ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸುಧಾರಿತ ಕೋಳಿ ಸಾಕಾಣಿಕೆ ತರಬೇತಿ

0

ರಾಮಕುಂಜ: ಕೋಳಿ ಸಾಕಾಣಿಕೆಯು ಕೈಗಾರಿಕೋದ್ಯಮವಾಗಿ ಬೆಳೆಯುತ್ತಿದ್ದು ಕೋಳಿ ಸಾಕಾಣಿಕೆದಾರರು ದಿನಂಪ್ರತಿ ಕೋಳಿ ಔಷಧಗಳು, ಲಸಿಕೆ ಹಾಗೂ ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಮಂಜುನಾಥ್ ಪಾಟೀಲ್ ಹೇಳಿದರು.

ಅವರು ಅ.28ರಂದು ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಸುಧಾರಿತ ಕೋಳಿ ಸಾಕಾಣಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಳಿ ಮೊಟ್ಟೆ ಮತ್ತು ಮಾಂಸದಲ್ಲಿರುವ ಪೌಷ್ಠಿಕಾಂಶಗಳ ವಿವರ ಹಾಗೂ ಕೋಳಿ ಫಾರ್ಮ್ ನಲ್ಲಿ ನೊಣಗಳ ನಿಯಂತ್ರಣದ ಸಂಶೋಧನೆಯ ಬಗ್ಗೆಯೂ ಡಾ.ಮಂಜುನಾಥ್ ಪಾಟೀಲ್ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಯಿಲ ಜಾನುವಾರು ಸಂವರ್ಧನ ಮತ್ತು ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪುನೀತ್ ಅವರು, ಗಿರಿರಾಜ ಕೋಳಿ ಮರಿ ಹಾಗೂ ಮೈಸೂರು ನಾಟಿ ಕೋಳಿಗಳ ಲಭ್ಯತೆ ಮತ್ತು ಕೋಳಿಗಳ ಫಾರ್ಮ್ನಲ್ಲಿ ಜೈವಿಕ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ ದ.ಕ.ಜಿಲ್ಲಾ ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ ಗೌಡ ಅವರು ಮಾತನಾಡಿ, ಕೋಳಿ ಫಾರ್ಮ್ ಗಳಲ್ಲಿ ನೊಣಗಳ ವಿಪರೀತ ಹಾವಳಿ ಇದೆ. ಇದರ ನಿಯಂತ್ರಣದ ಬಗ್ಗೆ ಪಶು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಪಶು ವೈದ್ಯಕೀಯ ಇಲಾಖೆಯವರು ಸಂಶೋಧನೆ ಕೈಗೊಳ್ಳಬೇಕೆಂದು ಹೇಳಿದರು.



ಕೋಳಿ ಸಾಕಾಣಿಕೆ ರೈತ ಸಂಘಟನೆ ಕಡಬ ಇದರ ಅಧ್ಯಕ್ಷ ಸೂರ್ಯನಾರಾಯಣ ಮಾತನಾಡಿ, ದ.ಕ.ಜಿಲೆಯಲ್ಲಿ ಆರ್ದ್ರತೆ ಜಾಸ್ತಿ ಆಗಿರುವುದರಿಂದ ಹಾಗೂ ಕೋಳಿ ಫಾರ್ಮ್ ಮಾಡಲು ಸ್ಥಳದ ಕೊರತೆ ಇರುವುದರಿಂದ ನವೀನ ತಂತ್ರಜ್ಞಾನಗಳನ್ನು ರೂಪಿಸಿ ಕೋಳಿ ಸಾಕಾಣಿಕೆದಾರರಿಗೆ ತಲುಪಿಸಲು ಪ್ರಯತ್ನ ಮಾಡಬೇಕೆಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ರವಿಪ್ರಸಾದ್ ಅವರು, ಗುತ್ತಿಗೆ ಆಧಾರದಲ್ಲಿ ಕೋಳಿ ಸಾಕಾಣಿಕೆ ಹಾಗೂ ಅದರ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು.


ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸಾಗರ್ ಆರ್.ಎಸ್., ಡಾ.ಹರಿಣಿ ಕೆ.ಆರ್., ಡಾ.ರಶ್ಮಿ ಕೆ.ಎಂ., ಡಾ.ರಜತ್ ಸಗಾರೆ, ಡಾ.ಸಾಗರ್ ಎಂ., ಡಾ.ತೇಜಸ್ವಿನಿ ಎಂ.ಪಿ., ಡಾ.ವಸುಧರ್ ಭಟ್, ಡಾ.ಯಶಸ್ ಆರ್. ಕುಮಾರ್ ಅವರು ತರಬೇತಿಯ ಸುಧಾರಿತ ಹಾಗೂ ವೈಜ್ಞಾನಿಕ ಕೋಳಿ ಸಾಕಾಣಿಕೆಯ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಪ್ರಾಧ್ಯಾಪಕರಾದ ಡಾ.ಸಾಗರ್ ಎಂ.ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕಿ ಡಾ.ರಶ್ಮಿ ಕೆ.ಎಂ.ಸ್ವಾಗತಿಸಿ, ಡಾ.ವಸುಧರ್ ಭಟ್ ವಂದಿಸಿದರು. ಡಾ.ತೇಜಸ್ವಿನಿ ಎಂ.ಪಿ. ನಿರೂಪಿಸಿದರು.


ಕ್ಷೇತ್ರ ಭೇಟಿ:
ಕಾರ್ಯಕ್ರಮದಲ್ಲಿ ಸುಧಾರಿತ ಕೋಳಿ ಸಾಕಾಣಿಕೆ ಬಗೆಗಿನ ಮಾಹಿತಿ ಒಳಗೊಂಡ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಮಧ್ಯಾಹ್ನ ಪ್ರಗತಿಪರ ಕೋಳಿ ಉದ್ಯಮಿದಾರ ಕೊಯಿಲ ನಿವಾಸಿ ಅಬ್ದುಲ್ ರಜಾಕ್ ಅವರ ಕೋಳಿ ಸಾಕಾಣಿಕ ಘಟಕಕ್ಕೆ ತರಬೇತಿದಾರರಿಗೆ ಕ್ಷೇತ್ರ ಭೇಟಿ ಮಾಡಿಸಿ ಸಾಕಾಣಿಕೆಯ ವಾಸ್ತವಂಶದ ಬಗ್ಗೆ ಮನವರಿಕೆ ಮಾಡಲಾಯಿತು.

LEAVE A REPLY

Please enter your comment!
Please enter your name here