






ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ತೆಂಕಿಲ ಒಕ್ಕಲಿಗ ನಗರದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಿರ್ಮಾಣಗೊಂಡಿರುವ ಶಾಶ್ವತವಾದ ನೂತನ ಶಿಲಾಮಯ ಕಟ್ಟೆ ಎ.12ರಂದು ಕಲಶ ಪ್ರತಿಷ್ಟೆಯೊಂದಿಗೆ ಸಮರ್ಪಣೆ ನಡೆದಿದ್ದು, ಎ.13ರ ನಸುಕಿನ ಜಾವ ಶ್ರೀ ದೇವರು ಕಟ್ಟೆಯಲ್ಲಿ ಪೂಜೆ ಸ್ವೀಕರಿಸುವ ಮೂಲಕ ಕಟ್ಟೆ ಲೋಕರ್ಪಾಣೆ ಕಾರ್ಯಕ್ರಮ ನಡೆಯಿತು.






ಎ.12ರಂದು ಪ್ರತಿ ವರ್ಷ ರಾತ್ರಿ 11.30ರ ಸುಮಾರಿಗೆ ಶ್ರೀ ದೇವರು ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ಸಮುದಾಯ ಭವನದ ಕಟ್ಟಡದಲ್ಲಿರುವ ಕಟ್ಟೆಯಲ್ಲಿ ಪೂಜೆ ಸ್ವೀಕರಿಸುತ್ತಿದ್ದರು. ಈ ಬಾರಿ ತಡವಾದ್ದರಿಂದ ರಾತ್ರಿ 12 ಗಂಟೆಯ ನಂತರ ಗೌಡ ಸಮುದಾಯ ಭವನದ ಕಟ್ಟೆಗೆ ತಲುಪಿದರು. ಹಾಗಾಗಿ ಎ.13ರ ನಸುಕಿನ ಜಾವ 1.40 ಗಂಟೆಗೆ ಶ್ರೀ ದೇವರು ಕಟ್ಟೆಗೆ ಚಿತ್ತೈಸಿ ಪೂಜೆ ಸ್ವೀಕರಿಸಿದ್ದಾರೆ.

ಭಜನಾ ಕಾರ್ಯಕ್ರಮ ಉದ್ಘಾಟನೆ
ರಾತ್ರಿ ಭಜನಾ ಕಾರ್ಯಕ್ರಮವನ್ನು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ದಂಪತಿ ಉದ್ಘಾಟಿಸಿದರು. ಈ ಸಂದರ್ಭ ಭಜನಾ ತಂಡದ ಪುಟಾಣಿಯೊಬ್ಬರು ದೀಪ ಪ್ರಜ್ವಲಿಸಿದರು. ಶ್ರೀ ದೇವರು ಬರುವ ತನಕ ಸಮುದಾಯ ಭವನದ ಎದುರು ಭಜನಾ ಕಾರ್ಯಕ್ರಮ ಮತ್ತು ನೃತ್ಯ ಭಜನೆ ಕಾರ್ಯಕ್ರಮ ನಡೆಯಿತು.

ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಧರ್ ಗೌಡ ಪಾಣತ್ತಿಲ, ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಗೌರವಾಧ್ಯಕ್ಷರೂ ಮಾಜಿ ಶಾಸಕರು ಆಗಿರುವ ಸಂಜೀವ ಮಠಂದೂರು, ನಿಕಟಪೂರ್ವ ಅಧ್ಯಕ್ಷ ರವಿ ಮುಂಗ್ಲಿಮನೆ, ಯುವ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಮಹಿಳಾ ಸಂಘದ ಅಧ್ಯಕ್ಷೆ ಕುಸುಮಾ ಸಹಿತ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು ಈ ಸಂದರ್ಭ ಉಪಸ್ಥಿತರಿದ್ದರು. ರಾತ್ರಿ ಸಮುದಾಯ ಭವನದಲ್ಲಿ ಅನ್ನಪ್ರಸಾದ ವಿತರಣೆ ನಡೆಯಿತು.











