






ಪ್ರಾಮಾಣಿಕತೆ ಮತ್ತು ಪರಿಶ್ರಮ ಇದ್ದಲ್ಲಿ ಯಶಸ್ಸು ಲಭಿಸುತ್ತದೆ –ಎಸ್. ಆರ್. ಸತೀಶ್ಚಂದ್ರ


ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2026-27ರ ಆರ್ಥಿಕ ವರ್ಷದ ವಾರ್ಷಿಕ ಕ್ರಿಯಾಯೋಜನಾ ಸಭೆಯು ಏ.14ರಂದು ಮಂಗಳೂರಿನ ಬೊಕ್ಕಪಟ್ಣದಲ್ಲಿರುವ ಅಬ್ಬಕ್ಕ ರಾಣಿ ಕ್ರೂಸ್ನಲ್ಲಿ ಸಹಕಾರಿಯ ಅಧ್ಯಕ್ಷರಾದ ಸಹಕಾರ ರತ್ನ ಎಸ್.ಆರ್.ಸತೀಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ನಿರ್ದೇಶಕರ ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮೀನುಗಳಿಗೆ ಆಹಾರ ನೀಡುವ ಮೂಲಕ ಉದ್ಘಾಟಿಸಲಾಯಿತು.



ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ವಸಂತ ನಾಯಕ್ ಎ ಇವರು ಸಹಕಾರಿಯ ಸಾಧನೆಗೆ ಕಾರಣಿಕರ್ತರಾದ, ಸೂಕ್ತ ಮಾರ್ಗದರ್ಶನ ನೀಡಿದ ಆಡಳಿತ ಮಂಡಲಿ, ದಕ್ಷ ಸಿಬ್ಬಂದಿ ವರ್ಗ, ಲೆಕ್ಕಪರಿಶೋಧಕರು ಹಾಗೂ ಸದಸ್ಯರಿಗೆ ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸಿ, ಮುಂದಿನ 2026-27ನೇ ಆರ್ಥಿಕ ವರ್ಷದಲ್ಲಿಯೂ ಗುರಿ ಮೀರಿದ ಸಾಧನೆಯನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
2025-26ರ ಆರ್ಥಿಕ ವರ್ಷದಲ್ಲಿ ಗುರಿ ಮೀರಿ ಸಾಧನೆ ಮಾಡಿದ ಸಹಕಾರಿಯ ಸುಳ್ಯ ಮತ್ತು ಬಿ.ಸಿ.ರೋಡು ಶಾಖೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಸಹಕಾರಿಯ ನೂತನ ವಿವಾಹಿತ ಸಿಬ್ಬಂದಿಗಳಿಗೆ ಶುಭ ಹಾರೈಸಲಾಯಿತು.
ಸಹಕಾರಿಯ ಸಿಬ್ಬಂದಿಗಳಿಗೆ ಶ್ರೀ ಪ್ರಜ್ವಲ್ ಕುಲಾಲ್ ಮತ್ತು ತಂಡದವರಿಂದ ಮನೋರಂಜನಾ ಆಟಗಳೊಂದಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವಾರ್ಷಿಕ ಕ್ರಿಯಾಯೋಜನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹಕಾರಿಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಇವರು ಸಿಬ್ಬಂದಿಗಳ ನಗುಮೊಗದ ಪ್ರಾಮಾಣಿಕ ಮತ್ತು ದಕ್ಷ ಗ್ರಾಹಕ ಸೇವೆಯೇ ಸಂಸ್ಥೆಯ ಶಕ್ತಿ. ಪ್ರಾಮಾಣಿಕತೆ ಮತ್ತು ಪರಿಶ್ರಮಕ್ಕೆ ಯಾವುದೇ ತೇಮಾನವಿಲ್ಲ, ಸಂಸ್ಥೆಯ Balance Sheet ನೋಡಿ ಜನರು ಸಹಕಾರಿಯಲ್ಲಿ ವ್ಯವಹಾರ ಮಾಡುವಂತಾಗಬೇಕು. ಸಹಕಾರಿಯಿಂದ ಗುಣಮಟ್ಟದ ಸಾಲ ಹಂಚಿಕೆಯಾಗುವಂತೆ ಕ್ಷಮತೆಯನ್ನು ಕಾಯ್ದುಕೊಳ್ಳಬೇಕು ಎಂದರು ಹಾಗೂ ರಾಜ್ಯ ಮಟ್ಟದಲ್ಲಿ ಹೆಸರನ್ನು ಪಡೆದಿರುವ ಸರಸ್ವತಿ ಸಹಕಾರಿಯನ್ನು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಬೇಕು. ಇದಕ್ಕಾಗಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು. 2026-27 ಆರ್ಥಿಕ ವರ್ಷದಲ್ಲಿ ಸಹಕಾರಿಯು ರೂ.526ಕೋಟಿ ಠೇವಣಿ, ರೂ.475 ಕೋಟಿ ಸಾಲದೊಂದಿಗೆ ಒಟ್ಟು ರೂ.1001 ಕೋಟಿ ವ್ಯವಹಾರವನ್ನು ದಾಖಲಿಸಿ ರೂ.8.50 ಕೋಟಿಗೂ ಮೀರಿದ ನಿವ್ವಳ ಲಾಭವನ್ನು ದಾಖಲಿಸುವ ಗುರಿಯನ್ನು ಘೋಷಿಸಿದರು ಹಾಗೂ ಸಹಕಾರಿಯು ಈ ಆರ್ಥಿಕ ವರ್ಷದಲ್ಲಿ ಮೂರು ನೂತನ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯನ್ನು ರೂಪಿಸಿದೆ ಅಲ್ಲದೆ, ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮುಖಾಂತರ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡಲು ಯೋಜಿಸಿದೆ ಎಂದರು.
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 2025-26ರ ಆರ್ಥಿಕ ವರ್ಷಾಂತ್ಯಕ್ಕೆ 20 ಶಾಖೆಗಳೊಂದಿಗೆ 52,431 ಸದಸ್ಯರು, ಠೇವಣಿ ರೂ.414 ಕೋಟಿ, ಸಾಲ ರೂ.387 ಕೋಟಿ, ಒಟ್ಟು ರೂ.801 ಕೋಟಿ ವ್ಯವಹಾರ ದಾಖಲಿಸಿ, ರೂ.7.27 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ.
ಕಾರ್ಯಕ್ರಮವನ್ನು ಸಹಕಾರಿಯ ಸಿಬ್ಬಂದಿಗಳಾದ ಶ್ರೀರಂಜಿತಾ ಮತ್ತು ವಿದುಷಿ ವೈಷ್ಣವಿ ಎಸ್. ನಾಯಕ್ ಪ್ರಾರ್ಥನೆ ಮತ್ತು ವಂದೇ ಮಾತರಂ ಗೀತೆ ಹಾಡಿದರು. ಹಿರಿಯ ವ್ಯವಸ್ಥಾಪಕರಾದ ದೇವಿಪ್ರಸಾದ್ ಎ. ಸ್ವಾಗತಿಸಿದರು. ವ್ಯವಸ್ಥಾಪಕ ಶಿವಪ್ರಸಾದ್ ಪಿ ವಂದಿಸಿದರು.










