ಮುದ್ಯ ಪಾರಂತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ- ಪಂಚಕುಂಡಗಳಲ್ಲಿ ಶಿವಪಂಚಾಕ್ಷರೀ ಯಜ್ಞ | ಭಜನೆ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮ

0

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮುದ್ಯ ಪಾರಂತಿ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ 4ನೇ ದಿನವಾದ ಏ.10ರಂದು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.


ಬೆಳಗ್ಗೆ 5.30ರಿಂದ ಉಷ:ಪೂಜೆ, ಗಣಪತಿ ಹೋಮ, ಅಂಕುರ ಪೂಜೆ, ಸ್ವಶಾಂತಿ ಹೋಮ, ಚೋರಶಾಂತಿ ಹೋಮ, ಶ್ವಾನ ಶಾಂತಿಹೋಮ, ಅದ್ಬುತ ಶಾಂತಿ ಹೋಮ, ಹೋಮ ಕಲಶಾಭಿಷೇಕ, ನಾಗಪ್ರತಿಷ್ಠೆ, ಶ್ರೀ ಮಹಾಗಣಪತಿ ಹೋಮ, ಅಗ್ನಿವಿಹರಣೆ, ಪಂಚಕುಂಡಗಳಲ್ಲಿ ಶಿವಪಂಚಾಕ್ಷರೀ ಯಜ್ಞ ಆರಂಭ, ಪೂರ್ವಾಹ್ನ 11.30ಕ್ಕೆ ಹೋಮಗಳ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ಥಳಶುದ್ಧಿ, ಅಂಕುರಪೂಜೆ, ದುರ್ಗಾಪೂಜೆ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಿತು.

ಭಜನೆ;
ಭಜನಾ ಕಾರ್ಯಕ್ರಮಗಳಿಗೆ ಬೆಳಗ್ಗೆ ಮುಗೇರಡ್ಕ-ಮೊಗ್ರು ಮೂವರು ದೈವಗಳ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಮಣ್ಣ ಗೌಡ ದೇವಸ್ಯ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಬಳಿಕ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಬೆದ್ರೋಡಿ, ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ಶರವೂರು, ಶ್ರೀ ಜನಾರ್ದನ ಸ್ವಾಮಿ ಭಜನಾ ಮಂಡಳಿ ಉಜಿರೆ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಡಬ, ಶ್ರೀ ಗೋಕುಲನಗರ ಮಹಿಳಾ ಭಜನಾ ತಂಡ ಕೊಯಿಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಉಪ್ಪಿನಂಗಡಿ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರರಾದ ನಡುಸಾರು ಉದಯಶಂಕರ ಭಟ್ ಅವರು ದೀಪ ಪ್ರಜ್ವಲಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮುಗೇರಡ್ಕ ಶ್ರೀ ದುರ್ಗಾನುಗ್ರಹ ಭಜನಾ ಮಂಡಳಿ, ಪುಳಿತ್ತಡಿ ದುರ್ಗಾಗಿರಿ ಶ್ರೀ ಶಾರದಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ;
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ವಿಜಿತಾ ಗಣೇಶ್ ಪಂರ್ದಾಜೆ ಇವರ ಪ್ರಾಯೋಜಕತ್ವದಲ್ಲಿ ಕಡಬ ಶ್ರೀ ವಿಶ್ವಮೋಹನ ನೃತ್ಯ ಕಲಾಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಸುಧಾ ಡಿ.ರಾವ್ ಮತ್ತು ಮನೆಯವರ ಪ್ರಾಯೋಜಕತ್ವದಲ್ಲಿ ಪ್ರಸನ್ನ ಬಲ್ಲಾಳ್ ಬೆಂಗಳೂರು ಬಳಗದವರಿಂದ ಮ್ಯಾಂಡಲಿನ್ ವಾದನ ನಡೆಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಅರ್ಚಕರು, ಆಡಳಿತಾಧಿಕಾರಿ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು, ಊರ, ಪರವೂರು ಭಕ್ತಾದಿಗಳು ಪಾಲ್ಗೊಂಡಿದ್ದರು.


ಇಂದು ಕೋಟಿ ಶಿವಪಂಚಾಕ್ಷರೀ ಜಪಯಜ್ಞದ ಪೂರ್ಣಾಹುತಿ;
ಬ್ರಹ್ಮಕಲಶೋತ್ಸವದ 5ನೇ ದಿನವಾದ ಏ.11ರಂದು ಬೆಳಗ್ಗೆ, ಸಂಜೆ ವೈದಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 8 ರಿಂದ ಏಕಬಿಲ್ವಂ ಶಿವಾರ್ಪಣಂ (ಪುರುಷರು ಹಾಗೂ ಮಹಿಳೆಯರಿಂದ ಸಾಮೂಹಿಕ ಬಿಲ್ವಾರ್ಚನೆ) ನಡೆಯಲಿದ್ದು 11.30ಕ್ಕೆ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕೋಟಿ ಶಿವಪಂಚಾಕ್ಷರೀ ಜಪಯಜ್ಞದ ಪೂರ್ಣಾಹುತಿ ನಡೆಯಲಿದೆ. ರಾತ್ರಿ 8 ಗಂಟೆಯಿಂದ ನೀರಕಟ್ಟೆ ನಾರಾಯಣ ಪೂಜಾರಿ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ವಿಠ್ಠಲ್ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here