






ಶ್ರೀ ಕ್ಷೇತ್ರದ ಅಭಿವೃದ್ಧಿ ಯುವ ಸಂಘದ ಧ್ಯೇಯ ಶ್ಲಾಘನೀಯ-ರವೀಂದ್ರ ಶೆಟ್ಟಿ ನುಳಿಯಾಲು


ಪುತ್ತೂರು: ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಭಕ್ತರ ಕೂಡುವಿಕೆಯಿಂದ ಅಭಿವೃದ್ಧಿ ಹೊಂದುತ್ತಾ ಇದೆ ಅಲ್ಲದೆ ಜಿಲ್ಲೆಯಲ್ಲಿಯೇ ಕಾರಣಿಕ ಕ್ಷೇತ್ರವೆಂದು ಹೆಸರು ಗಳಿಸಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿಯಲ್ಲಿ ಇಲ್ಲಿನ ಯುವಕರ ಪಾತ್ರವೂ ಇದ್ದು ಶ್ರೀ ಕ್ಷೇತ್ರದ ಅಭಿವೃದ್ಧಿಯೇ ಆಸ್ತಿತ್ವಕ್ಕೆ ಬಂದಿರುವ ಯುವ ಸಂಘದ ಧ್ಯೇಯ ಶ್ಲಾಘನೀಯ ಎಂದು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲುರವರು ಹೇಳಿದರು.




ಎ.14ರಂದು ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಆದಿ ಮೊಗೇರ್ಕಳ ಕೊರಗಜ್ಜ ದೇವಸ್ಥಾನದಲ್ಲಿ ನಡೆದ ಮಕರ ಸಂಕ್ರಮಣ ಆಚರಣೆ ಸಂದರ್ಭ ನಡೆದ ಮಣ್ಣಾಪು ಯುವ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಸಂಘವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರದ ಯುವಕರ ಸಂಘಕ್ಕೆ ಅಜ್ಜನ ದೈವಿಕ ಆಶೀರ್ವಾದ ಇದೆ. ಸಮಾಜಮುಖಿ ಕೆಲಸಗಳಿಗೆ, ಗ್ರಾಮ, ದೇವಸ್ಥಾನದ ಅಭಿವೃದ್ಧಿಗೆ ಸಂಘಟನೆ ಬೇಕು. ಶ್ರೀ ಕ್ಷೇತ್ರದ ಕೊರಗಜ್ಜನ ಸನ್ನಿಧಾನದ ಅಭಿವೃದ್ಧಿಗೆ ಇಲ್ಲಿನ ಹೃದಯವಂತ ಯುವಕರ ತಂಡ ಪಣ ತೊಟ್ಟಿರುವುದು ಉತ್ತಮ ನಡೆ ಎಂದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಕುಂಡ ಮೊಗೇರ, ಅಣ್ಣು ಮಣ್ಣಾಪು, ರವಿ ಮಣ್ಣಾಪು, ಶ್ರೀ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಮಣ್ಣಾಪು, ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ, ನೂತನ ಮಣ್ಣಾಪು ಯುವ ಸಂಘದ ಅಧ್ಯಕ್ಷ ಲೋಕೇಶ್ ಮಣ್ಣಾಪು, ಶ್ರೀರಾಮ್ ಫ್ರೆಂಡ್ಸ್ ಪಂಜಳ ಮುಖ್ಯಸ್ಥ ಚೆನ್ನಪ್ಪ ಗೌಡ ಉಪಸ್ಥಿತರಿದ್ದರು. ಸಮನ್ವಿತಾ ಹಾಗೂ ದೀಕ್ಷಾ ಪ್ರಾರ್ಥಿಸಿದರು. ಯುವ ಸಂಘದ ಸದಸ್ಯರುಗಳಾದ ಬಾಲಚಂದ್ರ, ಲಿಖಿತ್, ಪ್ರತೀಕ್, ಸಚಿನ್, ತರುಣ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಜೀವನ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪಂಜಳ ಶ್ರೀ ರಾಮ್ ಫ್ರೆಂಡ್ಸ್ ಸದಸ್ಯರು, ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು ಸಹಿತ ಹಲವರು ಉಪಸ್ಥಿತರಿದ್ದರು.
ಲೋಗೋ ಅನಾವರಣ..
ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ನೂತನ ಯುವ ಸಂಘದ ಲೋಗೋವನ್ನು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಅನಾವರಣಗೊಳಿಸಿ ಶುಭ ಹಾರೈಸಿದರು.
ಯುವ ಸಂಘದ ಉದ್ಧೇಶ..
ಶ್ರೀ ಕ್ಷೇತ್ರದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುವುದು, ಪ್ರತಿ ವರ್ಷ ದೀಪೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲು ಅದಕ್ಕೆ ಬೇಕಾಗುವ ಖರ್ಚು ವೆಚ್ಚವನ್ನು ಭರಿಸಲು ಹಾಗೂ ಯುವಕರನ್ನು ಒಗ್ಗೂಡಿಸಿ ಒಂದೇ ಮನಸ್ಸಿನಿಂದ ಸೇವೆ ಸಲ್ಲಿಸುವುದು, ಯುವ ಸಂಘವು ಗ್ರಾಮದಲ್ಲಿ ಒಗ್ಗಟ್ಟು ಪ್ರದರ್ಶಿಸಲು, ಜವಾಬ್ದಾರಿ ಮೂಡಿಸಲು, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಮುಖ್ಯ ಪಾತ್ರ ವಹಿಸುತ್ತದೆ. ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂಬ ನುಡಿಮಂತ್ರದೊಂದಿಗೆ ಯುವ ಸಂಘವು ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುವುದು ಉದ್ಧೇಶವಾಗಿದೆ.
9 ಮಂದಿಯ ತಂಡ..
ಶ್ರೀ ಕ್ಷೇತ್ರದ ನೂತನ ಯುವ ಸಂಃದ ಅಧ್ಯಕ್ಷರಾಗಿ ಲೋಕೇಶ್ ಮಣ್ಣಾಪು, ಗೌರವಾಧ್ಯಕ್ಷರಾಗಿ ವಿಶ್ವನಾಥ ಮಣ್ಣಾಪು, ಉಪಾಧ್ಯಕ್ಷರಾಗಿ ರಾಮ್ ಪ್ರಸಾದ್, ಕಾರ್ಯದರ್ಶಿಯಾಗಿ ಸತೀಶ್, ಜೊತೆ ಕಾರ್ಯದರ್ಶಿಯಾಗಿ ಸಚಿನ್, ಕೋಶಾಧಿಕಾರಿಗಳಾಗಿ ಪವನ್ ಹಾಗೂ ಉಮೇಶ್, ಕಾರ್ಯನಿರ್ವಾಹಕರಾಗಿ ಪ್ರವೀಣ್ ಹಾಗೂ ಬಾಲಚಂದ್ರ ಒಳಗೊಂಡ 9 ಮಂದಿಯ ತಂಡ ಕ್ಷೇತ್ರದ ಅಭಿವೃದ್ಧಿಗೆ ಶ್ರಮ ವಹಿಸಲಿದೆ.









