







ಆಧುನಿಕತೆಯ ಹೆಸರಿನಲ್ಲಿ ಅನಾಚಾರ ಹೆಚ್ಚುತ್ತಿರುವುದು ವಿಷಾಧನೀಯ-ಪುತ್ತೂರು ತಂಙಳ್
ಸಮುದಾಯ ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಜಾಗೃತಿ ಅಗತ್ಯ-ಎಸ್.ಬಿ ದಾರಿಮಿ


ಪುತ್ತೂರು: ಇತಿಹಾಸ ಪ್ರಸಿದ್ದ ಮಾಡನ್ನೂರು ಜುಮಾ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಜಾತಿ ಮತ ಭೇದ ಇಲ್ಲದೇ ಬರುತ್ತಿರುವ ವಿಶ್ವಾಸಿಗಳ ಆಶಾ ಕೇಂದ್ರವಾಗಿರುವ ಶುಹಾದಗಳ ದರ್ಗಾ ಶರೀಫ್‌ನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಎ.12ರಂದು ಉದ್ಘಾಟನೆಗೊಂಡಿತು. ದಾನಿ ಸಿ ಎಚ್ ಅಝೀಝ್ ಹಾಜಿ ಪುಣ್ಯ ಕ್ಷೇತ್ರ ಅಜ್ಮೀರ್‌ನಿಂದ ವಿಶೇಷವಾಗಿ ತರಿಸಿದ ಚಾದರವನ್ನು ಊರ ಪರಪೂರ ಭಕ್ತಾಧಿಗಳ ಸಾನಿಧ್ಯದಲ್ಲಿ ದರ್ಗಾಕ್ಕೆ ಹೊದಿಸಿದ ನಂತರ ಜಮಾಅತ್ ಅಧ್ಯಕ್ಷ ಯೂಸುಪ್ ಹಾಜಿ ದ್ವಜಾರೋಹಣ ನೆರವೇರಿಸಿದರು.




