ಕುಂತೂರು ಶಾಲಾ ನೂತನ ತರಗತಿ ಕೊಠಡಿಗಳ ಉದ್ಘಾಟನೆ

0

ಇನ್ನೆರಡು ತರಗತಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ; ಭಾಗೀರಥಿ ಮುರುಳ್ಯ

ಕಡಬ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸರಕಾರಿ ಉ.ಹಿ.ಪ್ರಾ.ಶಾಲೆ ಕುಂತೂರು ಕಡಬ ತಾಲೂಕು ಇಲ್ಲಿ ರಾಜ್ಯ ವಲಯ ಮುಂದುವರಿದ ಯೋಜನೆಗಳ ಶಾಲಾ ನೂತನ ತರಗತಿಗಳ ಮತ್ತು ಎಂಆರ್‌ಪಿಎಲ್ ಪ್ರಾಯೋಜಿತ ತರಗತಿ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ ಏ.8ರಂದು ಬೆಳಗ್ಗೆ ನಡೆಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಖಾಸಿಂ ಅವರು ಅಧ್ಯಕ್ಷತೆ ವಹಿಸಿದ್ದರು. ನೂತನ ಕೊಠಡಿಗಳ ಉದ್ಘಾಟಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಎಲ್ಲಾ ಸವಲತ್ತುಗಳೊಂದಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಸರಕಾರಗಳೂ ಶಿಕ್ಷಣಕ್ಕೆ ಒತ್ತು ನೀಡುತ್ತಿವೆ. ಕುಂತೂರು ಶಾಲೆಗೆ ಇನ್ನೆರಡು ತರಗತಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಕಡಬ ಹಾಗೂ ಪುತ್ತೂರು ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು, ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಸಂಸ್ಕಾರಯುತ ಜೀವನದೊಂದಿಗೆ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳುತ್ತಾರೆ ಎಂದು ಹೇಳಿ ಶುಭ ಹಾರೈಸಿದರು. ಇನ್ನೋರ್ವ ಅತಿಥಿ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ.ಅವರು ಮಾತನಾಡಿ, ಈ ಶಾಲೆಯಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲಾಗುವುದು. ಮುಂದೆ ಸರಕಾರಿ ಶಾಲೆಗಳಲ್ಲೂ ಆಂಗ್ಲಮಾಧ್ಯಮ ಶಿಕ್ಷಣ ಸಿಗಲಿದೆ ಎಂದು ಹೇಳಿ ಈ ಬಗ್ಗೆ ಮಾಹಿತಿ ನೀಡಿದರು. ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ ಎ.ವಿ.ಮಾತನಾಡಿ, ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ಉತ್ತಮ ಹೊಂದಾಣಿಕೆಯೊಂದಿಗೆ ಜೀವನ ನಡೆಸುತ್ತಾರೆ ಎಂದರು. ಪೂರ್ವ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ರೈ ಅವರು ಮಾತನಾಡಿ, ನೂತನ ಕೊಠಡಿಯ ಎದುರು ಧ್ವಜಸ್ತಂಭ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಆಲಂಕಾರು ಕ್ಲಸ್ಟರ್ ಸಿಆರ್‌ಪಿ ಪ್ರಕಾಶ್ ಬಾಕಿಲ, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು ಕೆ.ಪಿ., ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಯೂಬ್ ಬಿ.ಕೆ., ಪೆರಾಬೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸಂಧ್ಯಾ ಕೆ., ಸಫ್ವಾನ್ ಚಾರಿಟೇಬಲ್ ಟ್ರಸ್ಟ್‌ನ ಅಬ್ದುಲ್ಲಾ, ಗುತ್ತಿಗೆದಾರ ಮುಹಮ್ಮದ್ ಸಿನಾನ್, ಶಾಲಾ ನಾಯಕಿ ರಿಷಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ಸುಚೇತಾಕುಮಾರಿ ಬಿ.ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ನೀಲಮ್ಮ ವಂದಿಸಿದರು. ಜಿಪಿಟಿ ಶಿಕ್ಷಕಿ ವಿದ್ಯಾಮಂಜುಳಾ ಪಿ.ಆರ್. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸುಮಿತ್ರಾ, ಅನ್ನಮ್ಮ ಪಿ.ವಿ., ಶ್ರುತಿ ಬಿ.ಹೆಚ್., ನವ್ಯ, ಫಾತಿಮತ್ ಸಿಮ್ರಾನ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾ.ಪಂ.ಸಿಬ್ಬಂದಿಗಳು, ಗ್ರಂಥಪಾಲಕರು, ಮೆಸ್ಕಾಂ ಸಿಬ್ಬಂದಿಗಳು, ಕ್ಲಸ್ಟರ್‌ನ ವಿವಿಧ ಶಾಲೆಗಳ ಅಧ್ಯಾಪಕರು, ಪೋಷಕರು, ಅಡುಗೆ ಸಿಬ್ಬಂದಿಗಳು, ಮಕ್ಕಳು, ಊರವರು ಪಾಲ್ಗೊಂಡಿದ್ದರು.



ಸನ್ಮಾನ;
ಸಫ್ವಾನ್ ಚಾರಿಟೇಬಲ್ ಟ್ರಸ್ಟ್‌ನ ಅಬ್ದುಲ್ಲಾ ಸಫ್ವಾನ್ ಹಾಗೂ ಗುತ್ತಿಗೆದಾರ ಮುಹಮ್ಮದ್ ಸಿನಾನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here