







ಕಾಣಿಯೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕುದ್ಮಾರು ಇಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಬೇಸಿಗೆ ಶಿಬಿರ ಚಿಣ್ಣರ ವೈಭವದ ಸಮಾರೋಪ ಸಮಾರಂಭವು ಏ 7ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದೇವರಾಜ್ ನೂಜಿ ಅವರು ವಹಿಸಿ, ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲಾ ನಿಕಟ ಪೂರ್ವ ಎಸ್ ಡಿ ಎಂ ಸಿ ಅಧ್ಯಕ್ಷ ಜನಾರ್ಧನ ಗೌಡ ಕೂರ ಅವರು ಮಾತನಾಡಿ, ಒಳ್ಳೆಯ ಹಿರಿಯ ವಿದ್ಯಾರ್ಥಿ ಸಂಘ ಎಸ್ ಡಿ ಎಂ ಸಿ ಯ ಸಹಕಾರವಿದ್ದರೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬಲ್ಲವು. ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.



ಆದಿಶಕ್ತಿ ಲ್ಯಾಡರ್ಸ್ ನ ಮಾಲಕ ಚಂದ್ರಶೇಖರ್ ಬರೆಪ್ಪಾಡಿ ಅವರು ಮಾತನಾಡಿ, ಇನ್ನಷ್ಟು ಮೇರು ವ್ಯಕ್ತಿತ್ವದ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶ್ರೇಷ್ಠ ವ್ಯಕ್ತಿಗಳ ಆಗಮನ ಹಾಗೂ ಸಹಕಾರ ದೊರೆಯಲು ಈ ಶಿಬಿರ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಶ್ರಮಿಸಲಿದೆ ಎಂದರು. ಶ್ರೀ ಕುಶಾಲಪ್ಪ ಬಿ ನಿವೃತ್ತ ಮುಖ್ಯ ಗುರುಗಳು ಕುದ್ಮಾರು ಇವರು ಶಾಲೆ ಹಾಗೂ ವಿದ್ಯಾರ್ಥಿಗಳು ಸಮಾಜದ ಆಸ್ತಿ. ಅವರಿಗಾಗಿ ನೀಡಿದ್ದೆಲ್ಲವೂ ಉತ್ತಮ ಕಾರ್ಯಗಳೇ ಎಂದರು. ಸೀತಾರಾಮ ಕೆ.ಜಿ ಇವರು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲೇಬೇಕಾದ 5 ಜೀವನ ಪಾಠಗಳು ಹಾಗೂ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಶಿಬಿರಗಳು ಜೀವನದುದ್ದಕ್ಕೂ ಸಹಾಯವಾಗುವ ಜೀವನ ಪಾಠಗಳು ಎಂದರು. ಕಡಬ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಕಾರ್ಯದರ್ಶಿ ಶ್ರೀಲತಾ ಅವರು ಮಾತನಾಡಿ, ಶಿಬಿರದ ಆಯೋಜನೆಯ ಹಿಂದಿರುವ ಶಕ್ತಿಗಳು ಕಾರ್ಯಗಳು ಯಶಸ್ಸಿನ ಭಾಗಗಳು, ಇವೆಲ್ಲವೂ ವಿದ್ಯಾರ್ಥಿಗಳಿಗಾಗಿಯೇ ಆದುದರಿಂದ ಊರಿನವರು ಪೋಷಕರು ಇದರ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಅಂಕಲ್ ಸ್ವೀಟ್ ನ ಮಾಲಕ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು. ಎಸ್ ಡಿ ಎಂಸಿ ಉಪಾಧ್ಯಕ್ಷೆ ನವ್ಯಾ ಅನ್ಯಾಡಿ, ಸದಸ್ಯೆ ಪೂರ್ಣಿಮಾ ಕೂಂಕ್ಯ , ಶಿಕ್ಷಕಿ ಪ್ರೇಮಾ ರಾವ್ ಹಾಗೂ ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಅಂಕಲ್ ಸ್ವೀಟ್ಸ್ ನ ಮಾಲಕರಾದ ಕುಶಾಲಪ್ಪ ಗೌಡ ಇವರು ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಲಡ್ಡುವಿನ ವ್ಯವಸ್ಥೆಯನ್ನು ಮಾಡಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಮಿನಿ ವರ್ಗಿಸ್ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಚಂದ್ರ ಬರೆಪ್ಪಾಡಿ ವಂದಿಸಿದರು. ಶಿಕ್ಷಕಿ ವೀಣಾ .ಕೆ . ಕಾರ್ಯಕ್ರಮ ನಿರೂಪಿಸಿದರು.