ನಂತರ ವಾಹನ ಪ್ರಚಾರವನ್ನು ಅರಳಡಿ ಇಮಾಂ ಆಮು ಉಸ್ತಾದ್ ಉದ್ಘಾಟಿಸಿದರು. ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಉಪ ಪ್ರಾಂಶುಪಾಲರಾದ ಸಯ್ಯದ್ ಬುರ್ಹಾನ್ ಅಲಿ ತಂಙಳ್ ದುವಾ ನೆರವೇರಿಸಿದರು. ಅಡ್ವಕೆಟ್ ಹನೀಫ್ ಹುದವಿ ನೇತೃತ್ವದಲ್ಲಿ ಮಜ್ಲಿಸುನ್ನೂರು ನಡೆಯಿತು.
ಉರೂಸ್ ಪ್ರಯುಕ್ತ ಎಂಟು ದಿನಗಳ ಧಾರ್ಮಿಕ ಪ್ರವಚನವನ್ನು ಪುತ್ತೂರು ಮುದರ್ರಿಸ್ ಅಹ್ಮದ್ ಪೂಕೋಯ ತಂಙಳ್ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಕೈಂಕರ್ಯಗಳು ಜನರ ಆಧ್ಯಾತ್ಮಿಕ ದಾಹವನ್ನು ತಣಿಸುವ ನಿಟ್ಟಿನಲ್ಲಿ ಸಂಘಟಿಸಿದರೆ ಅದರಿಂದ ಆತ್ಮೀಯ ಚೈತನ್ಯ ಇಮ್ಮಡಿಯಾಗುತ್ತದೆ. ಆದರೆ ಧಾರ್ಮಿಕ ವಿಚಾರಗಳು ಬರೀ ಭೌತಿಕ ಲಾಭದ ಉದ್ದೇಶ ಹೊಂದಿದರೆ ಅದರಿಂದ ಪ್ರಯೋಜನ ಇಲ್ಲ, ಆಧುನಿಕ ಕಾಲಘಟ್ಟದಲ್ಲಿ ಒಂದು ಕಡೆ ಧಾರ್ಮಿಕ ಕಾರ್ಯಗಳು ಹೆಚ್ಚಾದಂತೆ ಮತ್ತೊಂದು ಕಡೆ ಅನಾಚಾರಗಳು ಜಾಸ್ತಿಯಾಗುತ್ತಿದೆ, ಹೆಣ್ಣು ಗಂಡೆಂಬ ಭೇದವಿಲ್ಲದೇ ಅಶ್ಲೀಲತೆ ಜಗತ್ತಲ್ಲಿ ತುಂಬಿ ಹೋಗಿದೆ, ಇದರ ಪರಿಣಾಮ ಅತ್ಯಾಚಾರ, ಪೀಡನೆ, ಕೊಲೆ ಕೇಸುಗಳು ಮಾಮೂಲಿಯಾಗಿ ಬಿಟ್ಟಿದೆ ಎಂದು ಹೇಳಿದರು.
ಸಮುದಾಯ ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಜಾಗೃತಿ ಅಗತ್ಯ-ಎಸ್.ಬಿ ದಾರಿಮಿ
ಸಮುದಾಯ ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಹಾರ ಎಂಬ ವಿಚಾರದಲ್ಲಿ ಮುಖ್ಯ ಪ್ರಭಾಷಣ ನಡೆಸಿದ ಮಾಡನ್ನೂರು ಜುಮಾ ಮಸೀದಿಯ ಖತೀಬ್ ಹಾಜಿ ಎಸ್ ಬಿ ಮುಹಮ್ಮದ್ ದಾರಿಮಿ ಉಪ್ಪಿನಂಗಡಿ ಮಾತನಾಡಿ ಸಮಸ್ಯೆಗಳು ಎಲ್ಲಾ ಸಮುದಾಯದಲ್ಲಿ ಇರುವಂತೆಯೇ ಅಲ್ಪ ಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯದಲ್ಲೂ ಇದೆ. ಆದರೆ ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರ ಆಗಬೇಕಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರ ಹಿಂದುಳಿಯುವಿಕೆ ನಿರಂತರ ಜಾಗೃತಿಯಿಂದ ಸರಿಪಡಿಸಬಹುದು. ರಾಜಕೀಯವಾಗಿ ಮುಸ್ಲಿಮರಿಗೆ ಭಾರತದಲ್ಲಿ ಸಮಸ್ಯೆ ಇದೆ. ಆದಾಗ್ಯೂ ಇತರ ಕೆಲವು ಮುಸ್ಲಿಂ ದೇಶಗಳಿಗೆ ಹೋಲಿಸಿ ನೋಡಿದರೆ ಭಾರತೀಯ ಮುಸ್ಲಿಮರು ಕ್ಷೇಮವಾಗಿದ್ದಾರೆ, ಇತರ ಸಮುದಾಯದ ಮಹಿಳೆಯರನ್ನು ಪ್ರೀತಿಸಿ ಮದುವೆ ಆಗುವುದಕ್ಕೆ ಇಸ್ಲಾಮಿನಲ್ಲಿ ಆಸ್ಪದವಿಲ್ಲ. ಅಪರೂಪದ ಇಂತಹ ಘಟನೆಗಳನ್ನು ಲವ್ ಜಿಹಾದ್ ಎಂದು ಹೆಸರಿಟ್ಟು ಇಡೀ ಮುಸ್ಲಿಂ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವ ರಾಜಕಾರಣ ಇಲ್ಲಿ ನಡೆಯುತ್ತಿರುವಾಗ ಅಂತವರಿಗೆ ಅಸ್ತ್ರ ಒದಗಿಸುವ ಕೆಲಸ ಯಾರೂ ಮಾಡಬಾರದು ಎಂದು ಅವರು ಹೇಳಿದರು.
ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. ನೂರುಲ್ ಹುದಾದ ಮ್ಯಾನೇಜರ್ ಖಲೀಲ್ ಅರ್ಷದಿ ಸ್ವಾಗತಿಸಿದರು. ಕಾರ್ಯದರ್ಶಿ ಬಿ ಎಂ ಅಬ್ದುಲ್ಲಾ , ಕೋಶಾಧಿಕಾರಿ ಖಾದರ್ ಉಸ್ತಾದ್, ಫ್ಯಾಮಿಲಿ ಹಮೀದ್ ಮಾಡಾವು, ಇಬ್ರಾಹಿಂ ಕ್ಯಾಂಟೀನ್, ಕೆಕೆ ಇಬ್ರಾಹಿಂ ಹಾಜಿ, ನೆಕ್ಕರೆ ಇಸ್ಮಾಯಿಲ್ ಹಾಜಿ, ಶಂಸುದ್ದೀನ್ ದಾರಿಮಿ, ಶುಕೂರ್ ದಾರಿಮಿ ಉಪಸ್ಥಿತರಿದ್ದರು. ಮಮ್ಮುಞಿ ಮುಸ್ಲಿಯಾರ್ ತಂಡದಿಂದ ದಫ್ ಪ್ರದರ್ಶನ ನಡೆಯಿತು.










