ ಕುಮಾರ್ ನೇತೃತ್ವದ ಗಾನಸಿರಿ ಗಾಯನ ತಂಡದಿಂದ ಸುಮಧುರ ಸಂಗೀತ ಲಹರಿ ಕಾರ್ಯಕ್ರಮ, ಸಮೂಹ ಗಾನವೈವಿಧ್ಯ ಮತ್ತು ಡ್ಯಾನ್ಸ್ ಬೀಟ್ಸ್ ನೃತ್ಯ ಸಂಸ್ಥೆಯ ಮನಮೋಹಕ ನೃತ್ಯ ಪ್ರದರ್ಶನವು ನಡೆಯಲಿದೆ…
ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ,ಸಾಹಿತ್ಯ, ಶಿಕ್ಷಣ, ನಾಡು-ನುಡಿಗೆ ಸೇವೆ ಸಲ್ಲಿಸಿದ 16 ಜನ ಸಾಧಕರಿಗೆ ಗಾನಸಿರಿ ಕರ್ನಾಟಕ ಭೂಷಣ ಮತ್ತು 12 ಜನ ಪ್ರತಿಭಾನ್ವಿತ ಕಲಾವಿದರಿಗೆ ಗಾನಸಿರಿ ಸಾಧನಾ ಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸುಗಮ ಸಂಗೀತಜ್ಞರು ಡಾ.ಜಯಶ್ರೀ ಅರವಿಂದ್, ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲ ಸಚಿವರಾದ ಡಾ. ಪ್ರಭಾಕರ್ ನೀರ್ ಮಾರ್ಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ಗೌರವ ಸನ್ಮಾನವನ್ನು ಸ್ವೀಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಗಾನಸಿರಿ ಪ್ರಕಟಣೆ ತಿಳಿಸಿದೆ.










